ಪುರಸಭೆಗೆ 3.62 ಕೋಟಿ ರೂ. ಮಂಜೂರು

ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾಹಿತಿ

ಕಂಪ್ಲಿ:  ಪುರಸಭೆ ಕಚೇರಿ ಆವರಣದಲ್ಲಿ ಪುರಸಭೆ ಸಾಮಾನ್ಯ ಸಭೆ ಮಂಗಳವಾರ ಜರುಗಿತು. ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾತನಾಡಿ, 14ನೇ ಹಣಕಾಸು ಆಯೋಗದ ಅನುದಾನದಡಿ ಪುರಸಭೆಗೆ 3.62 ಕೋಟಿ ರೂ. ಮಂಜೂರಾಗಿದೆ. ಈ ಅನುದಾನದಡಿ ಕುಡಿವ ನೀರಿನ ಕಾಮಗಾರಿ, ಸಾರ್ವಜನಿಕ ಶೌಚಗೃಹ, ಘನತ್ಯಾಜ್ಯ ನಿರ್ವಹಣೆ, ರಸ್ತೆ ಮತ್ತು ಪಾದಚಾರಿ ಮಾರ್ಗಗಳ ನಿರ್ವಹಣೆ, ಸ್ಮಶಾನ, ಚಿತಾಗಾರ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಾಗಿ ಹೇಳಿದರು.

ಪುರಸಭೆ ನಿಧಿಯಡಿ ವಿವಿಧ ಯೋಜನೆಗಳ ಕ್ರಿಯಾ ಯೋಜನೆ ತಯಾರಿಕೆ ಹಾಗೂ ವಾರದ ತರಕಾರಿ ಮಾರುಕಟ್ಟೆ, ಪಾರ್ಕಿಂಗ್ ಸೇರಿ ವಿವಿಧ ವಿಷಯಗಳ ಮಾಹಿತಿ ಮುಖ್ಯಾಧಿಕಾರಿ ಸದಸ್ಯರಿಗೆ ನೀಡಿದರು. ಬಳಿಕ ಚರ್ಚಿಸಲಾದ ವಿಷಯಗಳಿಗೆ ಸದಸ್ಯರು ಅನುಮೋದನೆ ಸೂಚಿಸಿದರು. ಪುರಸಭೆ ಅಧ್ಯಕ್ಷ ಎಂ.ಸುಧೀರ್ ಸಭೆ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷೆ ಬಾವಿಕಟ್ಟೆ ಮಂಜುಳಾ, ಸದಸ್ಯರಾದ ಸಿ.ಆರ್.ಹನುಮಂತ, ರಾಮಾಂಜನೇಯಲು, ಬಿ.ನಾಗರಾಜ, ಸಣ್ಣ ಹುಲುಗಪ್ಪ, ಜಿ.ಬಾಷಾ, ರಾಜಾಸಾಬ್, ಎಂ.ರಾಜೇಶ್, ವಿ.ಎಲ್.ಬಾಬು ಅನೇಕರಿದ್ದರು.

ಒತ್ತಾಯ: ಸಭೆಯಲ್ಲಿ ಮುಖಂಡರಿಗೆ ಪ್ರವೇಶವಿಲ್ಲದಿದ್ದರೂ 21ನೇ ವಾರ್ಡ್ ಸದಸ್ಯೆ ಉಪ್ಪಾರ ಲೇಪಾಕ್ಷಮ್ಮ ಅನುಪಸ್ಥಿತಿಯಲ್ಲಿ ಪತಿ ರಾಮದಾಸ್ ಸಭೆಗೆ ಬಂದಿದ್ದರು. ನಮ್ಮ ವಾರ್ಡ್‌ನ ಕಾಮಗಾರಿಗಳ ಕುರಿತು ಪುರಸಭೆ ನನಗೆ ಯಾವ ಮಾಹಿತಿ ನೀಡುತ್ತಿಲ್ಲ ಎಂದು ಅಧ್ಯಕ್ಷರೊಂದಿಗೆ ವಾಗ್ವಾದಕ್ಕಿಳಿದರು. ಇದರಿಂದ ಕೆಲ ಕಾಲ ಸಭೆಯಲ್ಲಿ ಗಲಾಟೆ ಸೃಷ್ಟಿಯಾಗಿತ್ತು. ಇನ್ನು ಕೆಲ ಸದಸ್ಯರು ಅಂಬೇಡ್ಕರ್ ವೃತ್ತದಿಂದ ಜೋಗಿ ಕಾಲುವೆ ಬೈಪಾಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.