ಮೂಲಸೌಕರ್ಯ ಒದಗಿಸಲು ಮಸಣ ಕಾರ್ಮಿಕರ ಪ್ರತಿಭಟನೆ

ಕಂಪ್ಲಿ: ಪಿಂಚಣಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಮಸಣ ಕಾರ್ಮಿಕರ ಸಂಘ ಪಟ್ಟಣದ ತಹಸಿಲ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿತು.

ಪಟ್ಟಣದ ಎಸ್.ಎನ್.ಪೇಟೆ ಬಸ್ ನಿಲ್ದಾಣದಿಂದ ತಹಸಿಲ್ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದ ಕಾರ್ಮಿಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಂಘದ ರಾಜ್ಯ ಅಧ್ಯಕ್ಷ ಯು.ಬಸವರಾಜ್ ಮಾತನಾಡಿ, 2019-20ನೇ ಸಾಲಿನ ಬಜೆಟ್‌ಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕ ಹಕ್ಕೊತ್ತಾಯ ಪರಿಗಣಿಸದೆ ವಿರೋಧಿ ನೀತಿ ಪಾಲಿಸಿವೆ. ಕಳೆದ 72 ವರ್ಷಗಳಿಂದ ಶೋಷಿತ ಕಾರ್ಮಿಕ ವರ್ಗದ ಬಗ್ಗೆ ಗಮನಹರಿಸಿಲ್ಲ. ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ದಲಿತರ ಹೆಸರಿನಲ್ಲಿ 36 ಸಾವಿರ ಕೋಟಿ ರೂ. ನಿಗದಿಪಡಿಸಿದೆ. ಆದರೆ, ಮಸಣ ಕಾರ್ಮಿಕರಿಗೆ ನಯಾ ಪೈಸೆ ನೀಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಅಗತ್ಯ ಕಾರ್ಮಿಕರನ್ನು ಮಸಣ ನಿರ್ವಾಹಕರನ್ನಾಗಿ ಸೇರ್ಪಡೆಗೊಳಿಸಬೇಕು. ಮಸಣ ಕಾರ್ಮಿಕರ ಕೆಲಸವನ್ನು ಸಾರ್ವಜನಿಕ ಸೇವೆಯೆಂದು ಪರಿಗಣಿಸಿ ಕನಿಷ್ಠ 45 ವರ್ಷ ವಯಸ್ಸಿನ ಪ್ರತಿ ಕಾರ್ಮಿಕರಿಗೆ ಮಾಸಿಕ 3 ಸಾವಿರ ರೂ. ಸಹಾಯಧನ ಅಥವಾ ಪಿಂಚಣಿ ನೀಡಬೇಕು. ರಾಜ್ಯಾದ್ಯಂತ ಗಣತಿ ನಡೆಸಿ ಮಸಣ ಕಾರ್ಮಿಕರಿಗೆ ಮೂಲಸೌಕರ್ಯ ಒದಗಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *