ಕೂಡಲಸಂಗಮ, ಬಸವಕಲ್ಯಾಣ ಅಂತಾರಾಷ್ಟ್ರೀಯ ಧರ್ಮ ಕ್ಷೇತ್ರಗಳಾಗಲಿ

ಬಸವಕಲ್ಯಾಣ: ಇಲ್ಲಿನ ಬಸವಧರ್ಮ ಪೀಠದ ಬಸವ ಮಹಾಮನೆ ಪರಿಸರದಲ್ಲಿ ಮೂರು ದಿನದ 17ನೇ ಕಲ್ಯಾಣ ಪರ್ವಕ್ಕೆ ಶನಿವಾರ ಅದ್ದೂರಿ ಚಾಲನೆ ದೊರೆತಿದೆ. ಬಸವ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಡಾ.ಮಾತೆ ಮಹಾದೇವಿ ಸಾನ್ನಿಧ್ಯದ ಪರ್ವಕ್ಕೆ ರಾಜ್ಯ ಸೇರಿ ನೆರೆಯ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದ ಸಾವಿರಾರು ಬಸವ ಭಕ್ತರು ಸಾಕ್ಷಿಯಾದರು.
ಡಾ.ಮಾತೆ ಮಹಾದೇವಿ ಆಶೀರ್ವಚನ ನೀಡಿ, ಕೂಡಲಸಂಗಮ ಗುರು ಬಸವಣ್ಣನವರ ವಿದ್ಯಾಭೂಮಿ, ತಪೋ ಭೂಮಿ, ಐಕ್ಯ ಕ್ಷೇತ್ರವಾದರೆ, ಬಸವಕಲ್ಯಾಣ ಅವರು 36 ವರ್ಷ ನೆಲೆಸಿದ ಪವಿತ್ರ ನೆಲ. ವಚನ ಸಾಹಿತ್ಯ ರಚನೆಯಾದ ಭೂಮಿ. ಈ ಎರಡೂ ಕ್ಷೇತ್ರಗಳು ಅಂತಾರಾಷ್ಟ್ರೀಯ ಧರ್ಮ ಕ್ಷೇತ್ರಗಳಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
12ನೇ ಶತಮಾನದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಸತ್ಯ ಸಾಧಕರು, ಸಂಶೋಧಕರು ಕಲ್ಯಾಣದ ಕಡೆ ಬಂದರು. ಗುರು ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟದಲ್ಲಿ ವಿಶ್ವ ಮಟ್ಟದ ವಚನ ಸಾಹಿತ್ಯ ರಚನೆಯಾಯಿತು. ಬಸವ ತತ್ವದ ಪ್ರಸಾರವಾಗಬೇಕು. ಕಲ್ಯಾಣ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಕೇಂದ್ರವಾಗಬೇಕು ಎಂಬ ಆಶಯದೊಂದಿಗೆ ಆರಂಭವಾದ ಕಲ್ಯಾಣ ಪರ್ವ ಹಲವು ಸಂಕಷ್ಟಗಳ ಮಧ್ಯೆ 16 ವರ್ಷ ಪೂರ್ಣಗೊಳಿಸಿದೆ ಎಂದರು.
ಸಮ ಸಮಾಜ ನಿಮರ್ಾಣಕ್ಕೆ ಅಂದು ಅನುಭವ ಗೋಷ್ಠಿ, ಸಹಪಂಕ್ತಿ ಭೋಜನ, ಅಂತರ್ಜಾತಿ ವಿವಾಹ ಸೇರಿ ಹಲವು ಕಾರ್ಯ ನಡೆಯುತ್ತಿದ್ದವು. ದೇಶ ವಿದೇಶದಿಂದ ಸಾಧಕರು ಭಾಗವಹಿಸುತ್ತಿದ್ದರು ಎಂಬುದು ಕಾವ್ಯಗಳಲ್ಲಿ ಪ್ರಸ್ತಾಪವಾಗಿದೆ. ಅದೇ ಮಾದರಿಯಲ್ಲಿ ಈಗ ಕಲ್ಯಾಣ ಪರ್ವ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಶಾಸಕ ಬಿ.ನಾರಾಯಣರಾವ ಮಾತನಾಡಿ, ಇದುವರೆಗಿನ ಎಲ್ಲ ಕಲ್ಯಾಣ ಪರ್ವಗಳಲ್ಲಿ ಭಾಗವಹಿಸಿದ್ದೇನೆ. ಇಂದು ಶಾಸಕನಾಗಿ ಕಲ್ಯಾಣ ಪರ್ವ ಉದ್ಘಾಟಿಸುತ್ತಿರುವುದು ನನ್ನ ಭಾಗ್ಯ. ಮಾತಾಜಿ ಇಲ್ಲಿ ಕಲ್ಯಾಣ ಪರ್ವ ಆರಂಭಿಸುವಾಗ ಕೊಂಡಿ ಮಿಂಚಣ್ಣಗಳು ಸಮಸ್ಯೆ ಒಡ್ಡಿದ್ದರು. ಅಂಥವರು ಈಗಲೂ ಕೆಲವರಿದ್ದಾರೆ. ಅವರ ಮನ ಪರಿವರ್ತಿಸಲಾಗುವುದು ಎಂದರು.
ಧ್ವಜಾರೋಹಣ ನೆರವೇರಿಸಿದ ಶಾಸಕ ಎಂ.ವೈ.ಪಾಟೀಲ್ ಮಾತನಾಡಿ, ಹಸಿದವರಿಗೆ, ಶರಣ ಧರ್ಮದ ಹಸಿವಿರುವವರಿಗೆ ಧರ್ಮವನ್ನು ತಲುಪಿಸುವ ಕೆಲಸ ನಡೆಯಬೇಕಿದೆ. ಗುಡಿಸಲುಗಳಿಗೆ ತೆರಳಿ ಧರ್ಮ ತಿಳಿಸಬೇಕಿದೆ. ಲಿಂಗಾಯತ ಧರ್ಮದ ಮಾನ್ಯತೆಗಾಗಿ ನಡೆಸುತ್ತಿರುವ ಹೋರಾಟಕ್ಕೆ ನಾವೆಲ್ಲರೂ ಕೈಜೋಡಿಸುತ್ತೇವೆ ಎಂದು ಹೇಳಿದರು.
ದಲಿತ ಮುಖಂಡ ಅನೀಲ ಬೆಲ್ದಾರ ಮಾತನಾಡಿದರು. ಧಾರವಾಡದ ಜಗದ್ಗುರು ಮಾತೆ ಗಂಗಾದೇವಿ, ಶ್ರೀ ಬಸವಕುಮಾರ ಸ್ವಾಮೀಜಿ, ಶ್ರೀ ಚನ್ನಬಸವಾನಂದ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಬಸವ ಹರಳಯ್ಯ ಸ್ವಾಮೀಜಿ ಇತರ ಪೂಜ್ಯರ ನೇತೃಥ್ವದ ಪರ್ವದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ್, ತೆಲಂಗಾಣ ರಾಷ್ಟ್ರೀಯ ಬಸವದಳ ಅಧ್ಯಕ್ಷ ಧನರಾಜ ಜೀರಗೆ, ನಗರಸಭೆ ಅಧ್ಯಕ್ಷ ಮೀರ್ ಅಜರಲಿ ನವರಂಗ, ಪ್ರಮುಖರಾದ ಶಿವರಾಜ ನರಶೆಟ್ಟಿ, ದಿಲೀಪ ಸಿಂಧೆ, ವಿಲಾಸ ಮೋರೆ, ರೇವಣಪ್ಪ ಹೆಗ್ಗಡೆ, ಡಾ.ಲೋಕೇಶ, ಹೇಮಗಿರೀಶ ಹಾವಿನಾಳ, ಪೌರಾಯುಕ್ತ ಸುರೇಶ ಬಬಲಾದ, ಶಿವಕುಮಾರ ಘಾಟೆ, ಬಸವದಳ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ್ ಶಿವಪುರ, ಶರಣು ಆಲಗೂಡ, ಮನೋಜ ಮಾಶೆಟ್ಟಿ ಇತರರಿದ್ದರು.
ಧರ್ಮಗುರು ಪೂಜೆಯನ್ನು ಮಾತೆ ಜ್ಞಾನೇಶ್ವರಿ ಹಾಗೂ ಮಾತೆ ದಾನೇಶ್ವರಿ ನೆರವೇರಿಸಿದರು. ಕಲಬುರಗಿ ರಾಷ್ಟ್ರೀಯ ಬಸವದಳ ಅಧ್ಯಕ್ಷ ಆರ್.ಜಿ. ಶೆಟಗಾರ ಸ್ವಾಗತಿಸಿದರು. ಚಂದ್ರಮೌಳಿ ಲಿಂಗಾಯತ ನಿರೂಪಣೆ ಮಾಡಿದರು.

ಮೂಲ ಸ್ಥಳದಲ್ಲೇ ಅನುಭವ ಮಂಟಪ ನಿರ್ಮಿಸಿ: ಗುರು ಬಸವಣ್ಣನವರ ಕಾರ್ಯಕ್ಷೇತ್ರ ಬಸವಕಲ್ಯಾಣದಲ್ಲಿ ಮೂಲ ಅನುಭವ ಮಂಟಪ ಇದ್ದ ಸ್ಥಳದಲ್ಲೇ ಬಿಕೆಡಿಬಿಯಿಂದ ಅನುಭವ ಮಂಟಪ ನಿರ್ಮಿಸಬೇಕು ಎಂದು ಬಸವ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಡಾ.ಮಾತೆ ಮಹಾದೇವಿ ಸಲಹೆ ನೀಡಿದರು. ಬಸವಕಲ್ಯಾಣದಲ್ಲಿ ಮೂಲ ಅನುಭವ ಮಂಟಪ ಇದ್ದ ಸ್ಥಳ ಖಾಸಗಿ ಒಡೆತನದಲ್ಲಿದೆ. ಈ ಸ್ಥಳ ಮಾರಾಟಕ್ಕೆ ಅವರು ಒಪ್ಪಿದ್ದಾರೆ. ಸ್ಥಳವನ್ನು ಖರೀದಿಸಿ ಅಲ್ಲೇ ಅನುಭವ ಮಂಟಪ ನಿರ್ಮಿಸಬೇಕು. ನಗರದ ಪರುಷ ಕಟ್ಟೆ ಪರಿಸರ ಸ್ವಚ್ಛಗೊಳಿಸಿ ಜೀರ್ಣೋದ್ಧಾರ ಮಾಡಬೇಕು. ಈ ಪರಿಸರದಲ್ಲಿರುವ ಜನರಿಗೆ ಬೇರೆಡೆ ಸ್ಥಳ ಒದಗಿಸಿ ಬಿಕೆಡಿಬಿಯಿಂದ ಪರಿಹಾರವೂ ನೀಡಬೇಕು ಎಂದರು.

ದೆಹಲಿ ಸಮಾವೇಶದಲ್ಲಿ ಭಾಗವಹಿಸಿ: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿದ್ದು, ಕೇಂದ್ರ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಡಿಸೆಂಬರ್ 10ರಿಂದ ಮೂರು ದಿನ ನವದೆಹಲಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಗದ್ಗುರು ಡಾ.ಮಾತೆ ಮಹಾದೇವಿ ಕರೆ ನೀಡಿದರು.
ಇಲ್ಲಿನ ಬಸವಧರ್ಮ ಪೀಠದ ಬಸವ ಮಹಾಮನೆ ಪರಿಸರದಲ್ಲಿ 17ನೇ ಕಲ್ಯಾಣ ಪರ್ವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವೀರಶೈವ ಬೇರೆ, ಲಿಂಗಾಯತ ಬೇರೆ. ಈ ಎರಡಕ್ಕೂ ಸಂಬಂಧವಿಲ್ಲ. ಲಿಂಗಾಯತ ಸ್ವತಂತ್ರ ಧರ್ಮವಾಗಿದೆ ಎಂದರು.
ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಕಳೆದ ವರ್ಷ ಬೀದರ್​ನಲ್ಲಿ ಐತಿಹಾಸಿಕ ಸಮಾವೇಶ ನಡೆಸಲಾಗಿತ್ತು. ನಂತರ ರಾಜ್ಯದ ವಿವಿಧೆಡೆ ಸಮಾವೇಶಗಳು ನಡೆದವು. ಬಸವತತ್ವದಲ್ಲಿ ಶ್ರದ್ಧೆ, ನಂಬಿಕೆ ಇರುವ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿದರು. ಸಮಿತಿ ವರದಿ ಸಲ್ಲಿಸಿದ ನಂತರ ಕೇಂದ್ರಕ್ಕೆ ಶಿಫಾರಸು ಮಾಡಿದರು. ಇದು ಸಿದ್ದರಾಮಯ್ಯನವರ ದಿಟ್ಟ ಹೆಜ್ಜೆ ಮತ್ತು ಐತಿಹಾಸಿಕ ನಿರ್ಣಯ ಎಂದು ಬಣ್ಣಿಸಿದರು.

ಅಭಿವೃದ್ಧಿಗೆ ರು. 25 ಕೋಟಿ ಮಂಜೂರಿಗೆ ಯತ್ನ: ಬಸವ ಮಹಾಮನೆ ಪರಿಸರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ತಮ್ಮ ಶಾಸಕೀಯ ಅವಧಿಯಲ್ಲಿ 25 ಕೋಟಿ ರೂ. ಒದಗಿಸಲು ಪ್ರಯತ್ನಿಸುವುದಾಗಿ ಶಾಸಕ ಬಿ.ನಾರಾಯಣರಾವ ಭರವಸೆ ನೀಡಿದರು. 17ನೇ ಕಲ್ಯಾಣ ಪರ್ವ ಉದ್ಘಾಟಿಸಿದ ಅವರು, ಮುಖ್ಯ ರಸ್ತೆಯಿಂದ ಬಸವ ಮಹಾಮನೆಯಲ್ಲಿರುವ ಬಸವಣ್ಣನವರ 108 ಅಡಿ ಪುತ್ಥಳಿವರೆಗೆ ರಸ್ತೆಯಲ್ಲಿ ವಿಭಜಕ ಮತ್ತು ವಿದ್ಯತ್ ದೀಪ ಅಳವಡಿಸಲು 1 ಕೋಟಿ ವೆಚ್ಚದ ಕಾಮಗಾರಿ ಒಂದು ವರ್ಷದೊಳಗೆ ಪೂರ್ಣಗೊಳಿಸುವುದಾಗಿ ತಿಳಿಸಿದರು. ಲಿಂಗಾಯತ ಧರ್ಮ ಮಾನ್ಯತೆಗಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ದಿಲ್ಲಿಯಲ್ಲಿ ಡಿಸೆಂಬರ್​​ನಲ್ಲಿ ಮಾತಾಜಿ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಲು ಕಲ್ಯಾಣದಿಂದ ದಿಲ್ಲಿಗೆ ಹೋಗುವವರಿಗೆ ಅನುಕೂಲ ಕಲ್ಪಿಸಲು ತಾವು 5 ಲಕ್ಷ ರೂ. ವೈಯಕ್ತಿಕವಾಗಿ ನೀಡುವುದಾಗಿ ಭರವಸೆ ನೀಡಿದರು.