ಶಬರಿಮಲೆ ಪ್ರವೇಶಿಸಿದ್ದ ಕನಕದುರ್ಗಾಳನ್ನು ಮನೆಯಿಂದ ಹೊರಕ್ಕೆ ಹಾಕಿದ ಕುಟುಂಬ

ತಿರುವನಂತಪುರ: ಶಬರಿಮಲೆ ಪ್ರವೇಶ ಮಾಡಿದ್ದ 39 ವರ್ಷದ ಕನಕದುರ್ಗಾ ಈಗ ಮನೆಯಿಂದಲೇ ಹೊರಹಾಕಲ್ಪಟ್ಟಿದ್ದು ಆಕೆಗೆ ಸರ್ಕಾರದ ಮನೆಯಲ್ಲಿ ವಾಸಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಕನಕದುರ್ಗಾ ಇಬ್ಬರು ಮಕ್ಕಳ ತಾಯಿ. ಇತ್ತೀಚೆಗೆ ಶಬರಿಮಲೆ ಪ್ರವೇಶ ಮಾಡಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದರು. ಮನೆಯಲ್ಲಿ ಅತ್ತೆ ಕೂಡ ಸಿಟ್ಟಿಗೆದ್ದು ಸೊಸೆಗೆ ಹೊಡೆದಿದ್ದರು. ಗಾಯಗೊಂಡ ಕನಕದುರ್ಗಾರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ಪೊಲೀಸರು ಹಾಗೂ ಜಿಲ್ಲಾ ಅಧಿಕಾರಿಗಳು ಕನಕದುರ್ಗಾ ಕುಟುಂಬದ ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ಅದನ್ನು ಒಪ್ಪದ ಕುಟುಂಬದವರು, ಕನಕದುರ್ಗಾ ಅಯ್ಯಪ್ಪನ ಭಕ್ತರ, ಹಿಂದುಗಳ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.

ಕನಕದುರ್ಗಾ ನಮ್ಮ ಸಮುದಾಯ ತಲೆ ತಗ್ಗಿಸುವಂತೆ ಮಾಡಿದ್ದಾಳೆ. ಲಕ್ಷಾಂತರ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾಳೆ. ಆಕೆ ಪಾಪ ತೊಡೆದುಕೊಂಡು ಬರುವವರೆಗೂ ನಾವು ಅವಳನ್ನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಂದು ಅಮ್ಮಿನಿ( ಕನಕದುರ್ಗಾ ಜತೆ ಶಬರಿಮಲೆ ಪ್ರವೇಶಿಸಿದ್ದ ಮಹಿಳೆ), ಕನಕದುರ್ಗಾ ಬೆಂಬಲಕ್ಕೆ ನಿಂತಿದ್ದು, ಕಾನೂನಾತ್ಮ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.