ಕನಕಗಿರಿ: ತಾಲೂಕಿನ ಬಂಕಾಪುರ ತೋಳ ಧಾಮದಲ್ಲಿ ತೋಳವೊಂದು 8 ಮರಿಗಳಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ವಿಶ್ವನಾಥ ಮುರುಡಿ ಸೋಮವಾರ ಧಾಮಕ್ಕೆ ಭೇಟಿ ನೀಡಿ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸುಭಾಷ್‌ಚಂದ್ರ ಅವರಿಂದ ತೋಳ ಸೇರಿ ಇತರ ಜೀವ ವೈವಿಧ್ಯ ಹಾಗೂ ಇಲಾಖೆಯ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.
ಅಳಿವಿನ ಅಂಚಿನಲ್ಲಿರುವ ಪ್ರಾಣಿ ತೋಳದ ಸಂತತಿ ರಕ್ಷಣೆ ಜತೆಗೆ ಆಹಾರ ಸರಪಳಿ ಸೃಷ್ಟಿಸಲು ಇಂಥ ಪ್ರಾಣಿಗಳ ರಕ್ಷಣೆ ಗತ್ಯವಾಗಿದ್ದು, ಅತಿ ಹೆಚ್ಚು ತೋಳಗಳ ಪ್ರದೇಶವೆಂದು ಗುರುತಿಸಿ ರಾಜ್ಯದ ಮೊದಲ ತೋಳ ಧಾಮವನ್ನು ತಾಲೂಕಿನ ಬಂಕಾಪುರದಲ್ಲಿ ಆರಂಭಿಸಿರುವುದು ಸಂತಸದ ವಿಚಾರ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೈಗೊಂಡ ಕ್ರಮಗಳ ಬಳಿಕ ತೋಳ 8 ಮರಿಗಳಿಗೆ ಜನ್ಮ ನೀಡಿದ್ದು, ಕ್ಯಾಮರಾದಲ್ಲಿ ಸೆರೆಯಾಗಿದೆ.
ಇಲಾಖೆ ಸಚಿವರು ಸಂತಸ ವ್ಯಕ್ತಪಡಿಸಿದ್ದು, ಪ್ರವಾಸಿ ತಾಣವನ್ನಾಗಿಸಲು ಸ್ಥಳ ವೀಕ್ಷಣೆ ಮಾಡಲಾಗಿದೆ. ಅಧಿಕಾರಿಗಳು ಧಾಮದಲ್ಲಿ ಜನಸಂಚಾರ ನಿಷೇಧಿಸಿರುವ ಕುರಿತು ತಿಳಿಸಿದರು.