ಗೇಮ್‌ ಆಡಲಿರುವ ಗಡ್ಡಪ್ಪ! ‘ಕಮರೊಟ್ಟು ಚೆಕ್‌ಪೋಸ್ಟ್‌’ನ ಅಡ್ವೆಂಚರ್‌ ಸಿನಿಮಾದಲ್ಲೊಂದು ಸುತ್ತು…

ಕಮರೊಟ್ಟು ಚೆಕ್‌ಪೋಸ್ಟ್‌ ಅಡ್ವೆಂಚರಸ್‌ ಸಿನಿಮಾ. ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಫ‌ಸ್ಟ್‌ಲುಕ್‌ ಮೂಲಕವೇ ಕುತೂಹಲ ಮೂಡಿಸಿರುವ ‘ಕಮರೊಟ್ಟು ಚೆಕ್‌ಪೋಸ್ಟ್‌’ ಚಿತ್ರ ಇದೇ ಮೇನಲ್ಲಿ ತೆರೆಗೆ ಅಪ್ಪಳಿಸಲಿದೆ.

ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಸಂಪೂರ್ಣ ತುಳು ಭಾಷೆಯ ಹಾಡೊಂದನ್ನು ಬಳಸಿಕೊಂಡಿರುವುದು ಕೂಡ ಚಿತ್ರದ ವಿಶೇಷತೆಗಳಲ್ಲೊಂದು.

ಪ್ಲೇಸ್ಟೋರ್‌ನಲ್ಲಿ ಕಮರೊಟ್ಟು ಚೆಕ್‌ಪೋಸ್ಟ್‌ ಗೇಮ್‌

“ಕಮರೊಟ್ಟು ಚೆಕ್‌ಪೋಸ್ಟ್‌’ ಚಿತ್ರದ ಗೇಮ್‌ವೊಂದನ್ನು ರೂಪಿಸಲಾಗಿದ್ದು, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ “ಕಮರೊಟ್ಟು ಚೆಕ್‌ಪೋಸ್ಟ್‌’ ಎಂದು ಟೈಪ್‌ ಮಾಡಿದರೆ ಸಾಕು ಗೇಮ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಆಡಬಹುದಾಗಿದೆ. ಇದೇ ಗೇಮ್‌ ಅನ್ನು ಆಧರಿಸಿ ಚಿತ್ರದಲ್ಲಿ ಅಡ್ವೆಂಚರಸ್‌ ಗಡ್ಡಪ್ಪ ಪಾತ್ರಧಾರಿ ಕಾಣಿಸಿಕೊಂಡಿದ್ದಾರೆ.

ತುಳುನಾಡಿನ ಕಮರೊಟ್ಟುವಿನಲ್ಲಿರುವ ಕಾಲ್ಪನಿಕ ಸ್ಥಳವಾದ ಪ್ರಸಿದ್ಧ ಗುಟ್ಟಿನ ಮನೆಯಲ್ಲಿ ನಡೆಯುತ್ತಿರುವ ಅಸಾಮಾನ್ಯ ಎನ್ನುವ ಸಂಗತಿಗಳ ಸುತ್ತ ಹೆಣೆದಿರುವ ಕಥೆಯಲ್ಲಿ ಗಡ್ಡಪ್ಪ ಪಾತ್ರಧಾರಿ ಕಾಣಿಸಿಕೊಳ್ಳಲಿದೆ. ಇದನ್ನು ಭೇದಿಸಲು ಹೊರಟ ಗಡ್ಡಪ್ಪನಿಗೆ ಎದುರಾಗುವ ಅಡೆತಡೆಗಳನ್ನು ದಾಟಲು ಮತ್ತು ಕಮರೊಟ್ಟು ಚೆಕ್‌ಪೋಸ್ಟ್‌ನಲ್ಲಿ ನಡೆಯುವ ರಹಸ್ಯವನ್ನು ಭೇದಿಸುವ ಕಥಾಹಂದರವನ್ನು ಕಮರೊಟ್ಟು ಚೆಕ್‌ಪೋಸ್ಟ್‌ ಸಿನಿಮಾ ಕಟ್ಟಿಕೊಡುತ್ತದೆ.

ಅಂದಹಾಗೆ, ಚಿತ್ರದ ತುಳು ಹಾಡೊಂದನ್ನು ನಟ ನವೀನ್‌ಕೃಷ್ಣ ಹಾಡಿದ್ದು, ದಕ್ಷಿಣ ಕನ್ನಡದ ಬೂತಾರಾಧನೆಯನ್ನಿಟ್ಟುಕೊಂಡೇ ಮಾಡಲಾಗಿದೆ. ಇದೊಂದು ಪ್ಯಾರನಾರ್ಮಲ್‌ ಕುರಿತಾದ ಚಿತ್ರವಾಗಿದ್ದು, ನೋಡುಗರಿಗೆ ಹೊಸ ಫೀಲ್‌ ಕೊಡುತ್ತದೆ. ಕನ್ನಡಿಗರಿಗೂ ಹೊಸದೊಂದು ಅನುಭವವನ್ನು ಕಟ್ಟಿಕೊಡುತ್ತದೆ ಎನ್ನುತ್ತದೆ ಚಿತ್ರತಂಡ.

ಚೇತನ್‌ರಾಜ್‌ ಈ ಚಿತ್ರವನ್ನು ನಿರ್ಮಿಸಿದ್ದು, ಎ.ಪರಮೇಶ್‌ ಅವರು ನಿರ್ದೇಶಿಸಿದ್ದಾರೆ. ಸಂಗೀತ ನಿರ್ದೇಶಕ ಎ.ಟಿ.ರವೀಶ್‌ ಸಂಗೀತ ಸಂಯೋಜಿಸಿದ್ದು, ದೀಪಕ್‌ ಮತ್ತು ಪರಮೇಶ್‌ ಅವರ ಛಾಯಾಗ್ರಹಣವಿದೆ. ನಾಯಕರಾಗಿ ಉತ್ಪಲ್‌, ಸನತ್‌ ಚಿತ್ರದಲ್ಲಿ ನಟಿಸಿದ್ದಾರೆ. ಸನತ್‌ ಅವರಿಗಿದು ಮೂರನೇ ಸಿನಿಮಾ. ಇನ್ನು ನಾಯಕಿಯರಾಗಿ ಸ್ವಾತಿಕೊಂಡೆ, ಅಹಲ್ಯಾ ನಟಿಸಿದ್ದಾರೆ. ಸದ್ಯ ಚಿತ್ರದ ಎಲ್ಲ ಕಾರ್ಯಗಳು ಪೂರ್ಣಗೊಂಡಿದ್ದು ಮುಂದಿನ ತಿಂಗಳು ಕಮರೊಟ್ಟು ಚೆಕ್‌ಪೋಸ್ಟ್‌ ತೆರೆಕಾಣಲಿದೆ.

Leave a Reply

Your email address will not be published. Required fields are marked *