ಕಲ್ಯಾ ರಸ್ತೆಗೆ ಅರೆಬರೆ ತೇಪೆ

|ಹರಿಪ್ರಸಾದ್ ನಂದಳಿಕೆ ಬೆಳ್ಮಣ್

ಕಲ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಯಾ-ನೆಲ್ಲಿಗುಡ್ಡೆ ಕೈರಬೆಟ್ಟು, ಕಲ್ಕಾರ್ ರಸ್ತೆ ಡಾಂಬರು ಕಿತ್ತು ಹೋಗಿದ್ದು, ಅಲ್ಲಲ್ಲಿ ಹೊಂಡಗಳು ನಿರ್ಮಾಣಗೊಂಡಿವೆ. ಜನರನ್ನು ಸಮಾಧಾನಪಡಿಸಲು ಹೊಂಡಗಳನ್ನು ಮುಚ್ಚಿ ತೇಪೆ ಕಾರ್ಯ ನಡೆಸಿದ ಗುತ್ತಿಗೆದಾರನ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.
ರಸ್ತೆ ಹೊಂಡ ಮುಚ್ಚಿ ತೇಪೆ ಕಾರ್ಯ ಮಾಡುವ ಗುತ್ತಿಗೆದಾರ ಸಣ್ಣ ಪುಟ್ಟ ಹೊಂಡಗಳನ್ನು ಮಾತ್ರ ಸರಿಪಡಿಸಿದ್ದು, ದೊಡ್ದ ಗಾತ್ರ ಹೊಂಡಕ್ಕೆ ತೇಪೆ ಹಾಕದೆ ಜನರ ಕಣ್ಣಿಗೆ ಮಣ್ಣೆರಚುವಂತೆ ಮಾಡಿದ್ದಾರೆ. ಕಲ್ಯಾ ನೆಲ್ಲಿಗುಡ್ಡೆ ಪರಿಸರದಲ್ಲಿ ಬಹುತೇಕ ಕಲ್ಲು ಕ್ವಾರಿಗಳು, ಕ್ರಶರ್‌ಗಳಿರುವುದರಿಂದ ನಿತ್ಯ ನೂರಾರು ಘನ ವಾಹನಗಳು ಸಂಚರಿಸುತ್ತವೆ. ಇದರಿಂದ ಡಾಂಬರು ಕಿತ್ತು ಹೋಗಿ ವಾಹನ ಸಂಚಾರಕ್ಕೆ ಕಷ್ಟವಾಗುತ್ತಿದೆ. ಈ ಭಾಗದ ಜನರ ಒತ್ತಾಸೆಗೆ ಮಣಿದು ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಭಾರಿ ಪ್ರಯತ್ನ ನಡೆಸಿದ್ದರು. ಪರಿಣಾಮ ಲೋಕಸಭಾ ಚುನಾವಣಾ ಸಂದರ್ಭ ಈ ರಸ್ತೆಗೆ ಪ್ಯಾಚ್‌ವರ್ಕ್ ಭಾಗ್ಯ ದೊರೆತಿದೆ. ಅಲ್ಲಲ್ಲಿ ಹೊಂಡಗಳನ್ನು ಮುಚ್ಚಿ ತೇಪೆ ಹಾಕುವ ಕೆಲಸ ಮಾತ್ರ ನಡೆಯುತ್ತಿದ್ದು, ರಸ್ತೆಗೆ ಸಂಪೂರ್ಣ ಡಾಂಬರು ಹಾಕಬೇಕೆಂಬ ಕೂಗು ಬಲವಾಗಿ ಕೇಳಿ ಬಂದಿದೆ.

ಬಸ್ ಸಂಚಾರವೂ ಸ್ಥಗಿತ: ಕೈರಬೆಟ್ಟು ನೆಲ್ಲಿಗುಡ್ಡೆ ಪ್ರದೇಶದಲ್ಲಿ ಈ ಹಿಂದೆ ಹಲವು ಬಸ್‌ಗಳು ಓಡಾಟ ನಡೆಸುತ್ತಿತ್ತು. ಹದಗೆಟ್ಟ ರಸ್ತೆಯಿಂದ ಈಗ ಕೇವಲ ಒಂದು ಬಸ್ ಓಡಾಡುತ್ತಿದೆ. ಸಂಪೂರ್ಣ ಹೊಂಡಮಯ ರಸ್ತೆಯಿಂದ ಬೇಸತ್ತ ಬಸ್ ಮಾಲೀಕರು ಬಸ್ ಓಡಾಟ ಸ್ಥಗಿತಗೊಳಿಸಿದ್ದಾರೆ. ಪರಿಣಾಮ ಈ ಭಾಗದ ಗ್ರಾಮಸ್ಥರು, ವೃದ್ಧರು, ವಿದ್ಯಾರ್ಥಿಗಳು ಪ್ರತಿನಿತ್ಯ 6-7 ಕಿ.ಮೀ ಕಾಲು ನಡಿಗೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಕೈರಬೆಟ್ಟುವಿನಲ್ಲಿ ನೂತನ ಸೇತುವೆ ನಿರ್ಮಾಣವಾಗುತ್ತಿದ್ದು, ಅದರ ಜತೆಗೆ ಕೈರಬೆಟ್ಟು, ನೆಲ್ಲಿಗುಡ್ಡೆ, ಕಲ್ಯಾ ರಸ್ತೆಯ ಸಂಪೂರ್ಣ ಡಾಂಬರು ಕಾಮಗಾರಿ ನಡೆಯಲಿ ಎನ್ನುವುದು ಬಹುತೇಕ ಜನರ ಒತ್ತಾಯ.

ಗುತ್ತಿಗೆದಾರರು ಬರಿಯ ಸಣ್ಣಪುಟ್ಟ ಹೊಂಡಕ್ಕೆ ಮಾತ್ರ ತೇಪೆ ಹಾಕಿದ್ದಾರೆ. ರಸ್ತೆಯಲ್ಲಿ ದೊಡ್ಡ ಹೊಂಡಗಳು ಈಗಲೂ ಹಾಗೆಯೇ ಇದೆ. ಇದು ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ.
| ಸತೀಶ್ ಶೆಟ್ಟಿ ಸ್ಥಳೀಯ ನಿವಾಸಿ

ರಸ್ತೆ ಮರು ಡಾಂಬರು ಕಾಮಗಾರಿಗೆ ಅಗತ್ಯ ಅನುದಾನ ಬಿಡುಗಡೆಗೊಂಡಿಲ್ಲ. ಮಳೆಗಾಲ ಸಮೀಪಿಸುತ್ತಿರುವ ಕಾರಣ ತಾತ್ಕಾಲಿಕವಾಗಿ ತೇಪೆ ಕಾರ‌್ಯ ನಡೆಯುತ್ತಿದೆ. ಅನುದಾನ ಮಂಜೂರುಗೊಂಡ ಕೂಡಲೇ ಮರು ಡಾಂಬರು ಹಾಕಲಾಗುವುದು.
|ಸುಮಿತ್ ಶೆಟ್ಟಿ ಜಿಲ್ಲಾ ಪಂಚಾಯಿತಿ ಸದಸ್ಯ

Leave a Reply

Your email address will not be published. Required fields are marked *