ಪಿಡಿಒ ಕಾರ್ಯವೈಖರಿಗೆ ಗ್ರಾಮಸ್ಥರ ಅಸಮಾಧಾನ

ಕಲಾದಗಿ: ಗ್ರಾಪಂ ಅಭಿವೃದ್ಧಿ ಅಧಿಕಾರಿ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿಲ್ಲ. ಮನೆ ಉತಾರಗಳನ್ನು ನೀಡಲು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಸೀಮಿಕೇರಿ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿದರು.

ಗ್ರಾಪಂ ಅಧ್ಯಕ್ಷರಾದಿಯಾಗಿ 6 ಜನ ಸದಸ್ಯರೊಂದಿಗೆ ಬೆಳಗ್ಗೆ ಗ್ರಾಪಂ ಕಚೇರಿಗೆ ಆಗಮಿಸಿದ ಗ್ರಾಮಸ್ಥರು ಪಿಡಿಒ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟಿದೆ. ದಾರಿದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಗ್ರಾಮದ ಅಭಿವೃದ್ಧಿಗೆ ಬಂದ ಹಣವೆಲ್ಲ ಹಿಂತಿರುಗಿ ಹೋಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಸಂಧಾನಕ್ಕೆ ಯತ್ನ
ಸುದ್ದಿ ತಿಳಿದು ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿದ ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ ಪ್ರತಿಭಟನೆಗೆ ಮುಂದಾದ ಗ್ರಾಪಂ ಸದಸ್ಯರು ಹಾಗೂ ಪ್ರಮುಖರನ್ನು ಸಮಾಧಾನ ಪಡಿಸಲು ಮುಂದಾದರು. ಪ್ರತಿಭಟನೆಗೆ ಮುಂದಾದವರನ್ನು ಗ್ರಾಪಂ ಕಚೇರಿಯೊಳಗೆ ಕರೆದೊಯ್ದ ಪಿಎಸ್‌ಐ, ಪಿಡಿಒ ಮಡಿವಾಳ ಅವರೊಂದಿಗೆ ಸಂಧಾನಕ್ಕೆ ಮುಂದಾದರು. ಈ ವೇಳೆ ಗ್ರಾಮಸ್ಥರು ಹಾಗೂ ಪಿಡಿಒ ನಡುವೆ ಮಾತಿನ ಚಕಮಕಿ ನಡೆಯಿತು.

ಮೇ 23ರ ನಂತರ ಕಾನೂನುಬದ್ಧವಾಗಿ ಅನುಮತಿ ಪಡೆದು ಪ್ರತಿಭಟನೆ ಮಾಡುವ ನಿರ್ಧಾರದೊಂದಿಗೆ ಗ್ರಾಮಸ್ಥರು ಹೋರಾಟ ಹಿಂತೆಗೆದುಕೊಂಡರು.

ಗ್ರಾಪಂ ಅಧ್ಯಕ್ಷೆ ಶಾಂತವ್ವ ಮಾದರ, ಸದಸ್ಯರಾದ ಬೆಣ್ಣೆಪ್ಪ ಸುನಗದ, ನಿಂಗಪ್ಪ ಗೌಡರ, ನೀಲವ್ವ ತಳವಾರ, ಕವಿತಾ ಹೊರಕೇರಿ, ಅಪ್ಪಣಗೌಡ ಹಟ್ಟಿ, ಕಲ್ಲಪ್ಪ ಶಿರಬಡಗಿ, ಗ್ರಾಮಸ್ಥರಾದ ಸಿದ್ದಣ್ಣ ಹೊರಕೇರಿ, ಭರಮಪ್ಪ ಕವಳ್ಳಿ, ಪ್ರಭು ಕೆರಕಲಮಟ್ಟಿ, ಭರಮಪ್ಪ ತಳವಾರ, ಈರಪ್ಪ ಕವಳ್ಳಿ ಇತರರಿದ್ದರು.

ಗ್ರಾಪಂನ ಕೆಲ ಸದಸ್ಯರು ಹಾಗೂ ಗ್ರಾಮಸ್ಥರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನನ್ನ ಅವಧಿಯಲ್ಲಿ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಸಭೆ ನಡೆಯದಿರುವುದರಿಂದ ಉತಾರ ನೀಡುವ ವಿಷಯದಲ್ಲಿ ವಿಳಂಬವಾಗಿರಬಹುದು.
ಶ್ರೀದೇವಿ ಮಡಿವಾಳರ ಸೀಮಿಕೇರಿ ಗ್ರಾಪಂ ಪಿಡಿಒ