ಕಲ್ಲಡ್ಕ ಹತ್ಯೆಗೆ ಮುಂಬೈ ಸುಪಾರಿ!

ಕಾಸರಗೋಡು: ಡಾ.ಕಲ್ಲಡ್ಕ ಪ್ರಭಾಕರ ಭಟ್ ಸೇರಿ ದಕ್ಷಿಣ ಭಾರತದ ಪ್ರಮುಖ ಆರ್​ಎಸ್​ಎಸ್ ಮುಖಂಡರ ಹತ್ಯೆಗಾಗಿ ಕಾಸರಗೋಡು ಡಾನ್​ಗೆ ಮುಂಬೈ ಭೂಗತ ಲೋಕದಿಂದ ಸುಪಾರಿ ನೀಡ ಲಾಗಿತ್ತು ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ.

ಪಾಕಿಸ್ತಾನದ ಭೂಗತ ಲೋಕದ ತಂಡವೊಂದು, ಮುಂಬೈ ತಂಡದೊಂದಿಗೆ ಈ ಸಂಬಂಧ ದೂರವಾಣಿ ಸಂಭಾಷಣೆ ನಡೆಸಿದ ಮಾಹಿತಿ ದೆಹಲಿ ಪೊಲೀಸರಿಗೆ ಲಭಿಸಿದ ಬೆನ್ನಲ್ಲೇ ಕಾಸರಗೋಡು ಚೆಮ್ನಾಡ್ ಪಂಚಾಯಿತಿ ಚೆಂಬರಿಕ ನಿವಾಸಿ, ಸಿ.ಎಂ.ಮುಹತಾಸಿಂ ಅಲಿಯಾಸ್ ತಾಸಿಂನನ್ನು ಬಂಧಿಸಲಾಗಿತ್ತು. ಮುಹತಾಸಿಂ ಮುಂಬೈ ಮತ್ತು ಪಾಕ್ ಭೂಗತಲೋಕದ ಸಂಪರ್ಕ ಹೊಂದಿದ್ದ ಅನುಮಾನ ಈ ಬೆಳವಣಿಗೆಯಿಂದ ಖಚಿತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಡಾನ್ ಆಲಿಯಾಸ್ ಮುಹತಾಸಿಂ ಸದ್ಯ ದೆಹಲಿ ಪೊಲೀಸರ ವಶದಲ್ಲಿದ್ದು, ಆತನ ವಿರುದ್ಧ ಬೇಕಲ ಪೊಲೀಸ್ ಠಾಣೆಯಲ್ಲಿ ನಕಲಿ ಪಾಸ್​ಪೋರ್ಟ್ ಹೊಂದಿದ ಆರೋಪದಲ್ಲಿ ಎರಡು ಪ್ರಕರಣ (ಅಪರಾಧ ಸಂಖ್ಯೆ75/16 ಹಾಗೂ 278/17)ಗಳಿವೆ. 2013ರಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೇಸು ಕೂಡ ದಾಖಲಾಗಿತ್ತು. ಈ ಮಧ್ಯೆ, ಆತ ಚೆಂಬರಿಕ ಬೀಚ್​ನಲ್ಲಿ 50 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ಹೊಸ ಮನೆ ನಿರ್ವಿುಸುತ್ತಿದ್ದಾನೆ ಎಂಬ ಮಾಹಿತಿಯೂ ಇದೆ.

ಸಿ.ಎಂ.ಮುಹತಾಸಿಂ ವಿರುದ್ಧ ಬೇಕಲ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿ ಆತನನ್ನು ಸುಪರ್ದಿಗೆ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದೆ. ನ್ಯಾಯಾಲಯಕ್ಕೆ ಆರೋಪಪಟ್ಟಿ ಹಾಜರುಪಡಿಸಲಾಗಿದೆ. ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿವೆ.

| ವಿನೋದ್​ಕುಮಾರ್ ಬೇಕಲ ಠಾಣೆ ಎಸ್​ಐ