ಚಿರತೆ ಸೆರೆಗೆ ಬೋನು ಅಳವಡಿಕೆ

ಕಂಪ್ಲಿ:  ಸಮೀಪದ ದೇವಲಾಪುರದ ಕಾನಮಟ್ಟಿ, ಕರೇಕಲ್ಲು ಗುಡ್ಡ ಪ್ರದೇಶಗಳಲ್ಲಿ ಚಿರತೆ ಚಲನ ವಲನ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ಎರಡು ಬೋನು ಅಳವಡಿಸಲಾಗಿದೆ.

ಮೂರ‌್ನಾಲ್ಕು ದಿನಗಳಿಂದ ಈ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ರಾತ್ರಿಯಾಗುತ್ತಿದ್ದಂತೆ ಚಿರತೆ ನಾಯಿ, ಆಡು ಮರಿಗಳನ್ನು ಕೊಂದು ಹೊತ್ತೊಯ್ತಿವೆ. ಕೂಡಲೆ ಬೋನು ಅಳವಡಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಂಚಿಮಟ್ಟಿ ಬಳಿ ಇಟ್ಟಿದ್ದ ಬೋನನ್ನು ಕಾನಮಟ್ಟಿ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಕರೇಕಲ್ಲು ಗುಡ್ಡ ಪ್ರದೇಶದಲ್ಲಿ ಇಟ್ಟಿದ್ದ ಬೋನನ್ನು ಚಿರತೆ ಓಡಾಟ ಹೆಚ್ಚಿರುವ ಜಾಗದಲ್ಲಿ ಇರಿಸಲಾಗಿದೆ. ಅರಣ್ಯ ಸಿಬ್ಬಂದಿ ನಿತ್ಯ ಪರಿಶೀಲಿಸುತ್ತಿದ್ದಾರೆ. ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ ಎಂದು ಕಂಪ್ಲಿ, ಹೊಸಪೇಟೆ ತಾಲೂಕು ವಲಯ ಅರಣ್ಯಾಧಿಕಾರಿ ಎನ್.ಬಸವರಾಜ ತಿಳಿಸಿದ್ದಾರೆ. ದೇವಲಾಪುರ ಗ್ರಾಪಂ ಅಧ್ಯಕ್ಷ ಸುರೇಶಗೌಡ, ಗ್ರಾಪಂ ಸದಸ್ಯ ರಾಮನಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಉಮೇಶಗೌಡ, ವೀರೇಶ, ಅರಣ್ಯ ಸಿಬ್ಬಂದಿ ರೋಹಿತ್, ನಾಗರಾಜ್ ಇತರರಿದ್ದರು.