
ಕಂಪ್ಲಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ದಸಂಸ ತಾಲೂಕು ಪದಾಧಿಕಾರಿಗಳು ಶುಕ್ರವಾರ ತಹಸೀಲ್ದಾರ್ ಎಸ್.ಶಿವರಾಜಗೆ ಮನವಿ ಸಲ್ಲಿಸಿದರು.
ಸಮಿತಿ ಜಿಲ್ಲಾ ಸಂಚಾಲಕ ಫ್ರಾನ್ಸೀಸ್ ಮಾತನಾಡಿ, ಎಸ್ಸಿ, ಎಸ್ಟಿ ಮೀಸಲು ಹಣವನ್ನು ಗ್ಯಾರಂಟಿ, ಇತರ ಯೋಜನೆಗಳಿಗೆ ಬಳಸಬಾರದು. ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿಮಾಡಬೇಕು. 371(ಜೆ)ಯ ಅನುಷ್ಠಾನಗೊಂಡು ಹತ್ತು ವರ್ಷಗಳಾಗಿದ್ದು, ಸಾವಿರಾರು ಕೋಟಿ ರೂ. ಖರ್ಚಾಗಿದ್ದರೂ ಎಸ್ಸಿ, ಎಸ್ಟಿಯವರಿಗೆ ತಲುಪಿಲ್ಲ. ಈ ಕುರಿತು ಸರ್ಕಾರ ಯಾವುದಕ್ಕೆ ಎಷ್ಟು ಹಣ ಖರ್ಚಾಗಿದೆ ಎಂಬುದರ ಶ್ವೇತಪತ್ರ ಹೊರಡಿಸಬೇಕು.
ಎಸ್ಸಿಪಿ, ಟಿಎಸ್ಪಿ ಕಾಯ್ದೆಯ ಯೋಜನೆಗಳ ಜಾರಿಗಾಗಿ ಏಕಗವಾಕ್ಷಿ ಪದ್ಧತಿ ಆರಂಭಿಸಬೇಕು. ದಲಿತ ಹೋರಾಟಗಾರರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಬೇಕು. ಹೊರಗುತ್ತಿಗೆ, ದಿನಗೂಲಿ ನೌಕರರು, ಗ್ರಾಮಸಹಾಯಕರನ್ನು ಕಾಯಂಗೊಳಿಸಬೇಕು.
ಪರಿಶಿಷ್ಟರ ಸಬ್ಸಿಡಿ ಸಾಲ ಸೇರಿ ಎಲ್ಲ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.