ಚಿಕಿತ್ಸೆ ಕೊಡದಿದ್ದರೆ ನೀವ್ಯಾಕೆ ಇರಬೇಕು ?

ಕಮತಗಿ: ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲ್ಲ ಅಂದರೆ ನೀವ್ಯಾಕೆ ಇಲ್ಲಿರಬೇಕು ? ನಿಮ್ಮನ್ನೇ ನಂಬಿಕೊಂಡು ಬರುವ ಬಡರೋಗಿಗಳು ಪಾಡೇನು ? ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಬರಬೇಕು. ಇಲ್ಲಿಗೆ ಬರುವ ರೋಗಿಗಳು ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಹೀಗೆಂದು ಖಡಕ್ ಎಚ್ಚರಿಕೆ ನೀಡಿದ್ದು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹಾಗೂ ಸಿಇಒ ಗಂಗೂಬಾಯಿ ಮಾನಕರ.

ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ರೋಗಿಗಳಿಗೆ ಸೂಕ್ತ ಸೇವೆ ದೊರೆಯುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುದ್ದಿ ಆಧರಿಸಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗುರುವಾರ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದರು.

ಆರೋಗ್ಯ ಕೇಂದ್ರಕ್ಕೆ ರಾತ್ರಿ ವೇಳೆ ಚಿಕಿತ್ಸೆಗೆಂದು ತೆರಳಿದ್ದಾಗ ಆ ವೇಳೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸರಿಯಾಗಿ ಸ್ಪಂದಿಸಿಲ್ಲ ಇದರಿಂದಾಗಿ ಆಸ್ಪತ್ರೆ ಹೊರಗಡೆಯೇ ರೋಗಿಯೊಬ್ಬರು ಮಲಗಿಕೊಂಡರೂ ಬಾಗಿಲು ತೆರೆದಿರಲಿಲ್ಲ. ಈ ದೃಶ್ಯದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಇದನ್ನು ಗಮನಿಸಿದ್ದ ಜಿಪಂ ಅಧ್ಯಕ್ಷೆ ಗಂಗೂಬಾಯಿ ಮೇಟಿ, ಸಿಇಒ ಗಂಗೂಬಾಯಿ ಮಾನಕರ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು.

ನಿಮ್ಮನ್ನು ನಂಬಿ ಬರುವ ರೋಗಿಗಳನ್ನು ಉಪಚರಿಸುವ ಹಕ್ಕು ಮತ್ತು ಕರ್ತವ್ಯ ವೈದ್ಯರದ್ದಾಗಿರುತ್ತದೆ. ಹಾಗಾಗಿ ಇಲ್ಲಿನ ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಣೆ ಮಾಡಬೇಕು. ಇನ್ನು ಮುಂದೆ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಕಾಯಂ ವೈದ್ಯರನ್ನು ಕೊಡಿ
20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಕಮತಗಿ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆ ಕಾಯಂ ವೈದ್ಯರಿಲ್ಲದೆ ಬಳಲುತ್ತಿದೆ. ಇದರಿಂದ ಬಡರೋಗಿಗಳಿಗೆ ಆರೋಗ್ಯ ಸೇವೆ ಗಗನಕುಸುಮವಾಗಿದೆ. ಹೀಗಾಗಿ ಕೂಡಲೇ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಕ ಮಾಡಬೇಕು ಎಂದು ಗ್ರಾಪಂ ಮಾಜಿ ಸದಸ್ಯ ರಾಜೇಸಾಬ ಕೋಲಾರ, ಮಂಜುನಾಥ ಭಜಂತ್ರಿ, ತಿಮ್ಮಣ್ಣ ಹಗೇದಾಳ ಇದೇ ವೇಳೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಪಂ ಅಧ್ಯಕ್ಷೆ ಗಂಗೂಬಾಯಿ ಮೇಟಿ ಅವರು, ಸ್ಥಳದಲ್ಲಿದ್ದ ಡಿಎಚ್‌ಒ ಡಾ.ಅನಂತ ದೇಸಾಯಿ ಅವರಿಗೆ ವೈದ್ಯರನ್ನು ನೇಮಿಸುವಂತೆ ಸೂಚನೆ ನೀಡಿದರು.

ಸರದಿಯಂತೆ ಕೆಲಸ ಮಾಡಿಸಿ
ಗ್ರಾಮಸ್ಥರ ಪರವಾಗಿ ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯ ಪ್ರಕಾಶ ಗುಳೇದಗುಡ್ಡ ಮಾತನಾಡಿ, ರಾತ್ರಿ ವೇಳೆಯಲ್ಲಿ ಹಲವು ವರ್ಷಗಳಿಂದ ಒಬ್ಬರೇ ಸ್ಟಾಪ್‌ನಸ್‌ರ್ ಮತ್ತೊಬ್ಬರು ಕ್ಲಾಸ್ ಡಿ ಸಿಬ್ಬಂದಿ ಸೇವೆ ಮಾಡುತ್ತಿದ್ದಾರೆ. ಅವರಿಗೆ ಬಹಳಷ್ಟು ಒತ್ತಡವಾಗುತ್ತಿದೆ. ಹೀಗಾಗಿ ಸರದಿ ಪ್ರಕಾರ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜನೆ ಮಾಡಬೇಕು ಎಂದು ಸಲಹೆ ನೀಡಿದರು.

ಪ್ರಭಾರ ತಾಲೂಕು ವೈದ್ಯಾಧಿಕಾರಿ ಡಾ.ಪ್ರಶಾಂತ ತುಂಬಗಿ, ಆಡಳಿತ ವೈದ್ಯಾಧಿಕಾರಿ ಡಾ. ಜಯಶ್ರೀ ಎಮ್ಮಿ, ಡಾ.ಭಾಗ್ಯ ಕ್ಷತ್ರಿ, ಡಾ.ಎ.ವೈ. ಪಠಾಣ, ಪಪಂ ಮಾಜಿ ಅಧ್ಯಕ್ಷ ಮಹಾಂತೇಶ ಅಂಗಡಿ, ಹುಚ್ಚಪ್ಪ ಸಿಂಹಾಸನ, ಚಂದು ಕುರಿ, ಯಲ್ಲಪ್ಪ ವಡ್ಡರ, ಯಮನೂರಿ ಬಡಕನ್ನವರ, ಲಕ್ಷ್ಮಣ ಹಗೇದಾಳ, ಆನಂದ ಐಹೊಳೆ, ದೇವಿಪ್ರಸಾದ ನಿಂಬಲಗುಂದಿ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *