ಕುರಿ ಮೇಲೆ ಚಿರತೆ ದಾಳಿ

ಕೆಚ್ಚಲು, ಹೊಟ್ಟೆ ಭಾಗ ಭಕ್ಷಣೆ ಭಯದಲ್ಲಿ ಗ್ರಾಮಸ್ಥರು

ಕಂಪ್ಲಿ: ಚಿನ್ನಾಪುರ ಗ್ರಾಮದ ಹೊರವಲಯ ಪ್ರದೇಶದಲ್ಲಿ ಚಿರತೆಯೊಂದು ಗುರುವಾರ ಬೆಳಗಿನ ಜಾವ ಕುರಿ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ.

ಗ್ರಾಮದ ಕರೇಗುಡ್ಡ ಹೊರವಲಯ ಪ್ರದೇಶದ ಶಿವಣ್ಣ ಎಂಬುವವರ ಜಮೀನಿನಲ್ಲಿ 200 ಕುರಿಗಳನ್ನು ತಂಗಿಸಲಾಗಿತ್ತು. ಏಕಾಏಕಿ ದಾಳಿ ನಡೆಸಿದ ಚಿರತೆ, ಒಂದು ಕುರಿಯ ಕೆಚ್ಚಲು ಹಾಗೂ ಹೊಟ್ಟೆ ಭಾಗವನ್ನು ಭಕ್ಷಿಸಿದೆ. ದಾಳಿ ಸಂದರ್ಭ ಕುರಿಗಳು ಚೀರಾಡಿದ್ದು, ಎಚ್ಚೆತ್ತ ಕುರಿಗಾಹಿಗಳು ಚಿರತೆಯನ್ನು ಓಡಿಸಿ ಕುರಿಯನ್ನು ರಕ್ಷಿಸಿದ್ದಾರೆ. ದಾಳಿಗೊಳಗಾದ ಕುರಿ ಅಂಜಿನಪ್ಪ ಎಂಬುವವರಿಗೆ ಸೇರಿದ್ದಾಗಿದೆ.

ಮೂರು ದಿನಗಳ ಹಿಂದಷ್ಟೇ ಇದೇ ಕರೇಗುಡ್ಡದ ಪ್ರದೇಶದ ದಾಳಿಂಬೆ ಹೊಲದಲ್ಲಿ ಚಿರತೆ ದಾಳಿ ನಡೆಸಿ ಕುರಿ ಮರಿಯೊಂದನ್ನು ಸಂಪೂರ್ಣ ಭಕ್ಷಣೆ ಮಾಡಿತ್ತು. ಗ್ರಾಮದ ಅಕ್ಕ-ತಂಗಿ ಗುಡ್ಡದ ಬಳಿ ಮೂರು ಚಿರತೆಗಳು, ಬಿಂಚಿಮಟ್ಟಿ ಹಾಗೂ ಕರೇಗುಡ್ಡದ ಬಳಿ ಐದು ಚಿರತೆಗಳಿದ್ದು ಗ್ರಾಮಸ್ಥರಿಗೆ ನಿರಂತರ ಕಾಣಿಸಿಕೊಳ್ಳುತ್ತಿವೆ. ಅಲ್ಲದೇ ಮೇಲಿಂದ ಮೇಲೆ ಚಿರತೆಗಳು ಜಾನುವಾರುಗಳ ಮೇಲೆ ಸರಣಿ ದಾಳಿ ನಡೆಸುತ್ತಿರುವ ಕಾರಣ ಹೊಲಗದ್ದೆಗಳಿಗೆ ತೆರಳುವ ಜನತೆ ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಸೂಕ್ತ ಸ್ಥಳದಲ್ಲಿ ಬೋನು ಅಳವಡಿಕೆ ಮಾಡದಿರುವ ಕಾರಣ ನಮ್ಮ ಜಾನುವಾರುಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕುರಿಗಾಹಿಗಳಾದ ಕಾಶಿನಾಥ, ಗೋಪಿ, ಹನುಮಂತ, ರಾಮಾಂಜಿನಿ, ಅಣ್ಣಪ್ಪ, ಪವನ್ ಅಸಮಾಧಾನ ವ್ಯಕ್ತಪಡಿಸಿದರು.

ಚಿನ್ನಾಪುರ ಸೇರಿ 4 ಕಡೆಗಳಲ್ಲಿ ಚಿರತೆ ಸೆರೆಗೆ ಬೋನು ಅಳವಡಿಕೆ ಮಾಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ನಿತ್ಯ ಬೋನು ಪರಿಶೀಲನೆ, ಚಿರತೆ ಚಲನವಲನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪಶು ವೈದ್ಯಾಧಿಕಾರಿಯ ವರದಿ ಆಧರಿಸಿ ಕುರಿ ಮಾಲೀಕರಿಗೆ ಪರಿಹಾರ ನೀಡಲಾಗುವುದು.
| ವಿನೋದ್ ನಾಯ್ಕ ವನ್ಯಜೀವಿ ವಲಯ ಅರಣ್ಯಾಧಿಕಾರಿ ಕಮಲಾಪುರ