ಕಂಬಳ ಕೃಷಿ ಪರಂಪರೆಯ ಅಂಗ

ಉಪ್ಪಿನಂಗಡಿ: ಜಾನಪದ ಕ್ರೀಡೆ ಕಂಬಳಕ್ಕೆ ವಿಶಿಷ್ಟವಾದ ಸ್ಥಾನಮಾನವಿದ್ದು, ಹಿಂದಿನ ಅರಸು ಕಾಲದಿಂದ ಹಿಡಿದು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಕೂಡ ಕಂಬಳ ಕೃಷಿ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಪ್ರಾಣಿಪ್ರಿಯ ಹಿನ್ನೆಲೆ ಹೊಂದಿರುವ ಕಂಬಳಕ್ಕೆ ಅಡೆತಡೆ ಸಲ್ಲದು ಎಂದು ಪುತ್ತೂರು ತಾಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು.

ಶನಿವಾರ ಉಪ್ಪಿನಂಗಡಿ ನೇತ್ರಾವತಿ ನದಿ ಕಿನಾರೆಯಲ್ಲಿ 2 ದಿನಗಳ ಕಾಲ ನಡೆಯುವ ವಿಜಯ-ವಿಕ್ರಮ ಕಂಬಳ ಉದ್ಘಾಟಿಸಿ ಮಾತನಾಡಿದರು.

ನೈಜತೆಗೆ ವಿರುದ್ಧವಾದ ಆಪಾದನೆಯೊಂದಿಗೆ ಕಂಬಳಕ್ಕೆ ಎದುರಾಗಿದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ. ಇದರ ಹಿಂದೆ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಶ್ರಮ ಬಹಳಷ್ಟಿತ್ತು. ಹೋರಾಟದಲ್ಲಿ ಅವರು ಗೆಲುವು ಸಾಧಿಸಿದ್ದು, ಇನ್ನು ಮುಂದಿನ ದಿನಗಳಲ್ಲಿ ಇದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.

ಜಿ.ಪಂ ಸದಸ್ಯೆ ಶಯನಾ ಜಯಾನಂದ ಮಾತನಾಡಿ, ಕಂಬಳ ಕ್ರೀಡೆ ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಅದರಲ್ಲೂ ವಿದೇಶಿಗರು ಬಂದು ಇಲ್ಲಿ ನೋಡುತ್ತಿದ್ದಾರೆ. ಮುಂದೊಂದು ದಿನ ಇದು ಅಂತಾರಾಷ್ಟ್ರೀಯ ಕ್ರೀಡೆಯಾಗಿ ಹೊರ ಹೊಮ್ಮಲಿ ಎಂದು ಹಾರೈಸಿದರು.

ವಿಜಯ-ವಿಕ್ರಮ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪ್ರಸ್ತಾವಿಸಿ, ಕಂಬಳ ನಿಲ್ಲಬಾರದು ಎಂಬ ಉದ್ದೇಶದಿಂದ ಮುಂದುವರಿಸಿಕೊಂಡು ಬಂದಿದ್ದೇನೆ. ಸರ್ವರ ಸಹಕಾರದಿಂದ ಮುನ್ನಡೆಯುತ್ತಿದೆ. ಇದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.

ತಾಪಂ ಸದಸ್ಯೆ ಸುಜಾತಾಕೃಷ್ಣ, ಉಪ್ಪಿನಂಗಡಿ ಗ್ರಾ.ಪಂ ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ. ರಘುನಾಥ ರೈ, ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಬಂಗಾಡಿಕೊಲ್ಲಿ ಕಂಬಳ ಸಮಿತಿ ಅಧ್ಯಕ್ಷ ಡಾ. ಎಂ.ಎಂ. ದಯಾಕರ್, ಕಂಬಳ ಜಿಲ್ಲಾ ಸಮಿತಿ ತೀರ್ಪುಗಾರ ಎಡ್ತೂರು ರಾಜೀವ ರೈ, ಕದಿಕ್ಕಾರು ಬೀಡು ಪ್ರವೀಣ್ ಕುಮಾರ್, ಮಠಂತಬೆಟ್ಟು ಮಹಿಷ ಮರ್ದಿನಿ ದೇವಸ್ಥಾನ ಮಾಜಿ ಆಡಳಿತ ಮೊಕ್ತೇಸರ ಸಂಕಪ್ಪ ಶೆಟ್ಟಿ, ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕಟ್ಟಡ ಕಾರ್ಮಿಕ ಸಂಘದ ಕಾರ‌್ಯದರ್ಶಿ ಮಹಾಲಿಂಗ ಕಜೆಕ್ಕಾರು, ಕಂಬಳ ಸಮಿತಿ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಕಾರ‌್ಯಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ರಾಮಚಂದ್ರ ಮಣಿಯಾಣಿ, ವಿಠಲ ಶೆಟ್ಟಿ ಕೊಲ್ಲೊಟ್ಟು, ಸದಾಶಿವ ಸಾಮಾನಿ ಸಂಪಿಗೆದಡಿ, ಉದ್ಯಮಿ ಯು. ರಾಮ, ಸುಮಾ ಅಶೋಕ್ ಕುಮಾರ್ ರೈ ಮತ್ತಿತರರಿದ್ದರು.

ಕಂಬಳ ಸಮಿತಿ ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಸ್ವಾಗತಿಸಿ, ಪ್ರಧಾನ ಕಾರ‌್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ ವಂದಿಸಿದರು. ಸಮಿತಿ ಪದಾಧಿಕಾರಿಗಳಾದ ಚಂದ್ರಶೇಖರ ಮಡಿವಾಳ, ಯೋಗೀಶ್ ಸಾಮಾನಿ ಸಂಪಿಗೆದಡಿ, ದಿಲೀಪ್ ಶೆಟ್ಟಿ ಕರಾಯ, ಕೃಷ್ಣಪ್ರಸಾದ್ ಬೊಳ್ಳಾವು, ಆದರ್ಶ ಕಜೆಕ್ಕಾರು, ಕೃಷ್ಣಪ್ಪ ನಟ್ಟಿಬೈಲ್ ವಿವಿಧ ಕಾರ‌್ಯಕ್ರಮ ನಿರ್ವಹಿಸಿದರು. ನಿರಂಜನ ರೈ ಮಠಂತಬೆಟ್ಟು ಕಾರ‌್ಯಕ್ರಮ ನಿರೂಪಿಸಿದರು.

ಯೋಧರಿಗೆ ನಮನ, ಮೆರವಣಿಗೆ: ಈ ಸಂದರ್ಭ ಪುಲ್ವಾಮದಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರಗಳನ್ನು ಅಳವಡಿಸಲಾಗಿದ್ದು, ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆಗೈದ ಯೋಧರಿಗೆ ನಮನ ಸಲ್ಲಿಸಲಾಯಿತು. ಹುತಾತ್ಮ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಇದಕ್ಕೂ ಮುನ್ನ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂದೆ ಹಾಲಿ ಯೋಧ ವಿಶ್ವನಾಥ ಶೆಣೈ ಅವರಿಗೆ ಗೌರವ ಸಮರ್ಪಿಸಿ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಕಂಬಳ ಕೋಣಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಯೋಧರನ್ನು ತೆರೆದ ವಾಹನದಲ್ಲಿ ಕರೆದೊಯ್ಯುವ ಮೂಲಕ ದೇಶದ ರಕ್ಷಣಾಪಡೆಗಳಿಗೆ ನಮ್ಮ ಮೊದಲ ಗೌರವ ಸಲ್ಲಿಕೆ ಎಂದು ಸಾರಲಾಯಿತು. ಕಂಬಳ ಕರೆಯಲ್ಲಿ ಧಾರ್ಮಿಕ ವಿಧಿ ವಿಧಾನ ಮೂಲಕ ಕಂಬಳ ಕ್ರೀಡೆಗೆ ಚಾಲನೆ ನೀಡಲಾಯಿತು. ಕಂಬಳ ಆರಂಭವಾಗುತ್ತಿದ್ದಂತೆ ದೇಶಕ್ಕೆ ಪ್ರವಾಸ ಬಂದಿದ್ದ ಜರ್ಮನಿ ಮೂಲದ ಮಾರ್ಕೀಸ್ ದಂಪತಿ ಬಹಳ ಆಸಕ್ತಿಯಿಂದ ಕಂಬಳ ವೀಕ್ಷಣೆ ಮಾಡುತ್ತಾ ಕಂಬಳದ ಬಗ್ಗೆ ಛಾಯಾಚಿತ್ರವನ್ನು ತೆಗೆಯುತ್ತಿದ್ದ ದೃಶ್ಯ ಕಂಡು ಬಂದಿತ್ತು.