ಜನರ ಭಯ ಹೋಗಲಾಡಿಸಲು ಕನಗನಮರಡಿಯ ಬಸ್​ ದುರಂತ ನಡೆದ ಸ್ಥಳದಲ್ಲಿಂದು ಹೋಮ ಹವನ

ಮಂಡ್ಯ: ಮಂಡ್ಯದ ಪಾಂಡವಪುರದ ಕನಗನಮರಡಿಯ ಬಸ್​ ದುರಂತ ನಡೆದ ಸ್ಥಳದಲ್ಲಿ ಇಂದು ಗ್ರಾಮಸ್ಥರೆಲ್ಲರೂ ಸೇರಿ ಪೂಜೆ, ಹೋಮ ಹವನ ನಡೆಸುತ್ತಿದ್ದಾರೆ.

ಪುರೋಹಿತರಾದ ಮಂಜುನಾಥ್ ಭಟ್, ಪ್ರಶಾಂತ್ ಪುರೋಹಿತ್, ಶಶಿಧರ ಪುರೋಹಿತ್, ಶ್ರೀಧರ ಪುರೋಹಿತ್, ಕುಮಾರ್ ಶರ್ಮ ನೇತೃತ್ವದ ತಂಡದಿಂದ ಭೂ ಶಾಂತಿ, ದೇವತಾಕಾರ್ಯ, ಮೃತ್ಯುಂಜಯ ಹೋಮ, ಗ್ರಾಮ ರಕ್ಷಾ ಹೋಮ, ಗ್ರಾಮ ದೇವತಾಹೋಮ, ದಿಕ್ಪಾಲಕ ಕ್ಷೇತ್ರಪಾಲಕರ ಪೂಜಾ ಹೋಮ ನಡೆಯಲಿದೆ.

ಬೆಳಗ್ಗೆ ಆರಂಭವಾಗುವ ಪೂಜಾ ವಿಧಿವಿಧಾನಗಳು ಮಧ್ಯಾಹ್ನದವರೆಗೆ ನಡೆಯುವ ಸಾಧ್ಯತೆಗಳಿವೆ.
ಇದೇ ಪೂಜೆಯ ಅಂಗವಾಗಿ ಗ್ರಾಮದಲ್ಲಿ ಗಂಗಾಪೂಜೆ, ಗೋಪೂಜೆ, ಮಂಟಪ ಪೂಜೆ, ಭೂಮಿಪೂಜೆ, ಗಣಪತಿ ಪೂಜೆ, ಮಹಾಸಂಕಲ್ಪ, ಪಂಚಗವ್ಯ, ನವಗ್ರಹ ಆರಾಧನೆ, ಕಳಶ ಸ್ಥಾಪನೆ, ಕ್ಷೇತ್ರದೇವತೆ ಅಂಕನಾಥೇಶ್ವರ ದೇವರ ಪೂಜಾಕಾರ್ಯಕ್ರಮ ಮತ್ತು ಹೋಮ ನೆರವೇರಲಿದೆ.

ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮಕ್ಕೆ ರಕ್ಷಣೆ ಒದಗಿಸಲು, ಲೋಕ‌ಕಲ್ಯಾಣಾರ್ಥವಾಗಿ, ಭಯ ನಿವಾರಣೆಗಾಗಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಕೋರಿ ಈ ಪೂಜಾ ವಿಧಿ ವಿಧಾನಗಳನ್ನು ಗ್ರಾಮಸ್ಥರು ನಡೆಸುತ್ತಿದ್ದಾರೆ.

ನ.24ರಂದು ನಡೆದಿದ್ದ ಬಸ್​ ದುರಂತದಲ್ಲಿ 30 ಮಂದಿ ಅಸುನೀಗಿದ್ದರು. ಅಲ್ಲಿಂದಾಚೆಗೆ ಘಟನೆ ನಡೆದ ಸ್ಥಳದಲ್ಲಿ ನಕಾರಾತ್ಮಕ ಶಕ್ತಿಗಳು ಇರುವ ಆತಂಕವನ್ನು ಹಲವರು ವ್ಯಕ್ತಪಡಿಸಿದ್ದರು. ಕೆಲವರು ಅಂಥ ಸಂಗತಿಗಳನ್ನು ನಿರಾಕರಿಸಿದ್ದರು. ಇದೆಲ್ಲದರ ನಡುವೆ ಗ್ರಾಮಸ್ಥರ ಭಯ ಹೋಗಲಾಡಿಸಲು ಇಂದು ಪೂಜಾ ಕಾರ್ಯಗಳನ್ನು ನಿಗದಿ ಮಾಡಲಾಗಿದೆ.

One Reply to “ಜನರ ಭಯ ಹೋಗಲಾಡಿಸಲು ಕನಗನಮರಡಿಯ ಬಸ್​ ದುರಂತ ನಡೆದ ಸ್ಥಳದಲ್ಲಿಂದು ಹೋಮ ಹವನ”

  1. ದುರಂತಕ್ಕೂ ಹೋಮಹವನಕ್ಕೂ ಏನು ಸಂಬಂಧ? ಬೇಡದ ಖರ್ಚು ಅಷ್ಟೆ.

Leave a Reply

Your email address will not be published. Required fields are marked *