ಕನಕಗಿರಿ: ಪಟ್ಟಣದ ಲಕ್ಷ್ಮೀದೇವಿ ಕೆರೆ ಪಕ್ಕದ ಹಿರೇಹಳ್ಳ ಬಸವೇಶ್ವರ ಜಾತ್ರೆ ಕಡೇ ಶ್ರಾವಣ ಸೋಮವಾರ ನೂರಾರು ಭಕ್ತರ ಸಮ್ಮುಖದಲ್ಲಿ ಸಡಗರದಿಂದ ಜರುಗಿತು.
ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ, ದೇವರ ಮೂರ್ತಿಗೆ ಅಲಂಕಾರ ಮಾಡಲಾಗಿತ್ತು. ಪಟ್ಟಣದಿಂದ ದೇವಸ್ಥಾನದವರೆಗೆ ಪಲ್ಲಕ್ಕಿಯೊಳಗೆ ನಂದಿಕೋಲನ್ನು ತರಲಾಯಿತು. ನಂತರ ನೆರೆದಿದ್ದ ಯುವಕರು ನಂದಿಕೋಲಿಗೆ ಪೂಜೆ ಸಲ್ಲಿಸಿ ನಂದಿಕೋಲು ಹೊತ್ತು ಕುಣಿದರು.
ವಿವಿಧೆಡೆಯಿಂದ ಬಂದಿದ್ದ ಭಕ್ತರು ಬಯಲಿನಲ್ಲಿ ಕುಳಿತು ಮಂಡಾಳು, ಮಿರ್ಚಿ ಸವಿದರು. ಶರಣಪ್ಪ ಭತ್ತದ್, ವಿರೂಪಾಕ್ಷಿ ಆಂಧ್ರ, ಚಂದ್ರು ಹಾದಿಮನಿ, ಮಲ್ಲಪ್ಪ ಗುಗ್ಗಳಶೆಟ್ರ, ಬಸವರಾಜ ಗುಗ್ಗಳಶೆಟ್ರ, ಬಸವರಾಜ ಸಜ್ಜನ್ ಇತರರಿದ್ದರು.