ಕಂಬಳ ತುಳುನಾಡ ಜನಪದ ಆಚರಣೆ

ಬೆಳ್ತಂಗಡಿ: ಗ್ರಾಮಾಂತರ ಕೃಷಿಕರು ತಮ್ಮ ಕೃಷಿ ಮತ್ತು ವರ್ಷವಿಡಿ ಚಟುವಟಿಕೆ ನಿರತರಾಗಿರುವವರು ವರ್ಷದ ಕೊನೆಗೆ ಮನೋರಂಜನೆಗಾಗಿ ಹಮ್ಮಿಕೊಳ್ಳುವ ಈ ಕಂಬಳ ಕ್ರೀಡೆ ತುಳುನಾಡ ಜಾನಪದ ಆಚರಣೆಯಂತೆ ನಡೆದುಕೊಂಡು ಬಂದಿದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಹೇಳಿದರು.

ಬಂಗಾಡಿ ಕೊಲ್ಲಿ ಸೂರ್ಯ -ಚಂದ್ರ ಜೋಡುಕರೆ ಕಂಬಳ ಸಮಿತಿ ವತಿಯಿಂದ ನೇತ್ರಾವತಿ ನದಿ ಕಿನಾರೆಯ ವಿಶಾಲ ಪ್ರದೇಶದ ಕಂಬಳ ಕ್ರೀಡಾಂಗಣದಲ್ಲಿ ಶನಿವಾರ 22ನೇ ವರ್ಷದ ಹೊನಲು ಬೆಳಕಿನ ಕಂಬಳ ಉದ್ಘಾಟಿಸಿ ಮಾತನಾಡಿದರು.

ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಂಜುನಾಥ ಕಾಮತ್ ಮಾತನಾಡಿದರು.

ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ, ಸಿವಿಲ್ ಗುತ್ತಿಗೆದಾರ ಸತೀಶ್ ಕಾಮತ್, ಬೆಳ್ಳೂರುಬೈಲು ನೇತ್ರಾವತಿ-ಶರಾವತಿ ಕಂಬಳ ಸಮಿತಿ ಅಧ್ಯಕ್ಷ ಕೃಷ್ಣ ಗೌಡ ಡೆಮ್ಮೆಜಾಲು, ಪೂವಪ್ಪ ಗೌಡ, ಊರ ಹಿರಿಯರಾದ ಸಂಜೀವ ಗೌಡ, ರಾಜ್‌ಗೋಪಾಲ ಭಟ್ ಬೆಳಾಲು, ಕಿಶೋರ್ ಗೌಡ ಹೂರ್ಜೆ, ನ.ಪಂ ಮುಖ್ಯಾಧಿಕಾರಿ ಸುಧಾಕರ ಎಂ.ಎಂ, ಸಮಿತಿ ಪದಾಧಿಕಾರಿಗಳಾದ ಸೀತಾರಾಮ ಹಾರ್ತಕಜೆ, ಧ.ಗ್ರಾ. ಯೋಜನಾ ಸೇವಾ ಪ್ರತಿನಿಧಿ ಅಶ್ವಿತಾ ಉಪಸ್ಥಿತರಿದ್ದರು.

ಕಂಬಳ ಸಮಿತಿ ಗೌರವಾಧ್ಯಕ್ಷ ರಂಜನ್ ಜಿ.ಗೌಡ ನೇತೃತ್ವ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಕರ ಶೆಟ್ಟಿ, ಸಮಿತಿ ಕಾರ್ಯದರ್ಶಿ ಕಿಶೋರ್ ಕುಮಾರ್ ವಳಂಬ್ರ ಸ್ವಾಗತಿಸಿದರು. ಕೋಶಾಧಿಕಾರಿ ಭರತ್ ಕುಮಾರ್ ವಂದಿಸಿದರು. ಸತೀಶ್ ಮನ್ನಡ್ಕ ನಿರೂಪಿಸಿದರು.

ಇದಕ್ಕೂ ಮುನ್ನ ಕೊಲ್ಲಿ ದುರ್ಗಾ ದೇವಿ ಸನ್ನಿದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಕಂಬಳ ಸಂಘಟಕರು, ಕೋಣಗಳ ಯಜಮಾನರೊಂದಿಗೆ ಮೆರವಣಿಗೆ ಮೂಲಕ ಸಾಗಿ ಬಂದು ಕಂಬಳ ಕರೆ ಉದ್ಘಾಟನೆ ನೆರವೇರಿಸಿದರು. ಬಳಿಕ ಕಂಬಳ ಕೋಣಗಳ ಯಜಮಾನರನ್ನು ಗೌರವಿಸಲಾಯಿತು.

ಸಂಘಟನೆ ನಿಜವಾದ ಶಕ್ತಿ ಇಲ್ಲಿ ತಿಳಿಯಬಹುದು. ಈ ಕ್ರೀಡಾಂಗಣ ಮಾನವ ನಿರ್ಮಿತ ಎಂಬುದಕ್ಕಿಂತಲೂ ಮಿಗಿಲು ಪ್ರಕೃತಿದತ್ತವಾಗಿದೆ. ಇಲ್ಲಿ ಕರೆ ನಿರ್ಮಾಣದ ವೇಳೆ ಕೊಲ್ಲಿ ಕ್ಷೇತ್ರದಿಂದ ಶ್ರಮದಾನಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದರೆ ಆರ್ಥಿಕ ನೆರವು ಕಾಜೂರು ದರ್ಗಾದಿಂದ ನೀಡಲಾಗಿದೆ. ಇದು ನಿಜವಾದ ಸೌಹಾರ್ದತೆ ಸಂಕೇತ.
ಮಂಜುನಾಥ ಕಾಮತ್ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ