ಕಂಪ್ಲಿ: ಪಟ್ಟಣದ ಪ್ರತಿಷ್ಠಿತ ಮೂರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ನಿಧಾನವಾಗಿ ಕುಸಿಯುತ್ತಿದ್ದು, ಈ ಶಾಲೆಗಳು ಅಸ್ತಿತ್ವವನ್ನೇ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಖಾಸಗಿ ಶಾಲೆಗಳ ಅಬ್ಬರದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕ್ರಮೇಣ ಕಡಿಮೆಯಾಗುತ್ತಿದೆ. ಇದರ ಪರಿಣಾಮ ಸಮೀಪದ ಸರ್ಕಾರಿ ಶಾಲೆಯೊಂದಿಗೆ ವಿಲೀನಗೊಳ್ಳುವ ಸಾಧ್ಯತೆ ಹೆಚ್ಚಾಗುತ್ತಿದೆ.
ಪಟ್ಟಣದಲ್ಲಿ 1920 ರಲ್ಲಿ ಸ್ಥಾಪನೆಯಾದ ಸರ್ಕಾರಿ ಮಾದರಿ ಹಿ.ಪ್ರಾ.ಬಾಲಕಿಯರ (ಕೆರೆ)ಶಾಲೆಯಲ್ಲಿ ಕ್ರಮೇಣ ಮಕ್ಕಳ ದಾಖಲಾತಿ ಕುಂಠಿತಗೊಳ್ಳುತ್ತಿದೆ. ಒಂದರಿಂದ ಏಳನೇ ತರಗತಿವರೆಗೂ ಇರುವ ಈ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಕೇವಲ 39 ವಿದ್ಯಾರ್ಥಿಗಳು ಮಾತ್ರ ಇದ್ದಾರೆ.
ಒಂದನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ, ಎರಡನೇ ತರಗತಿಯಲ್ಲಿ ಮೂವರು, ಮೂರನೇ ಕ್ಲಾಸಿನಲ್ಲಿ ಇಬ್ಬರು, ನಾಲ್ಕನೇ ಕ್ಲಾಸಿನಲಿ ಆರು ಜನ, ಐದನೇ ತರಗತಿಯಲ್ಲಿ 11 ಜನ, ಆರನೇ ತರಗತಿಯಲ್ಲಿ ಆರು ಜನ, ಏಳನೇ ತರಗತಿಯಲ್ಲಿ 10 ಮಕ್ಕಳಿದ್ದಾರೆ.
ಸೋಮಪ್ಪ ಕೆರೆ ದಡದಲ್ಲಿನ ನಿವಾಸಿಗಳನ್ನು ಹೊಸ ಬಡಾವಣೆಗೆ ಸ್ಥಳಾಂತರಿಸಿದ್ದು ಮಕ್ಕಳ ದಾಖಲಾತಿ ಕುಸಿಯಲು ಕಾರಣ ಎನ್ನಲಾಗಿದೆ.
1956ರಲ್ಲಿ ಸ್ಥಾಪನೆಯಾದ 8ನೇ ವಾರ್ಡ್‌ನ ಸಹಿಪ್ರಾ ಶಾಲೆಯು ಮುಕ್ಕಣ್ಣ ಶಾಲೆ ಎಂದು ಹೆಸರಾಗಿದೆ.
ಇಲ್ಲಿಯೂ ಒಂದರಿಂದ ಏಳನೇ ತರಗತಿವರೆಗೆ ಇದ್ದು, ಕೇವಲ 38 ಮಕ್ಕಳಿದ್ದಾರೆ. ಒಂದನೇ ತರಗತಿಯಲ್ಲಿ ಮೂವರು, ಎರಡನೇ ತರಗತಿಯಲ್ಲಿ ನಾಲ್ವರು, ಮೂರನೇ ಕ್ಲಾಸಿನಲ್ಲಿ ಐದು ಜನರು, ನಾಲ್ಕು ಮತ್ತು ಐದನೇ ಕ್ಲಾಸಿನಲ್ಲಿ ಆರು ಜನರು, ಆರನೇ ತರಗತಿಯಲ್ಲಿ ಒಂಬತ್ತು ಹಾಗೂ ಏಳನೇ ತರಗತಿಯಲ್ಲಿ ಐವರಿದ್ದಾರೆ.
ಈ ಶಾಲೆಯಲ್ಲಿ ಮಂಜೂರಾದ ನಾಲ್ಕು ಶಿಕ್ಷಕರ ಹುದ್ದೆಗಳ ಪೈಕಿ ಎರಡು ಖಾಲಿಯಿವೆ. ಶೌಚಗೃಹ ಶಿಥಿಲಗೊಂಡಿದೆ. ಈ ನೆಪದಿಂದ ಮಕ್ಕಳನ್ನು ಪಾಲಕರು ಶಾಲೆಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ.
ಇನ್ನು ಈ ಬಗ್ಗೆ ಶಿಕ್ಷಕರನ್ನು ಕೇಳಿದರೆ, ‘ಮನೆಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಪ್ರಚಾರ ಮಾಡಲಾಗಿದೆ. ಕಾಯಂ ಶಿಕ್ಷಕರ ಕೊರತೆ, ಶೌಚಗೃಹ ಸಮಸ್ಯೆ ನೆಪದಿಂದ ಪಾಲಕರು ಮಕ್ಕನ್ನು ಸರ್ಕಾರಿ ಶಾಲೆ ಬದಲಿಗೆ ಖಾಸಗಿ ಶಾಲೆಗಳಿಗೆ ಕಳಿಸುತ್ತಿದ್ದಾರೆ ಎನ್ನುತ್ತಾರೆ.
ಒಂದನೇ ತರಗತಿಗೆ ಪ್ರವೇಶವೇ ಇಲ್ಲ
ಪಟ್ಟಣದ ಕುಂಬಾರ ಓಣಿಯಲ್ಲಿ 1959ರಲ್ಲಿ ಆರಂಭವಾದ ಬಸವೇಶ್ವರ ಎಲಿಮೆಂಟರಿ ಶಾಲೆಯೆಂದು ಹೆಸರಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 1999ರಲ್ಲಿ ಇಂದಿರಾನಗರಕ್ಕೆ ವರ್ಗವಾಯಿತು. ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯದ ಮಕ್ಕಳೇ ಹೆಚ್ಚಿರುವ ಈ ಶಾಲೆಯಲ್ಲಿ ಪ್ರತಿ ವರ್ಷ ಮಕ್ಕಳ ದಾಖಲಾತಿ ಕುಸಿಯುತ್ತಿದೆ. 1ರಿಂದ 5ನೇ ತರಗತಿವರೆಗೆ ಒಟ್ಟು 17 ಮಕ್ಕಳಿದ್ದು, ಒಂದನೇ ತರಗತಿಗೆ ಮಕ್ಕಳು ಇನ್ನೂ ಪ್ರವೇಶ ಪಡೆದಿಲ್ಲ. ಕರೆಯಲು ಹೋದರೂ ಮಕ್ಕಳು ಬರುತ್ತಿಲ್ಲ ಎಂದು ಪ್ರಭಾರ ಮುಖ್ಯಶಿಕ್ಷಕ ವಸಂತ್ ಹೇಳಿದರು. ಈ ಬಗ್ಗೆ ಮೀಟಿಂಗ್ ಮಾಡಿ ಹೇಳಿದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ರಾಜ್ಯ ಆದಿವಾಸಿ ರಕ್ಷಣಾ ಪರಿಷತ್ ಸಂಘಟನಾ ಕಾರ್ಯದರ್ಶಿ ಎಚ್.ಪಿ.ಶಿಕಾರಿರಾಮು ಅಭಿಪ್ರಾಯ.
ಕೋಟ್: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಆಯ್ದ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿದೆ. ಪ್ರಭಾತ್ ಫೇರಿ ಮೂಲಕ ಮಕ್ಕಳನ್ನು ದಾಖಲಿಸುವಂತೆ ಪಾಲಕರ ಮನವೊಲಿಸಲಾಗುವುದು. ಮಕ್ಕಳನ್ನು ಶಾಲೆಗೆ ದಾಖಲಿಸುವ ಆಯ್ಕೆ ಪಾಲಕರಿಗೆ ಸಂಬಂಧಿಸಿದೆ.
ಟಿ.ಎಂ.ಸಿದ್ಧಲಿಂಗಮೂರ್ತಿ, ಬಿಇಒ, ಕುರುಗೋಡು
ಕೋಟ್: ಹಕ್ಕಿಪಿಕ್ಕಿ ಜನಾಂಗದ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪಾಲಕರಿಗೆ ತಿಳಿಸಲಾಗಿದೆ. ಮಕ್ಕಳಿಗೆ ಪಾರ್ದಿ ಭಾಷೆಯಲ್ಲಿ ಬೋಧಿಸಲು ವಿಶೇಷ ಶಿಕ್ಷಕರ ನೇಮಕ ಅಗತ್ಯವಿದೆ. ಇನ್ನೊಮ್ಮೆ ಸಭೆ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪಾಲಕರ ಮನವೊಲಿಸಲಾಗುವುದು.
ಎಚ್.ಪಿ.ಶ್ರೀಕಾಂತ್., ಹಕ್ಕಿಪಿಕ್ಕಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ, ಕಂಪ್ಲಿ