ಭದ್ರಾ ಮೇಲ್ದಂಡೆಗೆ ಸಂಘಟಿತ ಹೋರಾಟ ಅಗತ್ಯ

ಶ್ರೀ ದಾ.ಮ.ಐಮುಡಿ ಶರಣಾರ್ಯರ ಅಭಿಮತ ಹಳ್ಳಿಗಳಲ್ಲಿ ಜಾಗೃತಿ

ಕಾನಹೊಸಹಳ್ಳಿ: ಕ್ಷೇತ್ರದ ಬಹು ವರ್ಷಗಳ ಬೇಡಿಕೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಸಂಘಟಿತ ಹೋರಾಟ ಅಗತ್ಯ ಎಂದು ಕಾನಾಮಡುಗು ದಾಸೋಹ ಮಠದ ಧರ್ಮಧಿಕಾರಿ ದಾ.ಮ.ಐಮುಡಿ ಶರಣಾರ್ಯರು ಹೇಳಿದರು.

ಸಮೀಪದ ಆಲೂರಿನಲ್ಲಿ ತಾಲೂಕು ಸಮಗ್ರ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. 60ರ ದಶಕದಲ್ಲಿ ನೀರಾವರಿ ತಜ್ಞ ಡಾ.ಪರಮಶಿವಯ್ಯ ಸಲ್ಲಿಸಿದ ವರದಿಯಂತೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಬರಬೇಕಿತ್ತು. ಆದರೆ, ಕೆ.ಸಿ.ರೆಡ್ಡಿ ವರದಿಯಿಂದ ತಾಲೂಕಿಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಬೇಕಾದ ಜನಪ್ರತಿನಿಧಿಗಳು ನಿರ್ಲಕ್ಷೃವಹಿಸಿದ್ದಾರೆ. ಪರಮಶಿವಯ್ಯ ವರದಿಯಂತೆ ಕೂಡ್ಲಿಗಿ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ವಿಸ್ತರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟ ರೂಪಿಸುವುದಕ್ಕೆ ರೈತರು, ಸಂಘ ಸಂಸ್ಥೆ, ಜನಪರ ಸಂಘಟನೆಗಳು ಕೈಜೋಡಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಕೆಂಚಮನಹಳ್ಳಿ ಬಸವರಾಜ್, ಎನ್.ಟಿ.ಸುರೇಶ್, ಪೆನ್ನಯ್ಯ, ಪ್ರಸನ್ನಸ್ವಾಮಿ, ನಿವೃತ್ತ ಶಿಕ್ಷಕರಾದ ಶಿವಪ್ರಕಾಶ, ಬಸವರಾಜ್, ಶರಣಪ್ಪ, ವೀರೇಶ್ ಕಿಟ್ಟಪ್ಪನವರ್, ಕಣದಮನೆ ಶಿವು, ಮಲ್ಲಿಕಾರ್ಜುನಸ್ವಾಮಿ ಇತರರಿದ್ದರು.

ಸ್ಥಳೀಯರಿಂದ ಪ್ರತಿಜ್ಞೆ : ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಕಾನಾಮಡುಗು ದಾಸೋಹ ಮಠದ ಧರ್ಮಧಿಕಾರಿ ದಾ.ಮ.ಐಮುಡಿ ಶರಣಾರ್ಯರು ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಶ್ರೀಗಳ ಸಮ್ಮುಖದಲ್ಲಿ ಹೋರಾಟದಲ್ಲಿ ಭಾಗವಹಿಸುವುದಾಗಿ ಸ್ಥಳೀಯರು ಪ್ರತಿಜ್ಞೆ ಮಾಡುತ್ತಿದ್ದಾರೆ. ಗಡಿಗ್ರಾಮಗಳಾದ ಮಾಲೂರು, ಕೆಂಚಮನಹಳ್ಳಿ, ಟಿ.ಕಲ್ಲಹಳ್ಳಿ, ಪಿಚ್ಚಾರಹಟ್ಟಿ, ಗೋಲರಹಟ್ಟಿ, ಯಂಬಳೆ ವಡ್ಡರಹಟ್ಟಿ, ಯಂಬಳೆ, ಸಕಲ್ಲಾಪುರದಹಟ್ಟಿ, ಹುಲಿಕೆರೆ, ರಂಗನಾಥನಹಳ್ಳಿ, ಬಯಲುತುಂಬರಗುದ್ದಿ, ಜುಟ್ಟಿಲಿಂಗನಹಟ್ಟಿ, ಹಿರೇಕುಂಬಳಗುಂಟೆ, ಕಾನಹೊಸಹಳ್ಳಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಪೂರ್ವಭಾವಿ ಸಭೆ 19ಕ್ಕೆ : ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಹೋರಾಟದ ರೂಪರೇಷೆ ಸಿದ್ಧಪಡಿಸಲು ಕಾನಾಮಡುಗು ದಾಸೋಹ ಮಠದಲ್ಲಿ ಮೇ 19 ರಂದು ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ. ಹೋರಾಟದ ಮುಂಚೂಣಿಯಲ್ಲಿರುವ ಚಿತ್ರದುರ್ಗ, ದಾವಣಗೆರೆಯ ರೈತ ನಾಯಕರು, ಜನಪರ ಹೋರಾಟಗಾರರು, ನೀರಾವರಿ ತಜ್ಞರು ಆಗಮಿಸಲಿದ್ದಾರೆ ಎಂದು ಸಾವಯವ ಕೃಷಿಕ ಎಚ್.ವಿ.ಸಜ್ಜನ್ ತಿಳಿಸಿದ್ದಾರೆ.