More

    ಕಲ್ಕಾರ್ ಸಮೀಪದ ಸೇತುವೆ ಆದರೂ ರಸ್ತೆ ವಿಳಂಬ

    ಬೆಳ್ಮಣ್: ಕಲ್ಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಕಾರಿನಲ್ಲಿ ರಸ್ತೆಯ ಸಹಿತ ಸೇತುವೆ ಹದಗೆಟ್ಟಿದೆ. ಶಾಸಕ ಸುನೀಲ್ ಕುಮಾರ್ ಅವರ ಕಳೆದ ಬಾರಿಯ ಅವಧಿಯಲ್ಲಿ ಅನುದಾನ ಮಂಜೂರಾಗಿ ಸುಂದರ ಸೇತುವೆ ನಿರ್ಮಾಣವಾದರೂ ಸಮೀಪದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರ ಕಷ್ಟವೆನಿಸಿದೆ.

    ರಸ್ತೆ ಹಾಗೂ ಸೇತುವೆ ಶಿಥಿಲ ವ್ಯವಸ್ಥೆಯಲ್ಲಿದ್ದು ಹಲವು ದಶಕದಿಂದ ಈ ಭಾಗದ ಗ್ರಾಮಸ್ಥರು ಸುಂದರ ರಸ್ತೆಯ ಸಹಿತ ಸೇತುವೆಯ ನಿರ್ಮಾಣಕ್ಕೆ ಮನವಿ ಮಾಡಿದ್ದು, ಕೊನೆಗೂ ಸೇತುವೆ ನಿರ್ಮಾಣಗೊಂಡರೂ ರಸ್ತೆ ಕಾಮಗಾರಿ ನಿಧಾನವಾಗುತ್ತಿದೆ. ಸೇತುವೆ ಬಳಿ ಎರಡೂ ಪಾರ್ಶ್ವಗಳಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕಲ್ಯಾ- ಹಾಳೆಕಟ್ಟೆ -ಬೆಳ್ಮಣ್ ಹಾಗೂ ಪಳ್ಳಿ -ಕುಂಟಾಡಿ- ಮೂಡುಬೆಳ್ಳೆ -ಉಡುಪಿಯತ್ತ ಸಾಗುವ ವಾಹನ ಸವಾರರು ಸಂಕಟ ಅನುಭವಿಸುವಂತಾಗಿದೆ.


    ಪಳ್ಳಿ ಗ್ರಾಮ ಪಂಚಾಯಿತಿಯಿಂದ ಬೇರ್ಪಟ್ಟು ನಾಲ್ಕು ವರ್ಷಗಳ ಹಿಂದೆ ಕಲ್ಯಾ ನೂತನ ಗ್ರಾಮ ಪಂಚಾಯಿತಿ ನಿರ್ಮಾಣಗೊಂಡಿದ್ದು, ನೂತನ ಪಂಚಾಯಿತಿ ಕಚೇರಿ ಹಾಗೂ ಗ್ರಾಮಕರಣಿಕರ ಕಚೇರಿ ಮತ್ತು ನ್ಯಾಯಬೆಲೆ ಅಂಗಡಿ ಸಂಪರ್ಕಿಸಲು ಕುಂಟಾಡಿ, ಕೈರಬೆಟ್ಟು ಭಾಗದ ಗ್ರಾಮಸ್ಥರು ಇದೇ ಮಾರ್ಗ ಅವಲಂಬಿಸಬೇಕಾಗಿದೆ. ಹೊಂಡಗುಂಡಿಗಳಿಂದ ತುಂಬಿದ ಈ ರಸ್ತೆಯಲ್ಲಿ ಕಾರು, ಆಟೋರಿಕ್ಷಾ ಯಾವುದೇ ಬಾಡಿಗೆ ವಾಹನಗಳ ಚಾಲಕರು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.

    ಇಲ್ಲಿನ ರಸ್ತೆಯ ಸಹಿತ ಸೇತುವೆಯ ನಿರ್ಮಾಣಕ್ಕೆ 2.82 ಕೋಟಿ ರೂ. ಅನುದಾನ ಮಂಜೂರಾಗಿದೆ. ಸೇತುವೆಯ ಎರಡೂ ಪಾರ್ಶ್ವದಲ್ಲಿ ಒಂದು ಕಿ.ಮೀ ಉದ್ದದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯುದ್ದಕ್ಕೂ ಬಹತ್ ಗಾತ್ರದ ಹೊಂಡಗಳು ನಿರ್ಮಾಣಗೊಂಡಿದ್ದು, ಬಸ್ಸುಗಳೂ ಸಂಚಾರ ಸ್ಥಗಿತಗೊಳಿಸಿವೆ. ಈ ಭಾಗದಲ್ಲಿ ಹಲವು ಕ್ವಾರಿಗಳಿರುವುದರಿಂದ ಲಾರಿಗಳ ಸಂಚಾರಕ್ಕೆ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ.
    ಗುತ್ತಿಗೆದಾರರು ಮಳೆಗಾಲದ ಸಂದರ್ಭ ಡಾಂಬರು ನಡೆಸುವುದು ಕಷ್ಟ, ಮಳೆಗಾಲ ಮುಗಿದ ಬಳಿಕ ಕಾಮಗಾರಿ ನಡೆಸುತ್ತೇವೆ ಎನ್ನುವ ಭರವಸೆ ನೀಡಿದ್ದು ಪ್ರಸಕ್ತ ಮಳೆಗಾಲ ಮುಗಿದರೂ ಕಾಮಗಾರಿ ಆರಂಭವಾಗದಿರುವ ಬಗ್ಗೆ ಗ್ರಾಮಸ್ಥರಲ್ಲಿ ಅಸಮಾಧಾನ ಉಂಟಾಗಿದೆ. ರಸ್ತೆ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸುವಂತೆ ಜನಪ್ರತಿನಿಧಿಗಳು ಕ್ರಮ ವನ್ನು ಕೈಗೊಳ್ಳಬೇಕು, ಉತ್ತಮ ರಸ್ತೆ ಸಹಿತ ಸೇತುವೆಯ ಕಾಮಗಾರಿ ಬೇಗ ಪೂರ್ಣಗೊಳ್ಳಬೇಕಾಗಿದೆ ಎನ್ನುವುದು ಗ್ರಾಮಸ್ಥರ ಒತ್ತಾಯ.

    ಹಲವು ವರ್ಷಗಳ ಬಳಿಕ ಇಲ್ಲಿ ಸೇತುವೆ ನಿರ್ಮಾಣವಾಗಿದೆ. ಸೇತುವೆಯ ಕಾಮಗಾರಿ ನಡೆದು ವರ್ಷ ಸನಿಹವಾದರೂ ರಸ್ತೆಯ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಕಾಮಗಾರಿ ಸುಮ್ಮನೆ ವಿಳಂಬ ಮಾಡಲಾಗುತ್ತಿದೆ.
    ಸುರೇಶ್, ಸ್ಥಳೀಯ ನಿವಾಸಿ

    ಆದಷ್ಟು ಬೇಗ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಎಂದು ಜನಪ್ರತಿನಿಧಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿಯಾದರೂ ಗಮನ ಹರಿಸುವರೇ ನೋಡಬೇಕಿದೆ.
    ವಸಂತಿ ಪೂಜಾರಿ, ಸ್ಥಳೀಯ ನಿವಾಸಿ

    ಗುತ್ತಿಗೆದಾರರೊಂದಿಗೆ ಮಾತನಾಡಿ ಕೂಡಲೇ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಗುಣಮಟ್ಟದ ಕಾಮಗಾರಿ ನಡೆಸುವಂತೆ ತಿಳಿಸುತ್ತೇವೆ.
    ಸುಮಿತ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ


    ಹರಿಪ್ರಸಾದ್ ನಂದಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts