ಕನಕಗಿರಿ: ಇಲ್ಲಿನ ಹಿರೇಹಳ್ಳದ ಬಸವೇಶ್ವರ ದೇವಸ್ಥಾನದ ರಸ್ತೆಯಲ್ಲಿರುವ ಸ್ಮಾರಕದ ಸುತ್ತಲೂ ಕಳೆದ ಮೂರ‌್ನಾಲ್ಕು ದಿನಗಳಿಂದ ನಡೆಯುತ್ತಿರುವ ಸ್ವಚ್ಛತೆಯ ಸಂದರ್ಭದಲ್ಲಿ ಹುದುಗಿ ಹೋಗಿದ್ದ ಬೃಹತ್ ಬೀಸುವ ಕಲ್ಲು ಪತ್ತೆಯಾಗಿದೆ.
ಸಾಮಾನ್ಯವಾಗಿ ಇದನ್ನು ಜನತೆ ಮದ್ದು ಅರಿಯುವ ಕಲ್ಲು ಎಂದು ಕರೆಯುತ್ತಿದ್ದು, ಬೀಸುವ ಕಲ್ಲಿನ ಒಂದು ಭಾಗ ಮಾತ್ರ ಪತ್ತೆಯಾಗಿದೆ. ಇದು ವಿಜಯನಗರೋತ್ತರ ಕಾಲದ ಕುರುಹು ಆಗಿದ್ದು, ಕ್ರಿ.ಶ 16ನೇ ಶತಮಾನಕ್ಕೆ ಸೇರಿದ್ದಾಗಿದೆ. ಶಿಲೆಯ ಎಡ ಮತ್ತು ಬಲ ಭಾಗದಲ್ಲಿ ಕ್ಲಿಪ್‌ಗಳಿವೆ. ಅಲ್ಲದೇ ದೇಗುಲಗಳ ಹಾಗೂ ಸ್ಮಾರಕ ನಿರ್ಮಾಣದಲ್ಲಿ ಸುರಿಕೆ ತಯಾರಿಕೆಗೆ ಈ ಶಿಲೆಯನ್ನು ಬಳಸಲಾಗುತ್ತಿತ್ತು ಎಂದು ಇತಿಹಾಸಕಾರರು ತಿಳಿಸಿದ್ದಾರೆ.
ಇದನ್ನು ಸುರಕ್ಷಿತವಾಗಿ ಎತ್ತಿಟ್ಟಿದ್ದು, ಇನ್ನೊಂದು ಕಲ್ಲು ಹುಡುಕಲಾಗುತ್ತಿದೆ. ಇವೆರಡನ್ನು ಸೇರಿಸಿ ಸಂರಕ್ಷಣೆ ಮಾಡಬೇಕೆನ್ನುವ ಮಾತುಗಳು ಸ್ಮಾರಕಪ್ರಿಯರಿಂದ ಕೇಳಿಬರುತ್ತಿವೆ.
ಸ್ಮಾರಕದ ಬಳಿ ಎರಡು ಕಲ್ಲುಗಳಿದ್ದು, ಅವು ಮುಚ್ಚಿ ಹೋಗಿದ್ದವು. ಇವನ್ನು ಸಾಮಾನ್ಯವಾಗಿ ಮದ್ದು ಅರಿಯುವ ಕಲ್ಲುಗಳು ಎಂದು ಜನ ಕರೆಯುತ್ತಾರೆ. ಆದರೆ, ಬೃಹತ್ ಸೈನ್ಯಕ್ಕೆ ಬೇಕಾದ ಆಹಾರ ತಯಾರಿಕೆಗಾಗಿ ಧಾನ್ಯಗಳನ್ನು ಬೀಸಲು ಬಳಕೆ ಮಾಡಲಾಗುತ್ತಿತ್ತು. ಈ ಎರಡು ಕಲ್ಲುಗಳನ್ನು ಹುಡುಕಿ ಸ್ಮಾರಕದ ಬಳಿ ಸಂರಕ್ಷಣೆ ಮಾಡಬೇಕು.
ಡಾ. ಶರಣಬಸಪ್ಪ ಕೋಲ್ಕಾರ
ಇತಿಹಾಸಕಾರ