ಕನಕಗಿರಿ: ನ್ಯಾಯಾಲಯ ಆರಂಭ ಸಲುವಾಗಿ ಕಟ್ಟಡ ವೀಕ್ಷಿಸಲು ಮಂಗಳವಾರ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾ ನ್ಯಾಯಾಧೀಶರಾದ ಸಿ. ಚಂದ್ರಶೇಖರ ಅವರು ಇಲ್ಲಿನ ಕನಕಾಚಲಪತಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದುಕೊಂಡರು.
ಕನಕಗಿರಿಯನ್ನಾಳಿದ ಗುಜ್ಜಲ ವಂಶದವರ ಆಳ್ವಿಕೆಯಲ್ಲಿ ಪಟ್ಟಣದಲ್ಲಿ 16ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಕನಕಾಚಲಪತಿ ದೇಗುಲದ ಪ್ರಾಂಗಣ ಸುತ್ತಲೂ ಇರುವ ಬ್ರಹ್ಮ, ವಿಷ್ಣು, ಮಹೇಶ್ವರ, ಬಾಲಕೃಷ್ಣ, ಗರುಡ, ಪನ್ನಿದ್ಧರಾಳ್ವರ ಸೇರಿದಂತೆ ವಿವಿಧ ದೇಗುಲಗಳನ್ನು ವೀಕ್ಷಿಸಿದರು.
ಇನ್ನೂ ದೇಗುಲದ ಪಕ್ಕದಲ್ಲಿರುವ ಏಕಶಿಲಾ ಸಂಜೀವಮೂರ್ತಿ, ದೇಗುಲದ ನಿರ್ಮಾಣ ಸೇರಿದಂತೆ ಕನಕಗಿರಿಯನ್ನಾಳಿದ ಪರಸಪ್ಪ, ಉಡಚಪ್ಪ, ರಾಣಿ ಗೌರಮ್ಮನವರ ಮೂರ್ತಿಗಳನ್ನು ವೀಕ್ಷಿಸಿ ಇತಿಹಾಸ ತಿಳಿದುಕೊಂಡರು.
ನ್ಯಾಯಾಲಯ ಸ್ಥಾಪನೆಗೆ ಸ್ಥಳ ಪರಿಶೀಲನೆ:
ಇಲ್ಲಿನ ಎಪಿಎಂಸಿ ಆವರಣದಲ್ಲಿರುವ ಶ್ರಮಿಕರ ಭವನ ಕಟ್ಟಡ ಕೋರ್ಟ್ ಆರಂಭಿಸಲು ಜಿಲ್ಲಾ ನ್ಯಾಯಾಧೀಶರಾದ ಸಿ. ಚಂದ್ರಶೇಖರ ಹಾಗೂ ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಸ್ಥಳ ಪರಿಶೀಲನೆ ನಡೆಸಿದರು. ದೇವಸ್ಥಾನದಿಂದ ನ್ಯಾಯಾಧೀಶರಿಗೆ ಕನಕಾಚಲಪತಿ ಭಾವಚಿತ್ರ ನೀಡಿ ಗೌರವಿಸಲಾಯಿತು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ತಿಳಿಸಿದರು. ಪಿಐ ಎಂ.ಡಿ ಫೈಜುಲ್ಲಾ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ದೇವಸ್ಥಾನ ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ ಇತರರಿದ್ದರು.