ಜಗತ್ತಿನ ಎಲ್ಲ ಪ್ರಾಣಿಗಳ ಕ್ರೀಡೆಗಳಿಗೆ ಮಾದರಿ ಕಂಬಳ

<ಅಹಿಂಸಾತ್ಮಕವಾಗಿ ನಡೆಯುವ ತುಳುನಾಡಿನ ಆಚರಣೆಗೆ ಪದೇಪದೆ ಅಡ್ಡಿ ಯಾಕೆ?>
ವಿಜಯಕುಮಾರ್ ಕಂಗಿನಮನೆ
ಭಾರತ ಸೇರಿ ವಿಶ್ವಾದ್ಯಂತ ಹಲವಾರು ದೇಶಗಳಲ್ಲಿ ಹಲವು ರೀತಿಯ ಪ್ರಾಣಿಗಳ ಓಟ ನಡೆಯುತ್ತಿದೆಯಾದರೂ ಸಾಂಪ್ರದಾಯಿಕವಾಗಿ ಕಂಬಳವನ್ನು ಸರಿಗಟ್ಟುವ ಇನ್ನೊಂದು ಸ್ಪರ್ಧೆ ಇಲ್ಲ ಎಂದೇ ಹೇಳಬಹುದು.

ವಿದೇಶಗಳಲ್ಲಿ ಕೌಬಾಯ್ ಎಂಬ ಕ್ರೀಡೆ ಇದೆ. ಎತ್ತುಗಳ ಬೆನ್ನಮೇಲೆ 8 ಸೆಕೆಂಡು ಕಾಲ ಒಂದು ಕೈಯಲ್ಲಿ ಮಾತ್ರ ಹಗ್ಗ ಹಿಡಿದು ಕುಳಿತುಕೊಳ್ಳಬೇಕೆಂಬುದು ಸ್ಪರ್ಧೆ. ಮೆಕ್ಸಿಕೊ, ಅಮೆರಿಕದ ಟೆಕ್ಸಾಸ್ ರಾಜ್ಯ, ಸ್ಪೇನ್, ಬ್ರೆಜಿಲ್‌ಗಳಲ್ಲಿ ಈಗಲೂ ಆಚರಣೆಯಲ್ಲಿದೆ. ಥಾಯ್ಲೆಂಡ್, ಚೀನಾ ಪ್ರದೇಶದಲ್ಲಿ ಇದೇ ಮಾದರಿ ಕೋಣಗಳ ಸ್ಪರ್ಧೆ ಇದೆ.

ಸ್ಪೇನ್‌ನಲ್ಲಿ ನಡೆಯುವ ಬುಲ್ ಫೈಟ್ ಕ್ರೂರವಾಗಿರುತ್ತದೆ. ಗೂಳಿಯೊಂದಿಗೆ ಸೆಣಸಾಟ ಸಂದರ್ಭ ಅವುಗಳಿಗೆ ಚೂಪಾದ ಆಯುಧದಿಂದ ಚುಚ್ಚಿ ಗಾಯಗೊಳಿಸಲಾಗುತ್ತದೆ. ಇದರಿಂದ ಸಾಯುವುದೂ ಇದೆ. ತಮಿಳುನಾಡಿನ ಜಲ್ಲಿಕಟ್ಟು ಕೂಡ ಅಪಾಯಕಾರಿ ಮತ್ತು ಹಿಂಸೆಯಿಂದ ಕೂಡಿದ್ದಾಗಿದೆ. ಪ್ರತಿವರ್ಷ ಜಲ್ಲಿಕಟ್ಟು ನಡೆದಾಗ ಹಲವು ಜೀವಹಾನಿಯಾಗುತ್ತದೆ. ಗೂಳಿಗಳಿಗೆ ದೈಹಿಕ-ಮಾನಸಿಕ ಹಿಂಸೆ ನೀಡಲಾಗುತ್ತದೆ. ಇಂಥ ಅನೇಕ ಸ್ಪರ್ಧೆಗಳು ವಿವಿಧ ದೇಶಗಳಲ್ಲಿವೆ. ಆದರೆ ಇವೆಲ್ಲಕ್ಕಿಂತಲೂ ಕಂಬಳ ಪ್ರತ್ಯೇಕವಾಗಿ ನಿಲ್ಲಲು ಕಾರಣ ಹಲವು.

ಕಂಬಳದ ಪ್ರೀತಿ: ಭಾರತೀಯ ಸಂಸ್ಕೃತಿಯನ್ನು ಮೆಚ್ಚದವರಿಲ್ಲ. ಆ ಸಂಸ್ಕೃತಿಯ ಭಾಗವಾಗಿ ಅಹಿಂಸಾತ್ಮಕವಾಗಿ ನಡೆಯುವ ಕಂಬಳದಲ್ಲಿ ಕೋಣಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸುವವರು, ಮಾಲೀಕರು, ಪ್ರೇಕ್ಷಕರು ಅಪಾರವಾಗಿ ಪ್ರೀತಿಸುತ್ತಾರೆ. ಕೃಷಿ ಚಟುಟಿಕೆಗಳಿಗೂ ಬಳಸುವುದು (ಈಗ ಕಡಿಮೆಯಾಗಿದೆ) ವಿಶೇಷ. ಅವುಗಳ ಮೇಲೆ ಎಂದೂ ದೌರ್ಜನ್ಯ ಎಸಗುವುದಿಲ್ಲ. ಓಟದ ಸಂದರ್ಭ ಬೆತ್ತ ಬಳಸಿದರೂ ಅದು ನೋವನ್ನುಂಟು ಮಾಡುವುದಕ್ಕಿಂತ ಹೆಚ್ಚಾಗಿ ಕೋಣಗಳನ್ನು ನಿಯಂತ್ರಿಸುವ ರೀತಿಯಾಗಿರುತ್ತದೆ.
ಇತರ ಪ್ರಾಣಿ ಕ್ರೀಡೆಗಳಲ್ಲಿ ಪ್ರಾಣಿಗಳು ಸಾಯುವ ಸಾಧ್ಯತೆಗಳು ಹೆಚ್ಚಿರುತ್ತದೆ. ಆದರೆ ಕಂಬಳದಲ್ಲಿ ಓಟಗಾರನ ಕೈಕಾಲು ಮುರಿಯಬಹುದೇ ಹೊರತು ಕೋಣಗಳಿಗೆ ಏನೂ ಆಗದೆಂಬ ಮಾತಿದೆ. ಇದು ನಿಜ ಕೂಡ. ಅಷ್ಟು ಚೆನ್ನಾಗಿ ಕೋಣಗಳನ್ನು ನೋಡಿಕೊಳ್ಳುವ ವ್ಯವಸ್ಥೆ ಕಂಬಳಗಳಲ್ಲಿರುತ್ತದೆ.

ತುಳುನಾಡಿನ ಜನಪದ ಆಚರಣೆಗಳಲ್ಲಿ ಒಂದಾದ ಕಂಬಳ ಅದು ಬರೀ ಓಟದ ಸ್ಪರ್ಧೆ ಅಲ್ಲ. ಇದೊಂದು ಧಾರ್ಮಿಕ ಫಲವಂತಿಕೆಯ ಆಚರಣೆ. ಕ್ರಿ.ಶ.1200ರಲ್ಲೇ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂಧಿಸಿದ ಶಾಸನದಲ್ಲಿ ಕಂಬಳದ ಉಲ್ಲೇಖವಿದೆ. ಆದರೆ ಪೆಟಾ ಇದನ್ನೆಲ್ಲ ಗಮನಿಸುತ್ತಿಲ್ಲ ಎನ್ನುವುದು ವಿಷಾದನೀಯ. ಕಸಾಯಿಖಾನೆಗಳಲ್ಲಿ ಪ್ರತಿದಿನ ಸಾವಿರಾರು ಜಾನುವಾರುಗಳನ್ನು ವಧೆ ಮಾಡುತ್ತಿರುವುದು, ವಿದೇಶಗಳಲ್ಲಿನ ಪ್ರಾಣಿಹಿಂಸೆಯ ಕ್ರೀಡೆಗಳ ಬಗ್ಗೆ ಆ ಸಂಘಟನೆ ಹೆಚ್ಚು ಹೋರಾಟ ನಡೆಸುತ್ತಿರುವುದು ಕಂಡುಬರುತ್ತಿಲ್ಲ. ಸರ್ಕಾರ ಕಂಬಳ ಪರ ನಿಂತು ರಾಷ್ಟ್ರಪತಿಗಳಿಂದ ಈ ಸಂಬಂಧ ವಿಧೇಯಕಕ್ಕೆ ಅಂಕಿತ ಪಡೆದುಕೊಂಡ ಬಳಿಕವೂ ಪೆಟಾ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿರುವುದು ಕಂಬಳ ಪ್ರೇಮಿಗಳಿಗೆ ತೀವ್ರ ನೋವು ತರುವ ಸಂಗತಿಯಾಗಿದೆ.

ಇದು ಮಿಯ್ಯರು ಕಂಬಳ: ಕಾರ್ಕಳ ತಾಲೂಕಿನ ಮಿಯ್ಯರಿನಲ್ಲಿ 15ನೇ ವರ್ಷದ ಲವಕುಶ ಜೋಡುಕರೆ ಕಂಬಳ ಜ.6ರಂದು ನಡೆಯಲಿದೆ. ಸುನೀಲ್ ಕುಮಾರ್ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ ಮಿಯ್ಯರು ಕಂಬಳ ಕ್ರೀಡಾಂಗಣ 84 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಪ್ರೇಕ್ಷಕರಿಗೆ ಗ್ಯಾಲರಿ ವ್ಯವಸ್ಥೆ ಮಾಡಿದ ಏಕೈಕ ಕಂಬಳವಿದು. 60 ಲಕ್ಷ ವೀರಪ್ಪ ಮೊಯ್ಲಿ, 25 ಲಕ್ಷ ಕೋಟ ಶ್ರೀನಿವಾಸ ಪೂಜಾರಿ ನೀಡಿದ್ದು, ಸುಮಾರು 1.75 ಕೋಟಿ ರೂ. ಅಂದಾಜು ಖರ್ಚು ಮಾಡಿ ಕ್ರೀಡಾಂಗಣ ರೂಪ ನೀಡಲಾಗಿದೆ. ಅತಿ ಹೆಚ್ಚು ಮಹಿಳೆಯರು ಭಾಗವಹಿಸುವ ಕಂಬಳ ಇದಾಗಿರುವುದೂ ವಿಶೇಷ.