ನಿಂತಿಲ್ಲ ಕಳ್ಳಬಟ್ಟಿ ಘಾಟು: ದಂಧೆಗೆ ಅಧಿಕಾರಿಗಳ ಕುಮ್ಮಕ್ಕು, ಏಳು ತಿಂಗಳಲ್ಲಿ 8489 ಪ್ರಕರಣ

| ಬೇಲೂರು ಹರೀಶ ಬೆಂಗಳೂರು

ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜತೆಗೆ ನೂರಾರು ಕುಟುಂಬಗಳನ್ನು ಬೀದಿಗೆ ತಳ್ಳುವ ಕಳ್ಳಬಟ್ಟಿ, ಸಾರಾಯಿ ಘಾಟು ಮತ್ತೆ ರಾಜ್ಯಾದ್ಯಂತ ವ್ಯಾಪಿಸಿದೆ. ರಾಜ್ಯದಲ್ಲಿ ಕಳ್ಳಬಟ್ಟಿ, ಸಾರಾಯಿ ತಯಾರಿಕೆ ಹಾಗೂ ಮಾರಾಟ ನಿಷೇಧಗೊಂಡಿದ್ದರೂ ಬಹುತೇಕ ಜಿಲ್ಲೆಗಳಲ್ಲಿ ಇದು ಅನುಷ್ಠಾನಕ್ಕೆ ಬಂದಿಲ್ಲ. ಕಳೆದ ಏಳು ತಿಂಗಳ ಅವಧಿಯಲ್ಲಿ 8489 ಕಳ್ಳಬಟ್ಟಿ ಪ್ರಕರಣಗಳು ಪತ್ತೆಯಾಗಿರುವುದು ಈ ಅಕ್ರಮ ದಂಧೆಯ ಆಳ, ವಿಸ್ತಾರಕ್ಕೆ ಸಾಕ್ಷಿ. ಒಂದೆಡೆ ಈ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಬೆವರು ಹರಿಸುತ್ತಿದ್ದರೆ ಮತ್ತೊಂದೆಡೆ ಲಂಚಕ್ಕೆ ಕೈಯೊಡ್ಡುವ ಕೆಲವು ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಈ ಅಕ್ರಮ ರಾಜಾರೋಷವಾಗಿ ನಡೆಯುತ್ತಿದೆ.

ಅಕ್ರಮ ಮದ್ಯ ಸೇಲ್: ಕಳ್ಳಬಟ್ಟಿ ದಂಧೆ ಜತೆಗೆ ಅಕ್ರಮ ಮದ್ಯ ಮಾರಾಟವೂ ಜೋರಾಗಿ ನಡೆದಿದೆ. ಅಬಕಾರಿ ಇಲಾಖೆ ನೀಡಿರುವ ಅಂಕಿ ಅಂಶ ಪ್ರಕಾರ 2018 ಜುಲೈನಿಂದ 2019ರ ಜನವರಿವರೆಗೆ 48178 ಲೀ. ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಫೆನ್ನಿ-3551 ಲೀಟರ್, ಬಿಯರ್- 38216 ಲೀಟರ್, ಸೇಂದಿ-5340 ಲೀಟರ್ ಮತ್ತು ವೈನ್-1070 ಲೀಟರ್ ಸೇರಿವೆ. ಹೊರ ರಾಜ್ಯದಿಂದ ರಾಜ್ಯಕ್ಕೆ ಅಕ್ರಮ ಮದ್ಯ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದ್ದು, 7 ತಿಂಗಳಿನಲ್ಲಿ 13691 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ.

ಅಂಗಡಿಗಳಲ್ಲೂ ಸೇಲ್: ಗ್ರಾಮೀಣ ಭಾಗದ ಕಿರಾಣಿ ಅಂಗಡಿಗಳು, ಹೋಟೆಲ್​ಗಳಲ್ಲಿ ಅನುಮತಿ ಇಲ್ಲದಿದ್ದರೂ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಕ್ರಮ ಮದ್ಯ ಮಾರಾಟ ಸಂಬಂಧ ದೂರು ನೀಡಲು ಅಬಕಾರಿ ಇಲಾಖೆ ಹೊಸದಾಗಿ ಕಂಟ್ರೋಲ್ ರೂಂ ತೆರೆದಿದೆ. ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ರಾಮನಗರ ಜಿಲ್ಲೆಯಿಂದ ಹೆಚ್ಚು ದೂರುಗಳು ಬರುತ್ತಿವೆ.

ನಾಮ್​ಕೇವಾಸ್ತೆ ದಾಳಿ

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗದ ಕೆಲವು ಜಿಲ್ಲೆಗಳಲ್ಲಿ ಕಳ್ಳಬಟ್ಟಿ ದಂಧೆ ಜೋರಾಗಿ ನಡೆಯುತ್ತಿದೆ. ಈ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಬಲ ಕಾನೂನು ಇಲ್ಲದಿರುವುದೂ ಅಕ್ರಮ ಹೆಚ್ಚಲು ಕಾರಣವಾಗಿದೆ. ನಾಮ್ೇವಾಸ್ತೆಗೆ ದಾಳಿ ನಡೆಸುವ ಅಧಿಕಾರಿಗಳು ಮದ್ಯ ತಯಾರಿಸುವ ವಸ್ತುಗಳನ್ನು ಜಪ್ತಿ ಮಾಡುವುದನ್ನು ಬಿಟ್ಟರೆ ದಂಧೆಕೋರರನ್ನು ಕಾನೂನಿನ ಸಂಕೋಲೆಯಲ್ಲಿ ಸಿಲುಕಿಸುವುದು ಕಡಿಮೆ.

ಕಳ್ಳಬಟ್ಟಿ ಕೇಂದ್ರಗಳ ಮೇಲೆ ನಿತ್ಯ ದಾಳಿ ನಡೆಸಿ ಮದ್ಯ ಜಪ್ತಿ ಮಾಡಿ ಮಾರಾಟಗಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತಿದ್ದೇವೆ. ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಅಲ್ಲಿ ವಿಶೇಷವಾಗಿ ನಿಗಾ ಇಟ್ಟಿದ್ದೇವೆ.

| ಎಸ್.ಎಲ್.ರಾಜೇಂದ್ರ ಪ್ರಸಾದ್ ಹೆಚ್ಚುವರಿ ಆಯುಕ್ತರು ಅಬಕಾರಿ ಇಲಾಖೆ.

ಎಲ್ಲಿ ಎಷ್ಟು ಕೇಸ್?

ಬಾಗಲಕೋಟೆ ಜಿಲ್ಲೆ ಕಳ್ಳಬಟ್ಟಿ ದಂಧೆಯಲ್ಲಿ ಅಗ್ರಸ್ಥಾನದಲ್ಲಿದೆ. ಇಲ್ಲಿ 7 ತಿಂಗಳಲ್ಲಿ 1365 ಪ್ರಕರಣ ದಾಖಲಾಗಿವೆ. ಬೆಳಗಾವಿ- 939, ವಿಜಯಪುರ-807, ಬೀದರ್-466 ಮತ್ತು ಧಾರವಾಡ-400 ಪ್ರಕರಣಗಳು ದಾಖಲಾಗಿವೆ. ಈ ಭಾಗದ ಸಾವಿರಾರು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಕಳ್ಳಬಟ್ಟಿ ಹಾವಳಿಯಿಂದಾಗಿ ನಲುಗಿವೆ. ಕೂಲಿ ಕಾರ್ವಿುಕರು ದುಡಿದ ದುಡ್ಡಲ್ಲಿ ಶೇ.70 ಹಣವನ್ನು ಕುಡಿಯುವುದಕ್ಕೆ ಖರ್ಚು ಮಾಡುತ್ತಿದ್ದಾರೆ. ಕುಟುಂಬದ ಮಹಿಳೆಯರು ಹಲವು ಬಾರಿ ಸ್ಥಳೀಯ ಪೊಲೀಸ್ ಠಾಣೆಗಳು ಮತ್ತು ಅಬಕಾರಿ ಇಲಾಖೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ.

ಬಂಧನ ಬಳಿಕ ಬಿಡುಗಡೆ

ಕಳ್ಳಬಟ್ಟಿ ಕೇಂದ್ರಗಳ ಮೇಲೆ ದಾಳಿ ನಡೆಸಿರುವ ಅಬಕಾರಿ ಇಲಾಖೆ 2018ರ ಜುಲೈಯಿಂದ 2019ರ ಜನವರಿವರೆಗೆ 8489 ಪ್ರಕರಣ ದಾಖಲಿಸಿಕೊಂಡಿದೆ. ಒಟ್ಟಾರೆ 2931 ಲೀಟರ್ ಕಳ್ಳಬಟ್ಟಿ ಮತ್ತು 5884 ಲೀಟರ್ ಬೆಲ್ಲದ ಕೊಳೆ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ 188 ಮಂದಿಯನ್ನು ಬಂಧಿಸಿ ಬಿಡುಗಡೆ ಮಾಡಿದೆ.

ಲೋಕಲ್ ಫೈಟ್ ಮೇಲೆ ನಿಗಾ

ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಬಳಿಕ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳಬಟ್ಟಿ ಹೊಳೆಯೇ ಹರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ರಾಜ್ಯಾದ್ಯಂತ ನಿಗಾ ವಹಿಸಿದೆ. ಮತದಾರರಿಗೆ ಕಳ್ಳಬಟ್ಟಿ ಹಂಚುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಇಲಾಖೆ ಮುಂದಾಗಿದೆ.

Leave a Reply

Your email address will not be published. Required fields are marked *