ಜನಹಿತ ಮರೆತವರಿಗೆ ಪಾಠ ಕಲಿಸಿ

ಬಸವಕಲ್ಯಾಣ: ಕೇಂದ್ರದಲ್ಲಿ ಐದು ವರ್ಷ ಅಧಿಕಾರ ನಡೆಸಿದ ಮೋದಿ ನೇತೃತ್ವದ ಸರ್ಕಾರ ಜನ ಹಿತ ಹಾಗೂ ದೇಶದ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಕ್ರೀಡಾ ಸಚಿವ ರಹೀಮ್ ಖಾನ್ ಆರೋಪಿಸಿದರು.

ನಗರದಲ್ಲಿ ಬುಧವಾರ ರಾತ್ರಿ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸುಳ್ಳು ಭರವಸೆ ನೀಡುವುದೇ ಬಿಜೆಪಿ ಬಂಡವಾಳ. ಬಡ ಹಾಗೂ ಮಧ್ಯಮ ವರ್ಗದವರಿಗೆ ತುಳಿಯುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ಪಕ್ಷದ ಅಭ್ಯಥರ್ಿ ಈಶ್ವರ ಖಂಡ್ರೆ ಅವರಿಗೆ ಗೆಲ್ಲಿಸಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಕೋರಿದರು.

ಶಾಸಕ ಬಿ.ನಾರಾಯಣರಾವ ಮಾತನಾಡಿ, ಜಿಲ್ಲೆ ಅಭಿವೃದ್ಧಿಗೆ ಖಂಡ್ರೆ ಪರಿವಾರದ ಕೊಡುಗೆ ದೊಡ್ಡದು. ಈಶ್ವರ ಖಂಡ್ರೆ ಸಚಿವರಿದ್ದಾಗ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ತಾಲೂಕಿನಿಂದ ಖಂಡ್ರೆಯವರಿಗೆ ಭಾರಿ ಲೀಡ್ ನೀಡಲು ಒಗ್ಗಟ್ಟಾಗಿ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

ಪಕ್ಷದ ಅಭ್ಯಥರ್ಿ ಈಶ್ವರ ಖಂಡ್ರೆ ಮಾತನಾಡಿ, ದೇಶದ ಸಮಗ್ರ ಚಿಂತನೆ ಜತೆಗೆ ಎಲ್ಲರ ಅಭಿವೃದ್ಧಿ ಮೂಲಮಂತ್ರವಾಗಿಸಿಕೊಂಡ ಏಕೈಕ ಪಕ್ಷ ಕಾಂಗ್ರೆಸ್. ಅಭಿವೃದ್ಧಿಗಾಗಿ ಕಾಂಗ್ರೆಸ್ಗೆ ಬೆಂಬಲಿಸಬೇಕು. ಜಿಲ್ಲೆಯ ವಿಕಾಸಕ್ಕೆ ತಮ್ಮದೇ ಆದ ಯೋಜನೆಗಳನ್ನು ಹೊಂದಿದ್ದು, ಅವೆಲ್ಲವೂ ಮಾಡಿ ತೋರಿಸಲು ಜನರು ಆಶೀರ್ವದಿಸಬೇಕು ಎಂದರು.

ಮಾಜಿ ಶಾಸಕ ಎಂ.ಜಿ.ಮುಳೆ, ಜೆಡಿಎಸ್ ಮುಖಂಡ ಸುನೀಲ ಪಾಟೀಲ್ ಮಾತನಾಡಿದರು. ಬಾಬು ಹೊನ್ನಾನಾಯಕ, ವೈಜಿನಾಥ ಕಾಮಶೆಟ್ಟಿ, ಶಿವರಾಜ ನರಶೆಟ್ಟಿ, ಶಶಿಕಾಂತ ದುರ್ಗೆ ಇದ್ದರು. ಮಾನವ ಹಕ್ಕುಗಳ ವಿಭಾಗದ ಜಿಲ್ಲಾ ಕಾರ್ಯದರ್ಶಿ ಬಸವರಾಜ ಸ್ವಾಮಿ ಸ್ವಾಗತಿಸಿದರು. ಶಿವಶರಣ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು