ಮರದ ಕೊಂಬೆ ಬಿದ್ದು ನಾಲ್ಕು ಮನೆಗಳಿಗೆ ಹಾನಿ

ಚಿನ್ನಾಪುರದಲ್ಲಿ ವರುಣನ ಅವಾಂತರ ಬಾಲಕಿ ರಜಿಯಾ ಬೇಗಂ ತಲೆಗೆ ಪೆಟ್ಟು

ಕಂಪ್ಲಿ: ತಾಲೂಕಿನ ಹಳೇ ಚಿನ್ನಾಪುರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಗಾಳಿ ಸಹಿತ ಮಳೆಯಿಂದಾಗಿ ಆಂಜನೇಯ ದೇವಸ್ಥಾನ ಬಳಿಯ ಬೃಹತ್ ಅರಳಿ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ 4 ಮನೆಗಳು ಹಾನಿಗೊಳಗಾಗಿವೆ.

ಕೊಂಬೆ ಬಿದ್ದ ರಭಸಕ್ಕೆ ಆಶ್ರಯ ಯೋಜನೆಯಡಿ ನಿರ್ಮಾಣವಾದ ಪೀರಾವಲಿ, ಖಾಸೀಂಸಾಬ್, ಶೇಕ್ಷಾವಲಿ, ಟಿ.ನಾರಾಯಣಗೆೆ ಸೇರಿದ ಮನೆಗಳು ಸಂಪೂರ್ಣ ಜಖಂಗೊಂಡಿದ್ದು, ಮನೆಯಲ್ಲಿನ ಸಾಮಗ್ರಿಗಳಿಗೆ ಹಾನಿಯಾಗಿದೆ. ಘಟನೆ ವೇಳೆ ಮನೆಯಲ್ಲಿದ್ದ ಖಾಸೀಂ ಸಾಬ್ ಪುತ್ರಿ ರಜಿಯಾ ಬೇಗಂ ಬಾಲಕಿ ತಲೆಗೆ ಪೆಟ್ಟು ಬಿದ್ದಿದೆ. ಖಾಸೀಂಸಾಬ್‌ಗೆ ಫ್ಯಾನ್ ರೆಕ್ಕೆಗಳು ತಗುಲಿ ಸಣ್ಣ ಪುಟ್ಟ ಗಾಯಗಳಾಗಿವೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹೊಸಪೇಟೆಯ ತಾಪಂ ಇಒ ಟಿ.ವೆಂಕೋಬಪ್ಪ ಮಾತನಾಡಿ, ಜಿಪಂ ಹಾಗೂ ಜಿಲ್ಲಾಧಿಕಾರಿಗೆ ಹಾನಿ ವರದಿ ಸಲ್ಲಿಸಲಾಗುವುದು. ಗ್ರಾಪಂಯಿಂದ ಹಾನಿಗೊಳಗಾದ ಮನೆ ಮಾಲೀಕರಿಗೆ 1000 ರೂ. ತಾತ್ಕಾಲಿಕ ಪರಿಹಾರವಾಗಿ ನೀಡಲಾಗುವುದು. ರಾಜೀವ್ ಗಾಂಧಿ ವಸತಿ ನಿಗಮಕ್ಕೆ ವರದಿ ನೀಡಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದರು.

ಘಟನೆಯಲ್ಲಿ ಗಾಯಗೊಂಡ ಬಾಲಕಿ ರಜಿಯಾ ಬೇಗಂಗೆ ಪ್ರಾಥಮಿಕ ಚಿಕಿತ್ಸೆಗಾಗಿ 500 ರೂ. ನೀಡಿದರು. ಸಂತ್ರಸ್ತರಿಗೆ ಗ್ರಾಮದ ಸಕಿಪ್ರಾ ಶಾಲೆಗೆ ತೆರಳಿ ಪರಿಶೀಲಿಸಿ ಊಟ, ವಸತಿ ಕಲ್ಪಿಸಿಕೊಡುವ ತಾತ್ಕಾಲಿಕ ವ್ಯವಸ್ಥೆ ಮಾಡಿದರು. ಉಪತಹಸೀಲ್ದಾರ್ ಬಿ.ರವೀಂದ್ರಕುಮಾರ್, ತಾಪಂ ಸದಸ್ಯ ಸಿ.ಡಿ.ಮಹಾದೇವ ಇದ್ದರು.

ಘಟನೆ ಪರಿಶೀಲನೆ ನಡೆಸಿ ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು. ಎಸ್‌ಡಿಆರ್‌ಎಫ್‌ನಡಿ ಮನೆ ವ್ಯವಸ್ಥೆ ಹಾಗೂ ಬಿಇಒಗೆ ಘಟನೆ ಬಗ್ಗೆ ವಿವರಿಸಿ, 4 ಕುಟುಂಬ ಸದಸ್ಯರಿಗೆ ತಾತ್ಕಾಲಿಕವಾಗಿ ಗ್ರಾಮದ ಸರ್ಕಾರಿ ಶಾಲೆ ಕೊಠಡಿಯಲ್ಲಿ ವಸತಿ ಹಾಗೂ ಅಕ್ಷರ ದಾಸೋಹದಡಿ ಊಟದ ವ್ಯವಸ್ಥೆ ಮಾಡಿಕೊಡಲಾಗುವುದು.
| ಶ್ರೀಶೈಲ ವೈ.ತಳವಾರ ತಹಸೀಲ್ದಾರ್, ಕಂಪ್ಲಿ

Leave a Reply

Your email address will not be published. Required fields are marked *