ಹಳ್ಳಿಗಳಿಗೆ ಅಧಿಕಾರಿಗಳು ದೌಡು

ಶುದ್ಧ ಕುಡಿವ ನೀರಿನ ಘಟಕಗಳ ಪರಿಶೀಲನೆ ಬೋರ್‌ವೆಲ್ ಕೊರೆಸಲು ಕ್ರಮ

ಕಂಪ್ಲಿ: ಜೀವಜಲದ ಹಾಹಾಕಾರದಿಂದ ಬಳಲುತ್ತಿರುವ ಹಂಪಾದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಜವುಕು, ಜೀರಿಗನೂರು ಸೇರಿ ವಿವಿಧ ಗ್ರಾಮಗಳಿಗೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಪಂಪಾಪತಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮಾತನಾಡಿ, ವಿದ್ಯುತ್ ವ್ಯತ್ಯಯದಿಂದ ಜೀರಿಗನೂರು, ಜವುಕು ಗ್ರಾಮದ ಶುದ್ಧ ಕುಡಿವ ನೀರಿನ ಘಟಕಗಳು ಸಮರ್ಪಕ ಕೆಲಸ ನಿರ್ವಹಿಸುತ್ತಿಲ್ಲ. ಕೆಇಬಿ ಸಿಬ್ಬಂದಿ ಜತೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು. ಜೀರಿಗನೂರಿನಲ್ಲಿ ಕೊರೆಸಿರುವ ಬೋರ್‌ವೆಲ್‌ಗೆ ಮೋಟಾರ್ ಅಳವಡಿಸಿ ನೀರು ಪೂರೈಸಲಾಗುವುದು. ಇನ್ನು ಎರಡು ದಿನಗಳಲ್ಲಿ ಮತ್ತೊಂದು ಬೋರ್‌ವೆಲ್ ಕೊರೆಸಲಾಗುವುದು. ಕೈಪಂಪ್‌ಗಳನ್ನು ದುರಸ್ತಿಗೊಳಿಸಲಾಗುವುದು. ಶುದ್ಧ ಕುಡಿವ ನೀರಿನ ಘಟಕಗಳ ಸಮರ್ಪಕ ನಿರ್ವಹಣೆಗೆ ಪಿಡಿಒಗೆ ಸೂಚಿಸಲಾಗಿದೆ. ಜವುಕು, ಜೀರಿಗನೂರು ಹೊರತುಪಡಿಸಿ ಇನ್ನುಳಿದ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿಲ್ಲ ಎಂದರು.

ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿ ಬಿ.ಐ.ಸೂಡಿ, ಪಿಡಿಒ ಶಿಲ್ಪಾರಾಣಿ, ಅಧ್ಯಕ್ಷ ಶಿವನಗೌಡ, ಗ್ರಾಪಂ ಸಿಬ್ಬಂದಿ ಇದ್ದರು. ಹಂಪಾದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಜವುಕು, ಜೀರಿಗನೂರು ಸೇರಿ ವಿವಿಧ ಗ್ರಾಮಗಳಲ್ಲಿ ಬಿಗಡಾಯಿಸಿದ್ದ ನೀರಿನ ಸಮಸ್ಯೆ ಕುರಿತು ವಿಜಯವಾಣಿ ಜೀವಜಲಕ್ಕಾಗಿ ಇಲ್ಲಿ ನಿತ್ಯ ಪರದಾಟ ಶೀರ್ಷಿಕೆಯಡಿ ಏ.9 ರಂದು ವಿಶೇಷ ವರದಿ ಪ್ರಕಟಿಸಿತ್ತು.