More

    ಕನಕದಾಸರ ಪ್ರತಿಮೆ ಸ್ಥಾಪನೆಗೆ ನೆರವು ; ಸಂಸದ ಎಸ್. ಮುನಿಸ್ವಾಮಿ ಹೇಳಿಕೆ

    ಕೋಲಾರ : ನಗರದ ಕನಕದಾಸ ವೃತ್ತದಲ್ಲಿ ಕನಕದಾಸರ ಪ್ರತಿಮೆ ಸ್ಥಾಪಿಸಲು ಅಗತ್ಯ ಆರ್ಥಿಕ ನೆರವು ನೀಡುತ್ತೇನೆ. ಮುಂದಿನ ಜಯಂತ್ಯುತ್ಸವದ ವೇಳೆ ಅನಾವರಣಗೊಳಿಸಬೇಕು ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.

    ಜಿಲ್ಲಾ ಕುರುಬರ ಸಂಘದಿಂದ ನಗರದ ಕನಕ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಭಕ್ತ ಕನಕದಾಸರ 533ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಈಗಾಗಲೇ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲು ಸ್ಥಳ ನಿಗದಿಪಡಿಸಿ ಕೆತ್ತನೆ ಕಾರ್ಯ ನಡೆಯುತ್ತಿದೆ. ಅದೇ ರೀತಿ ಕನಕದಾಸರ ಪ್ರತಿಮೆ ಎಷ್ಟು ಅಡಿಯದ್ದು, ಎಲ್ಲಿ ಮಾಡಿಸಬೇಕೆಂದು ನಿರ್ಧರಿಸಿ ಮುಂದುವರಿಯಿರಿ, ಹಣಕಾಸು ವ್ಯವಸ್ಥೆ ಮಾಡುತ್ತೇನೆ. ಮುಂದಿನ ಕನಕ ದಾಸರ ಜಯಂತ್ಯುತ್ಸವದಂದು ಪ್ರತಿಮೆ ಅನಾವರಣಗೊಳಿಸಬೇಕು ಎಂದರು.

    ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಕನಕ ಕನಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಕ್ರಮ ಕೈಗೊಂಡಿದ್ದಾರೆ. ಬೇಡಿಕೆಗಳನ್ನು ಜಿಲ್ಲಾಡಳಿತ, ಜನಪ್ರತಿನಿಧಿಗಳ ಮುಂದಿಟ್ಟು ಸುಮ್ಮನಾಗದೆ ಬೆನ್ನು ಹತ್ತಿ. ಜಮೀನು ಬೇಡಿಕೆ ಸಂಬಂಧ ಗ್ರಾಪಂ ಚುನಾವಣೆ ಬಳಿಕ ಉಸ್ತುವಾರಿ ಸಚಿವರನ್ನು ಒಳಗೊಂಡು ಡಿಸಿ ಜತೆ ಸಭೆ ನಡೆಸೋಣ ಎಂದು ಹೇಳಿದರು.

    ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮುದಾಯ 3 ಲಕ್ಷ ಕುರುಬಸಮುದಾಯದ ಜನಸಂಖ್ಯೆಯಿದ್ದರೂ ಒಗ್ಗಟ್ಟಿನ ಕೊರತೆಯಿಂದ ರಾಜಕೀಯವಾಗಿ ಕಡೆಗಣಿಸಲಾಗುತ್ತಿದೆ. ಭವನಕ್ಕೆ 3.17 ಎಕರೆ ಜಮೀನು ಒದಗಿಸುವಂತೆ ಡಿಸಿ ಅವರಿಗೆ ಕೋರಿಕೊಳ್ಳಲಾಗಿದೆ. ಕನಕದಾಸರ ವೃತ್ತದಲ್ಲಿ ಪ್ರತಿಮೆ ನಿರ್ಮಾಣ ಮಾಡಬೇಕಿದೆ ಎಂದು ಹೇಳಿದರು.

    ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ಸಮಾಜದ ಏಳಿಗೆಗೆ ಎಲ್ಲರೂ ಒಗ್ಗೂಡಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ಯಾವುದೇ ಕಾರ್ಯದಲ್ಲೂ ಯುವಕರು ಮುಂಚೂಣಿಗೆ ಬರಬೇಕು ಎಂದು ಆಶಿಸಿದರು. ಇದಕ್ಕೂ ಮುನ್ನ ಕನಕಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಡಿಸಿ ಸಿ.ಸತ್ಯಭಾಮ, ಪೌರಾಯುಕ್ತ ಶ್ರೀಕಾಂತ್, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಸೇರಿ ಇತರ ಅಧಿಕಾರಿಗಳು ಭಾಗವಹಿಸಿದ್ದರು.

    ಸಂಘದ ರಾಜ್ಯ ನಿರ್ದೇಶಕಿ ಸರಸ್ವತಮ್ಮ ಮಾತನಾಡಿ, ಸಮುದಾಯವನ್ನು ಎಸ್​ಟಿಗೆ ಸೇರಿಸಬೇಕೆಂದು ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಸಮುದಾಯದ ಎಲ್ಲರೂ ಇದಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಜಿಪಂ ಸದಸ್ಯೆ ನಿರ್ಮಲಾ ಅಂಬರೀಷ್, ಸಂಘದ ಜಿಲ್ಲಾಧ್ಯಕ್ಷ ತಂಬಿಹಳ್ಳಿ ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ನಡುಪಳ್ಳಿ ಕೃಷ್ಣಮೂರ್ತಿ, ಕಾರ್ಯದರ್ಶಿ ಜೆ.ಕೆ.ಜಯರಾಂ, ನಗರಸಭೆ ಸದಸ್ಯ ಮಂಜುನಾಥ್, ಮುಖಂಡರಾದ ಜನಾರ್ದನ್, ಕೆ.ಎಂ ಎಂ.ಮಂಜು, ಮು.ರಾಘವೇಂದ್ರ, ಸಾಗರ್, ಜಂಬಾಪುರ ವೆಂಕಟರಮಣ, ಮಹಿಳಾ ಗೌರವಾಧ್ಯಕ್ಷೆ ಯಶೋಧಮ್ಮ, ತಾಲೂಕು ಅಧ್ಯಕ್ಷೆ ಶಾಂತಮ್ಮ ಇತರರಿದ್ದರು.

    ಕನಕದಾಸರು ಅಂದೇ ಚಿಂತನೆ ಮಾಡಿ ಕುಲ ಕುಲವೆಂದು ಹೊಡದಾಡದಿರಿ, ಕುಲದ ನೆಲೆಯ ಬಲ್ಲಿರಾ ಎಂದು ಪ್ರಶ್ನಿಸಿದ್ದರು. ಇಂದಿಗೂ ಕೂಡ ಜಾತಿ, ಹೊಡೆದಾಟದ ವ್ಯವಸ್ಥೆ ಮುಂದುವರಿದಿದೆ. ಸರ್ವ ಸಮ್ಮತ ಸಮಾಜದ ದೇಶ ಇನ್ನೂ ಆಗಲಿಲ್ಲ. ಈ ಬಗ್ಗೆ ಸಮುದಾಯದ ಮುಖಂಡರು ಅರಿವು ಮೂಡಿಸಬೇಕು.

    ಕೆ.ಶ್ರೀನಿವಾಸಗೌಡ, ಶಾಸಕ ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts