ಕಂಪ್ಲಿ: ಕರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಅಲೆಮಾರಿ ಸಮುದಾಯದ ಕಲಾವಿದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾದ ಪೋಸ್ಟ್ ನೋಡಿ ಮಂಡ್ಯ ಜಿಲ್ಲೆಯ ದುದ್ದಾ ಗ್ರಾಮದ ಸಾಫ್ಟ್ವೇರ್ ಇಂಜಿನಿಯರ್ ನಾಗಮಣಿ ಎನ್ನುವವರು ಆರ್ಥಿಕ ನೆರವು ನೀಡಿದ್ದಾರೆ ಎಂದು ಹಳೇ ದರೋಜಿ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್ ಅಧ್ಯಕ್ಷ ಅಶ್ವ ರಾಮು ತಿಳಿಸಿದ್ದಾರೆ.
ಜಿಲ್ಲೆಯ ಅಲೆಮಾರಿ ಸಮುದಾಯಗಳಾದ ಸಿಂಧೋಳ್ಳ, ಬುಡ್ಗ ಜಂಗಮ, ಹಂಡಿ ಜೋಗಿ, ಚೆನ್ನದಾಸರು ಹಾಗೂ ಸುಡುಗಾಡು ಸಿದ್ಧ ಸಮುದಾಯದ ಕಲಾವಿದರು ದುಡಿಮೆಯಿಂದ ವಂಚಿತರಾಗಿದ್ದು, ಕಷ್ಟದ ಜೀವನ ನಡೆಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿತ್ತು. ಇದನ್ನು ಗಮನಿಸಿದ ನಾಗಮಣಿ, ಕೆಲ ಕಲಾವಿದರ ಖಾತೆಗೆ ಹಣ ಹಾಕುವ ಮೂಲಕ ನೆರವಾಗಿದ್ದಾರೆ.
ತಾಲೂಕಿನ ಮೆಟ್ರಿಯ ಏಕತಾರಿ ತತ್ವಪದ ಹಾಡುಗಾರ ಚೆನ್ನದಾಸರ ದುರ್ಗಪ್ಪಗೆ 4,000 ರೂ, ಕಂಪ್ಲಿ ಸಿಂಧೋಳ್ಳ ರಾಹುಲ್ ನಾಗಪ್ಪಗೆ 5,000 ರೂ, ಹಗರಿಬೊಮ್ಮನಹಳ್ಳಿ ವೇಷದಾರಿ ಸಣ್ಣ ಜಯಪ್ಪಗೆ 3,000 ರೂ, ಸಿರಗುಪ್ಪ ಸಿಂಧೋಳ್ಳ ಅಡಿವೆಪ್ಪ ಹಾಗೂ ಹೊಸಪೇಟೆ ಸುಡುಗಾಡು ಸಿದ್ಧ ಸಮುದಾಯದ ದುರ್ಗಮ್ಮ್ಮಗೆ ತಲಾ 3,000 ರೂ, ಹೊಸಪೇಟೆ ಬುಡ್ಗ ಜಂಗಮದ ಜಂಭಕ್ಕಗೆ 2,000 ರೂ. ನೀಡಿದ್ದಾರೆ. ಈ ಹಣದಿಂದ ಅವರವರ ಕಾಲನಿಯಲ್ಲಿನ ಬುಡಕಟ್ಟು ಅಲೆಮಾರಿ ಕುಟುಂಬಗಳಿಗೆ ಪಡಿತರ, ದಿನಸಿ, ಹಣ್ಣು, ತರಕಾರಿ ಖರೀದಿಸುವಂತೆ ನಾಗಮಣಿ ತಿಳಿಸಿದ್ದಾರೆಂದು ಅಶ್ವ ರಾಮು ಮಾಹಿತಿ ನೀಡಿದರು.