ಕಂಬಳ ಪ್ರಕರಣ ಸಾಂವಿಧಾನಿಕ ಪೀಠಕ್ಕೆ

ವಿಜಯವಾಣಿ ಸುದ್ದಿಜಾಲ ಮಂಗಳೂರು

ಕರಾವಳಿ ಜಿಲ್ಲೆಗಳಲ್ಲಿ ಕಂಬಳಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಿದ್ದುಪಡಿ ಮೂಲಕ ಜಾರಿಗೆ ತಂದಿರುವ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.

ಈ ಕುರಿತು ಪೆಟಾ ಸಲ್ಲಿಸಿರುವ ಅರ್ಜಿಯನ್ನು ತಮಿಳುನಾಡಿನ ಜಲ್ಲಿಕಟ್ಟು ಕುರಿತ ಅರ್ಜಿಯ ಜತೆಗೆ ವಿಚಾರಣೆ ನಡೆಸಲು ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ನೇತೃತ್ವದ ಪೀಠ ಶುಕ್ರವಾರ ನಿರ್ಧರಿಸಿತು.

ಸಾಂವಿಧಾನಿಕ ಪೀಠದಲ್ಲಿ ಅರ್ಜಿ ವಿಚಾರಣೆ ಸೂಕ್ತವೆಂದು ಹೇಳಿರುವ ನ್ಯಾಯಾಲಯ, ಈ ಕುರಿತು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಪ್ರತಿಕ್ರಿಯೆ ಕೇಳಿದೆ.

ರಾಜ್ಯ ಸರ್ಕಾರವು ತಿದ್ದುಪಡಿ ಮೂಲಕ ಜಾರಿಗೆ ತಂದಿರುವ ಹೊಸ ಕಾನೂನು ಕೇಂದ್ರ ಸರ್ಕಾರ ರೂಪಿಸಿರುವ ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಉಲ್ಲಂಘನೆಯಾಗಿದೆ. ಪ್ರಾಣಿ ಹಿಂಸೆಯನ್ನು ಪ್ರಚೋದಿಸುತ್ತದೆ. ಹಾಗಾಗಿ ರಾಜ್ಯ ಸರ್ಕಾರದ ಕಾನೂನು ತಿದ್ದುಪಡಿಯನ್ನು ಅಮಾನ್ಯಗೊಳಿಸಬೇಕು ಎಂದು ಪೆಟಾ ವಾದಿಸುತ್ತಿದೆ.

ತಮಿಳುನಾಡಿನ ಜಲ್ಲಿಕಟ್ಟು, ಮಹಾರಾಷ್ಟ್ರದ ಎತ್ತಿನಗಾಡಿ ಓಟ ಮುಂತಾದುವುಗಳಿಗೆ ರಾಜ್ಯ ಸರ್ಕಾರಗಳು ಕಾನೂನು ತಿದ್ದುಪಡಿ ಮೂಲಕ ಅವಕಾಶ ನೀಡಿರುವುದನ್ನು ಪ್ರಶ್ನಿಸಿರುವ ಪೆಟಾ ಅರ್ಜಿಗಳು ಸಾಂವಿಧಾನಿಕ ಪೀಠದಲ್ಲಿದ್ದು, ಈಗ ಕಂಬಳ ವಿರುದ್ಧದ ಅರ್ಜಿಯೂ ಅದೇ ಪೀಠಕ್ಕೆ ವರ್ಗಾವಣೆಗೊಂಡಿದೆ.