ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ

ಕಲಕೇರಿ: ಮಾನವನ ದೇಹದಲ್ಲಿ ಯಾವುದಾದರೂ ಅಂಗವಿಲ್ಲದಿದ್ದರೆ ಜೀವನ ಸಾಗಿಸಬಹುದು. ಆದರೆ, ಕಣ್ಣು ಇಲ್ಲದಿದ್ದರೆ ಬದುಕಿನ ಬಂಡಿ ಎಳೆಯುವುದು ದುಸ್ತರ. ಆದ್ದರಿಂದ ಭಗವಂತ ನೀಡಿದ ಅಮೂಲ್ಯವಾದ ಕಣ್ಣುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಂತೇಕೆಲ್ಲೂರಿನ ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ ಹೇಳಿದರು.

ಸಮೀಪದ ಬೆಕಿನಾಳ ಗ್ರಾಮದಲ್ಲಿ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ, ವಿಜನ್ ಫೌಂಡೇಷನ್, ಅಂಧತ್ವ ನಿವಾರಣೆ ಸಂಸ್ಥೆ, ಆದಿತ್ಯ ಅಶೋಕ ವಡ್ಡೋಡಗಿ ಅವರ ಪರಿವಾರ, ಘನಮಠೇಶ್ವರ ಶಿಕ್ಷಣ ಸಂಸ್ಥೆ ತಾಳಿಕೋಟೆ, ಸಿದ್ಧೇಶ್ವರ ಆಫ್ಟಿಕಲ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನೇತ್ರ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಲಕ್ಷಾಂತರ ಜನ ಕಣ್ಣುಗಳಿಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಮರಣಾನಂತರ ಕಣ್ಣುಗಳನ್ನು ಸ್ವಯಂ ಪ್ರೇರಣೆಯಿಂದ ದಾನ ಮಾಡಲು ಮುಂದಾಗಬೇಕು. ಅಂಧರ ಬಾಳಿಗೆ ಬೆಳಕಾಗಬೇಕು ಎಂದರು.

ತಾಳಿಕೋಟೆ ಘನಮಠೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವಶರಣ ಸಜ್ಜನ್, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಿ.ಎಸ್. ಪಾಟೀಲ ಯಾಳಗಿ ಮಾತನಾಡಿ, ಪಂಚ ಇಂದ್ರೀಯಗಳಲ್ಲಿ ಅತಿ ಮುಖ್ಯವಾದುದು ಕಣ್ಣುಗಳು. ಅವುಗಳ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಬಿ.ಎಲ್. (ಚಬನೂರ), ಸಿದ್ದು ಭುಳ್ಳಾ, ಆದಿತ್ಯ ವಡ್ಡೋಡಗಿ ಇತರರು ಮಾತನಾಡಿದರು. ಗ್ರಾಪಂ ಅಧ್ಯಕ್ಷ ವಿಜುಗೌಡ ಚೌದ್ರಿ, ಎಪಿಎಂಸಿ ಅಧ್ಯಕ್ಷ ಹಳ್ಳೆಪ್ಪಗೌಡ ಚೌದ್ರಿ, ತಾಪಂ ಸದಸ್ಯ ಪ್ರಭುಗೌಡ ಬಿರಾದಾರ, ಬಿ.ಆರ್. ಶಹಾಪುರ, ಜಿ.ಎಂ. ವಾಲಿಕಾರ ಇತರರಿದ್ದರು. ಎಸ್.ಎಂ. ಸಜ್ಜನ್ ಸ್ವಾಗತಿಸಿದರು. ಎಸ್.ವೈ.ವಾಲಿಕಾರ ನಿರೂಪಿಸಿದರು. ಎ.ಎ. ವಂದಿಸಿದರು.

ನೇತ್ರ ತಜ್ಞರು, ವೈದ್ಯರು ಮತ್ತು ಅನುಗ್ರಹ ಕಣ್ಣಿನ ಆಸ್ಪತ್ರೆ ಸಿಬ್ಬಂದಿ 700ಕ್ಕೂ ಹೆಚ್ಚು ಜನರ ನೇತ್ರ ತಪಾಸಣೆ ನಡೆಸಿದರು. 190 ಜನರಿಗೆ ಶಸ್ತ್ರ ಚಿಕಿತ್ಸೆ ಅವಶ್ಯ ಇದ್ದು, ಪ್ರತಿದಿನ 50 ಜನರಂತೆ ಕರೆದೊಯ್ದು ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ಕಾರ್ಯಕ್ರಮದ ಸಂಘಟಿಕರು ಹೇಳಿದರು. ಶಿಬಿರದಲ್ಲಿ ಅಸ್ಕಿ, ಅಸಂತಾಪುರ, ಗುಂಡಕನಾಳ, ಜಲಪುರ, ಕಲಕೇರಿ, ಬನ್ನೆಟ್ಟಿ ಸೇರಿ ವಿವಿಧ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.