ಕಂಸ ಜಗತ್ತಿನ ಮೊದಲ ಉಗ್ರಗಾಮಿ

ಉಡುಪಿ: ನಮ್ಮೊಳಗಿನ ಕೆಟ್ಟ ಕಾಮನೆಗಳೇ ಕಂಸ. ಕೃಷ್ಣ ದೇವರು ಇದನ್ನು ಸಂಹರಿಸಬೇಕು. ಕಂಸ ಜಗತ್ತಿನ ಮೊದಲ ಉಗ್ರಗಾಮಿಯಾಗಿದ್ದು, ಕೃಷ್ಣಾರ್ಘ್ಯ ಸಂದರ್ಭ ದೇಶದಲ್ಲಿ ಭಯೋತ್ಪಾದನೆ ಕೊನೆಯಾಗಲು ಪ್ರಾರ್ಥನೆ ಸಲ್ಲಿಸೋಣ ಎಂದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ದೇವರು ಬಯಸಿದ್ದನ್ನು ನೀಡಲು ಸಮರ್ಥ ದೇವರಿಗೆ ಸಾವಿರ ಕೈ. ಆದರೆ ನಮಗಿರುವುದು ಎರಡೇ ಕೈ. ಹಾಗಾಗಿ ದೇವರು ಕೊಡಲು ಶುರು ಮಾಡಿದರೆ ಪಡೆಯುವ ಸಾಮರ್ಥ್ಯ ಮನುಷ್ಯರಲ್ಲಿ ಇಲ್ಲ. ಕೆಲ ತಿಂಗಳ ಹಿಂದೆ ತೀವ್ರ ನೀರಿನ ಕೊರತೆ ಉಂಟಾಗಿತ್ತು. ಎಲ್ಲರೂ ಎಲ್ಲರೂ ನೀರು ಬೇಕು ಎಂದು ಪ್ರಾರ್ಥಿಸಿದರು. ಈಗ ನಿರಂತರ ಮಳೆ ಸುರಿಯುತ್ತಿದೆ, ಮಳೆ ಸಾಕು ಎಂಬ ಪರಿಸ್ಥಿತಿ ಇದೆ. ಹೀಗಾಗಿ ನಮಗೆ ಯಾವಾಗ ಏನು ಬೇಕೋ ಅದನ್ನು ನೀಡು ಎಂದು ಪ್ರಾರ್ಥಿಸೋಣ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಹಕಾರಿ ಧುರೀಣ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಅಪೇಕ್ಷಿಸುತ್ತೇವೆ ಎಂಬುದನ್ನು ಸನ್ಮಾನದ ಮೂಲಕ ಶ್ರೀಗಳು ಸೂಚ್ಯವಾಗಿ ತಿಳಿಸಿದ್ದಾರೆ ಎಂದರು.

ಅದಮಾರು ಕಿರಿಯ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

ಸಾಧಕರಿಗೆ ಸನ್ಮಾನ: ಚೆನ್ನೈ ವುಡ್‌ಲ್ಯಾಂಡ್ಸ್‌ನ ಕೆ.ಲಕ್ಷ್ಮೀನಾರಾಯಣ ರಾವ್, ಚೆನ್ನೈ ಉಡುಪಿ ಹೋಂನ ಕೆ.ರಾಮ ಪ್ರಸಾದ್ ಭಟ್ ಮುಖ್ಯ ಅತಿಥಿಗಳಾಗಿದ್ದರು. ಜಯಕರ ಶೆಟ್ಟಿ ಇಂದ್ರಾಳಿ, ಪೃಥ್ವಿ-ರತ್ನಕುಮಾರ್, ವುಡ್‌ಲ್ಯಾಂಡ್ಸ್‌ನ ಕೆ.ಮುರಳೀಧರ್ ರಾವ್, ಸುಚಿತ್ರಾ ರಾವ್, ನಂದಿನಿ ರಾವ್, ಉಡುಪಿ ಹೋಂನ ಪ್ರಸನ್ನ ಭಟ್, ಶ್ರೀ ಕೃಷ್ಣ ಡೈರಿ- ಹಾಂಗ್ಯೋದ ಜಗದೀಶ್ ಪೈ, ರಾಮಚಂದ್ರ ಉಪಾಧ್ಯಾಯ, ರಂಗಕರ್ಮಿ ಈಶ್ವರ ಶೆಟ್ಟಿ ಚಿಟ್ಪಾಡಿ, ಅದಾನಿ ಗ್ರೂಪ್‌ನ ಕಿಶೋರ್ ಆಳ್ವ, ಕರ್ನಾಟಕ ಮತ್ತು ಹಿಂದುಸ್ತಾನಿ ಕೊಳಲು ವಾದಕರಾದ ವಿ.ರಾಜಕಮಲ್ ಹಾಗೂ ಸಮೀರ್ ರಾವ್ ಅವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *