ಬಸವನಬಾಗೇವಾಡಿ: ಪ್ರತಿ ವರ್ಷದಂತೆ ಈ ವರ್ಷವು ಜಗನ್ಮಾತೆ ಕಾಳಿಕಾದೇವಿ ಜಾತ್ರಾ ಮಹೋತ್ಸವ, ಧರ್ಮಸಭೆ, ಪಲ್ಲಕ್ಕಿ ಉತ್ಸವ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಫೆ. 15 ಮತ್ತು 16ರಂದು ಜರುಗಲಿವೆ.
ಪಟ್ಟಣದ ಓಂ ನಗರದಲ್ಲಿರುವ ಕಾಳಿಕಾದೇವಿ ಆವರಣದಲ್ಲಿ ಫೆ. 15ರಂದು ಬೆಳಗ್ಗೆ 8ಕ್ಕೆ ವಿಶ್ವಕರ್ಮ ಧರ್ಮ ಧ್ವಜಾರೋಹಣ ಹಾಗೂ ದೇವಾಲಯದ ಕಳಸಾರೋಹಣ ಕಾರ್ಯಕ್ರಮ, 8.30ಕ್ಕೆ ಕಾಳಿಕಾದೇವಿಗೆ ಅಭಿಷೇಕ ನಂತರ ಸರ್ವ ಅಲಂಕಾರ ಪೂಜಾ ಕಾರ್ಯಕ್ರಮ, 9ಕ್ಕೆ ಚಂಡಿಕಾಹೋಮ, ಧರ್ಮಗುರುಗಳ ನೇತೃತ್ವದಲ್ಲಿ ಹಾಗೂ ವೈದಿಕ ಪೌರೋಹಿತದಲ್ಲಿ ಜರುಗಲಿದೆ. ಮಧ್ಯಾಹ್ನ 12ಕ್ಕೆ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ, ಮಹಾಪ್ರಸಾದ. ಸಂಜೆ 4ಕ್ಕೆ ಧರ್ಮಸಭೆ, 6ಕ್ಕೆ ದಶಮಾನೋತ್ಸವ ಅಂಗವಾಗಿ ದೀಪೋತ್ಸವ ಜರುಗಲಿದೆ.
ಫೆ. 16ರಂದು ಬೆಳಗ್ಗೆ 7ಕ್ಕೆ ಕಾಳಿಕಾದೇವಿಯ ಅಲಂಕಾರ ಪೂಜೆ, 9ಕ್ಕೆ ಕುಂಭಮೇಳ, ಆರತಿ ಕಳಸ ಹಾಗೂ ಛತ್ರಿಚಾಮರ, ಪುರವಂತರ ಸೇವೆಯೊಂದಿಗೆ ಸಕಲ ಮಂಗಳ ವಾದ್ಯ ವೈಭವದೊಂದಿಗೆ ಅಲಂಕೃತ ಪಲ್ಲಕ್ಕಿಯಲ್ಲಿ ಕಾಳಿಕಾದೇವಿ ಉತ್ಸವ ಮೂರ್ತಿ ಪುರಪ್ರವೇಶ ಹಾಗೂ ಗಂಗಸ್ಥಳಕ್ಕೆ ಮೆರವಣಿಗೆಯೊಂದಿಗೆ ಹೋಗಿಬರುವುದು. ಮಧ್ಯಾಹ್ನ 1ಕ್ಕೆ ಮಹಾಪ್ರಸಾದ, ಸಂಜೆ 6ಕ್ಕೆ ಸಂಗೀತ, ರಸಮಂಜರಿ ಕಾರ್ಯಕ್ರಮಗಳು ಜರುಗಲಿವೆ ಎಂದು ಕಾಳಿಕಾದೇವಿ ದೇವಸ್ಥಾನದ ಕಮಿಟಿಯ ಅಧ್ಯಕ್ಷ ಕೆ.ಬಿ. ಕಡೆಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.