ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಡ

ರೈತ ಸಂಘದಿಂದ ತಹಸೀಲ್ದಾರ್ ಶ್ರೀಶೈಲ ವೈ. ತಳವಾರಗೆ ಮನವಿ

ಕಂಪ್ಲಿ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ತಹಸೀಲ್ದಾರ್ ಶ್ರೀಶೈಲ ವೈ. ತಳವಾರಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ನವಕರ್ನಾಟಕ ಯುವಶಕ್ತಿ ನೇತೃತ್ವದಲ್ಲಿ ರೈತರು ಶನಿವಾರ ಮನವಿ ಸಲ್ಲಿಸಿದರು.

ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ತೀವ್ರವಾಗಿದೆ. ಇದರಿಂದ ರಾಮಸಾಗರ, ನಂ.10 ಮುದ್ದಾಪುರ, ಕಣಿವೆ ತಿಮ್ಮಲಾಪುರ ಸೇರಿ ಅನೇಕ ಗ್ರಾಮಗಳ ರೈತರ ಬೆಳೆಗಳಿಗೆ ನೀರಿನ ಅಭಾವ ತಲೆದೋರಿದೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರ ವಿದ್ಯುತ್ ವ್ಯತ್ಯಯ ಸಮಸ್ಯೆಗೆ ಪರಿಹಾರ ಸೂಚಿಸಬೇಕಿದೆ ಎಂದು ರೈತರು ಒತ್ತಾಯಿಸಿದರು.

ಬಳಿಕ ಕಂಪ್ಲಿ ಜೆಸ್ಕಾಂ ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವಿದ್ಯುತ್ ವ್ಯತ್ಯಯ, ಟಿಸಿ ಸುಟ್ಟ ಸಂದರ್ಭದಲ್ಲಿ ಕೂಡಲೇ ಅಧಿಕಾರಿವರ್ಗ ರೈತರ ದೂರಿಗೆ ಸ್ಪಂದಿಸಬೇಕು. ಸಮರ್ಪಕ ವಿದ್ಯುತ್ ಪೂರೈಸುವ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ಸಹಕರಿಸಬೇಕು. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ತೀವ್ರವಾದ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಸಿದರು.

ಹಸಿರು ಸೇನೆ ತಾಲೂಕು ಅಧ್ಯಕ್ಷ ಬಿ.ಗಂಗಾಧರ, ಉಪಾಧ್ಯಕ್ಷ ಎಂ.ಬಸವರಾಜ, ನವಕರ್ನಾಟಕ ಯುವ ಶಕ್ತಿಯ ಕ್ಷೇತ್ರಾಧ್ಯಕ್ಷ ವಿರೂಪಾಕ್ಷಿ, ರೈತರಾದ ಯಮುನಪ್ಪ, ವೃಷಭೇಂದ್ರ, ಗುಳೆ ಶಿವಪ್ಪ, ಮಹೇಶ್, ಪಾಲಾಕ್ಷಿ, ನಿಂಗಪ್ಪ, ಪಂಪಣ್ಣ, ರಾಮಕೃಷ್ಣ ಇತರರಿದ್ದರು.

ಸಂಘಟನೆಗಳೊಂದಿಗೆ ರೈತರು ಮನವಿ ನೀಡಲು ತಹಸಿಲ್ ಕಚೇರಿಗೆ ತೆರಳಿದಾಗ ತಹಸೀಲ್ದಾರ್ ಸಭೆಯಲ್ಲಿ ನಿರತರಾಗಿದ್ದರು. ಕಾರಣ ಉಪ ತಹಸೀಲ್ದಾರ್ ಮನವಿ ಪತ್ರ ಸ್ವೀಕರಿಸಲು ಬಂದಾಗ ರೈತರು ಅಸಮಾಧಾನಗೊಂಡರು. ಸುಡುಬಿಸಿಲಲ್ಲೇ ಕೆಲ ನಿಮಿಷಗಳ ಸಾಂಕೇತಿಕ ಧರಣಿ ಕೈಗೊಂಡ ಬಳಿಕ ತಹಸೀಲ್ದಾರ್ ಆಗಮಿಸಿ ಮನವಿ ಸ್ವೀಕರಿಸಿದರು.

Leave a Reply

Your email address will not be published. Required fields are marked *