ಚಿನ್ನಾಪುರದಲ್ಲಿ ಸಿಡಿಲಿನ ಅವಾಂತರ

ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಪಂ ವ್ಯಾಪಿಯ ಹಳೇ ಚಿನ್ನಾಪುರದಲ್ಲಿ ಮಧ್ಯಾಹ್ನದ ಬಿರುಬಿಸಿಲಿನ ಮಧ್ಯೆಯೇ ಸಿಡಿಲು ಅಪ್ಪಳಿಸಿದ ಪರಿಣಾಮ ತೆಂಗಿನಮರ ಮಂಗಳವಾರ ಸುಟ್ಟಿದೆ. ನಂತರ ಬಿರುಗಾಳಿ ಸಹಿತ ಕೆಲ ಕಾಲ ಮಳೆ ಸುರಿಯಿತು.

ಪಿಂಜಾರ ಓಣಿ ಪ್ರದೇಶದ ಸಂಜೀವಪ್ಪ ನಿವಾಸದ ಬಳಿ ಘಟನೆ ಸಂಭವಿಸಿದೆ. ಬೆಂಕಿಗೆ ಆಹುತಿಯಾದ ತೆಂಗಿನಮರದಿಂದ ಅಗ್ನಿ ಹರಡಿ ಆಸುಪಾಸಿನ ಮನೆಯ ಆವರಣದಲ್ಲಿ ಸಂಗ್ರಹಿಸಿದ್ದ ಹುಲ್ಲಿನ ಹೊರೆ ಸುಟ್ಟಿದೆ. ಗ್ರಾಮಸ್ಥರು ಬೆಂಕಿ ನಂದಿಸಿದ್ದಾರೆ. ಸಿಡಿಲಿನ ಅಬ್ಬರಕ್ಕೆ ಕೆಲ ಮನೆಗಳ ಗೋಡೆಗಳು ಕಂಪಿಸಿ, ಬಂಡೆಗಳು ಬಿರುಕುಬಿಟ್ಟಿವೆ. ಸುಮಾರು 20ಕ್ಕೂ ಹೆಚ್ಚು ಟಿವಿಗಳು ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟಿವೆ.

ಹೊಲಗಳಲ್ಲಿ ಚಾಲ್ತಿಯಲ್ಲಿದ್ದ ಮೋಟಾರ್‌ಗಳು ಏಕಾಏಕಿ ಸ್ಥಗಿತಗೊಂಡಿವೆ ಎಂದು ಗ್ರಾಮಸ್ಥರಾದ ಟಿ.ಸುಧಾಕರ್, ಶರೀಫ್, ರಾಜು, ಬಾಬುಸಾಬ್, ಹೊನ್ನೂರ್ ಸಾಬ್, ಕೊಂಡಪ್ಪ, ಫಕ್ಕೀರಸಾಬ್, ಶೇಖಣ್ಣ ತಿಳಿಸಿದ್ದಾರೆ. ಭಾನುವಾರ ರಾತ್ರಿ ಇದೇ ಗ್ರಾಮದ ಆಂಜನೇಯ ದೇವಸ್ಥಾನ ಬಳಿ ಗಾಳಿ ಸಹಿತ ಮಳೆಯಿಂದ ಅರಳಿ ಮರದ ಟೊಂಗೆ ಉರುಳಿ ನಾಲ್ಕು ಮನೆಗಳು ಹಾನಿಗೊಂಡಿದ್ದವು.

Leave a Reply

Your email address will not be published. Required fields are marked *