ಮಂಗಳೂರು: ಕೇಂದ್ರ ಸರ್ಕಾರದ ಮುಂದಿನ ಮಾರ್ಗಸೂಚಿಯನ್ನು ಆಧರಿಸಿ ಕಂಬಳ ಆಯೋಜಿಸಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಹೇಳಿದರು. ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಭಾನುವಾರ ನಡೆದ ಕಂಬಳ ಸಮಿತಿ ಮತ್ತು ಕಂಬಳ ವ್ಯವಸ್ಥಾಪಕರ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಧಾರ್ಮಿಕ ನಂಬಿಕೆ ಮತ್ತು ಕೃಷಿ ಸಂಸ್ಕೃತಿಯನ್ನೊಳಗೊಂಡ ತುಳುನಾಡಿನ ಜಾನಪದ ಕ್ರೀಡೆ ಕಂಬಳ ನಡೆಸುವುದು ನಮ್ಮೆಲ್ಲರ ಇಂಗಿತ. ಈ ವಿಚಾರದಲ್ಲಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಅವರು ಪೂರಕವಾಗಿ ಸ್ಪಂದಿಸಿ ಮುಂದಿನ ಗೈಡ್‌ಲೈನ್ ಬಳಿಕ ಕಂಬಳದ ಬಗ್ಗೆ ನಿರ್ಧರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.
ಕಂಬಳ ಸಮಿತಿ ಉಪಾಧ್ಯಕ್ಷ ತಿರುವೈಲುಗುತ್ತು ನವೀನ್‌ಚಂದ್ರ ಆಳ್ವ, ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೀವ್ ಶೆಟ್ಟಿ ಎಡ್ತೂರು, ಕೋಶಾಧಿಕಾರಿ ಸುರೇಶ್ ಪೂಜಾರಿ, ಮಾಜಿ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಕಂಬಳ ಕೋಣಗಳ ಯಜಮಾನರು, ವ್ಯವಸ್ಥಾಪಕರಾದ ಎರ್ಮಾಳ್ ರೋಹಿತ್ ಹೆಗ್ಡೆ, ಬ್ರಿಜೇಶ್ ಚೌಟ, ವಿಶಾಲ್ ಕೆ.ಪೂಜಾರಿ ಬೋಳೂರು, ಚಂದ್ರಹಾಸ ಶೆಟ್ಟಿ, ವರ್ಕಾಡಿಗೋಳಿ ರಕ್ಷಿತ್, ರಾಮಚಂದ್ರ ನಾಯಕ್ ಮೂಲ್ಕಿ, ಕಂಬಳ ಕೋಣಗಳ ಯಜಮಾನ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿ, ಮಾಂಕಾಳಿಪಡ್ಪು ಸೀತಾರಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.