ಚೆನ್ನೈ: ಕಮಲ್ ಹಾಸನ್ ( Kamal Haasan ) ಕೇವಲ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದ ಲೆಜೆಂಡರಿ ನಟ ಎಂಬುವುದರಲ್ಲಿ ಎರಡು ಮಾತಿಲ್ಲ. ಸಕಲಕಲಾವಲ್ಲಭ ಎಂದೇ ಖ್ಯಾತಿ ಪಡೆದಿರುವ ಕಮಲ್ ಹಾಸನ್, ಚಿತ್ರರಂಗದಲ್ಲಿ ದೊಡ್ಡ ಆಲದ ಮರವಾಗಿ ಬೆಳೆದು ನಿಂತಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳು ಪ್ರೀತಿಯಿಂದ “ಉಳಗನಾಯಗನ್ (ವಿಶ್ವನಾಯಕ)” ಎಂದು ಕರೆಯುತ್ತಾರೆ. ಆದರೀಗ ತಮ್ಮ ಅಭಿಮಾನಿಗಳಿಗೆ ಕಮಲ್ ಹಾಸನ್ ಶಾಕ್ ನೀಡಿದ್ದು, ಇನ್ನು ಮುಂದೆ ಕಮಲ್ ಅಥವಾ ಕೆಎಚ್ ಎಂದು ಕರೆದರೆ ಸಾಕು ಎಂದಿದ್ದಾರೆ.
உங்கள் நான்,
கமல் ஹாசன். pic.twitter.com/OpJrnYS9g2
— Kamal Haasan (@ikamalhaasan) November 11, 2024
ತಮ್ಮ ಎಕ್ಸ್ ಖಾತೆಯಲ್ಲಿ ಪತ್ರವೊಂದನ್ನು ಪೋಸ್ಟ್ ಮಾಡಿರುವ ಕಮಲ್ ಹಾಸನ್, ನನ್ನ ಮೇಲಿನ ಪ್ರೀತಿಯಿಂದ ನೀವು ನನಗೆ ‘ಉಳಗನಾಯಗನ್’ ಸೇರಿದಂತೆ ಅನೇಕ ಪ್ರೀತಿಯ ಬಿರುದುಗಳನ್ನು ನೀಡಿದ್ದೀರಿ. ಸಹ ಕಲಾವಿದರು, ಅಭಿಮಾನಿಗಳು ಮತ್ತು ಜನರ ಮೆಚ್ಚುಗೆಯಿಂದ ನನಗೆ ಸಂತೋಷವಾಗಿದೆ. ನಿಮ್ಮ ಪ್ರೀತಿಗೆ ನಾನು ಮನಸೋತಿದ್ದೇನೆ ಮತ್ತು ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ.
ಸಿನಿಮಾ ಕಲೆಯು ಯಾವುದೇ ವ್ಯಕ್ತಿಗಿಂತ ದೊಡ್ಡದಲ್ಲ. ನಾನು ಹೆಚ್ಚು ಕಲಿಯಲು ಮತ್ತು ಕಲೆಯಲ್ಲಿ ಬೆಳೆಯಲು ಬಯಸುವ ಜೀವಮಾನದ ವಿದ್ಯಾರ್ಥಿಯಾಗಿರಲು ಇಷ್ಟಪಡುತ್ತೇನೆ. ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ಮತ್ತು ಅಭಿಮಾನಿಗಳ ಸಮ್ಮಿಶ್ರಣವಾಗಿ ಸಿನಿಮಾ ಕೂಡ ಇತರ ಕಲೆಗಳಂತೆ ಎಲ್ಲರಿಗೂ ಸಂಬಂಧಿಸಿದೆ. ಕಲಾವಿದನಿಗಿಂತ ಕಲೆ ಶ್ರೇಷ್ಠ ಎಂದು ನಾನು ಬಲವಾಗಿ ನಂಬುತ್ತೇನೆ. ಅದಕ್ಕಾಗಿ ತುಂಬಾ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಯಿತು.
ನಾನು ಮೇಲೆ ತಿಳಿಸಿದಂತೆ ಅಂತಹ ಶೀರ್ಷಿಕೆಗಳು ಮತ್ತು ಬಿರುದುಗಳನ್ನು ತ್ಯಜಿಸುವುದು ತುಂಬಾ ಮುಖ್ಯವಾಗಿದೆ. ಆದರೆ, ಆ ಬಿರುದು ಕೊಟ್ಟವರಿಗೆ ನಾನು ಅಗೌರವ ತೋರುತ್ತಿಲ್ಲ. ನನ್ನನ್ನು ಪ್ರೀತಿಸುವ ಎಲ್ಲರಲ್ಲೂ ಒಂದು ಮನವಿ ಮಾಡುತ್ತೇನೆ, ಇನ್ನು ಮುಂದೆ ಅಭಿಮಾನಿಗಳು, ಮಾಧ್ಯಮ ಸ್ನೇಹಿತರು, ಚಿತ್ರರಂಗದ ಜನರು, ಮಕ್ಕಳ್ ನೀತಿ ಮಯ್ಯಂ ಪಕ್ಷದ ಕಾರ್ಯಕರ್ತರು ಮತ್ತು ಸಹ ಭಾರತೀಯರು ನನ್ನನ್ನು ಕಮಲ್ ಹಾಸನ್, ಕಮಲ್ ಅಥವಾ ಕೆಎಚ್ ಎಂದು ಮಾತ್ರ ಕರೆಯಲು ವಿನಂತಿಸುತ್ತೇನೆ.
ಇದುವರೆಗೂ ನೀವು ನನಗೆ ತೋರಿದ ಎಲ್ಲ ಪ್ರೀತಿಗೆ ಮತ್ತೊಮ್ಮೆ ಧನ್ಯವಾದಗಳು. ಚಿತ್ರಪ್ರೇಮಿಗಳಲ್ಲಿ ನಾನು ಕೂಡ ಒಬ್ಬನಾಗಬೇಕೆಂಬ ನನ್ನ ಬಯಕೆಯಿಂದ ಈ ವಿನಂತಿಯು ಹುಟ್ಟಿಕೊಂಡಿದೆ. ಇದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆಂದು ಕಮಲ್ ಹಾಸನ್ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)
ಜಗ್ಗೇಶ್ ಬೈಯ್ಯೋರು ಇದನ್ನೊಮ್ಮೆ ನೋಡಿ… ಗುರುಪ್ರಸಾದ್ ಬಗ್ಗೆ ಧನಂಜಯ್ ಮಾತು, ವಿಡಿಯೋ ವೈರಲ್! Guruprasad