ಕನಕಗಿರಿ: ನರೇಗಾ ಕ್ರಿಯಾಯೋಜನೆ ತಯಾರಿಸಲು ಫಲಾನುಭವಿಗಳು ಬೇಡಿಕೆ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಚಿಕ್ಕಡಂಕನಕಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆಯ 2025-26ನೇ ಸಾಲಿನ ಆಯ-ವ್ಯಯ ತಯಾರಿಸಲು ಕಾರ್ಮಿಕರಿಂದ ಬೇಡಿಕೆ ಪಡೆಯಲಾಗುತ್ತಿದೆ. ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆ ಸಲ್ಲಿಸಬಹುದು. ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ನರೇಗಾ ನೆರವಾಗಿದೆ. ಕೂಲಿಕಾರರಿಗೆ ಕೆಲಸ ನೀಡುವುದರ ಜತೆಗೆ ಆಸ್ತಿಗಳ ಸೃಜನೆ ಆಗುತ್ತಿವೆ ಎಂದರು.
ತಾಪಂ ಇಒ ಕೆ.ರಾಜಶೇಖರ ಮಾತನಾಡಿ, ಉದ್ಯೋಗ ಖಾತ್ರಿ ನಡಿಗೆ, ಸಬಲತೆಯಡೆಗೆ ಅಭಿಯಾನದಡಿ ಕಾರ್ಯಕ್ರಮ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಸಲ್ಲಿಸಿದ ಬೇಡಿಕೆಗಳನ್ನು ವಾರ್ಡ್, ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದು ಸಮಗ್ರ ಕ್ರಿಯಾ ಯೋಜನೆ ತಯಾರಿಸಿ ಜಿಪಂನಿಂದ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ವಿಶ್ವನಾಥ ಮುರುಡಿ, ಗ್ರಾಪಂ ಅಧ್ಯಕ್ಷೆ ನೀಲಮ್ಮ ಬಸವರಾಜ, ಪಿಡಿಒ ಈರಪ್ಪ, ಜೆಇ ಕೊಟ್ರೇಶ, ಐಇಸಿ ಕೋಆರ್ಡಿನೇಟರ್ ಶಿವಕುಮಾರ ಇತರರಿದ್ದರು.