More

  ಕಾಳಿ ಕಣಿವೆಯ ಶಿವತಾಣ ಕವಳಾ

  ಗಿರೀಶ ಪಾಟೀಲ ಜೊಯಿಡಾ

  ಸಮೃದ್ಧ ಹಸಿರಿನಿಂದ ಕೂಡಿದ ಕಾಳಿ ಕಣಿವೆಗಳ ಸಾಲು. ಇವುಗಳ ನಡುವೆ ಕಾಳಿ ಕಣಿವೆ ತಪ್ಪಲಿನಲ್ಲಿ ಬೃಹದಾಕಾರದ ಗುಹೆ. ಗುಹೆಯ ಕೆಳಭಾಗದ ಕಣಿವೆಯಲ್ಲಿ ಹರಿಯುತ್ತಿರುವ ಕಾಳಿ ನದಿ. ಇವಿಷ್ಟು ಅಚ್ಚರಿಗಳನ್ನು ತನ್ನಲ್ಲಿ ಹುದುಗಿಸಿರುವ ಜೊಯಿಡಾ ತಾಲೂಕಿನ ಪ್ರಸಿದ್ಧ ಯಾತ್ರಾ ತಾಣವೇ ಕವಳಾ ಗುಹೆ. 100 ಮೀಟರ್ ಉದ್ದದ ಗುಹೆಯ ಒಳಭಾಗದಲ್ಲಿ ನಿಸರ್ಗ ನಿರ್ವಿುತ ಅಚ್ಚ ನೆರಳೆ ಬಣ್ಣದ 5 ಅಡಿ ಎತ್ತರದ ಉದ್ಭವ ಶಿವಲಿಂಗ ಇದೆ. ಪ್ರತಿವರ್ಷ ಶಿವರಾತ್ರಿಯಂದು ಮಾತ್ರ ಈ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಈ ಬಾರಿ ಫೆ. 21ರಂದು ಇಲ್ಲಿ ವಿಶೇಷ ಪೂಜೆ, ಜಾತ್ರೆ ನಡೆಯಲಿದೆ.

  ಪ್ರಯಾಸದ ದಾರಿ: ಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕವಳಾ ಶಿವಲಿಂಗ ದರ್ಶನಕ್ಕೆ ಸಾಗಲು ಎರಡು ದಾರಿಗಳಿವೆ. ಒಂದು ಜೊಯಿಡಾ ತಾಲೂಕಿನ ಪಣಸೋಲಿ ತಲುಪಿದರೆ ಅಲ್ಲಿಂದ ಕೆಎಸ್​ಆರ್​ಟಿಸಿ ಬಸ್ ವ್ಯವಸ್ಥೆ ಇದೆ. 8 ಕಿ.ಮೀ. ಬಸ್​ನಲ್ಲಿ ಸಾಗಿ ಮುಂದೆ 5 ಕಿ.ಮೀ. ಅರಣ್ಯದ ಕಚ್ಚಾ ರಸ್ತೆಯಲ್ಲಿ ಕಾಲ್ನಡಿಗೆ ಮೂಲಕ ಕ್ರಮಿಸಿ ಘಟ್ಟದ ಇಳಿಜಾರಿನಲ್ಲಿ ಭಕ್ತರ ಸರತಿ ಸಾಲಿನಲ್ಲಿ ಮೆಟ್ಟಿಲು ಇಳಿದು ಕವಳಾ ಗುಹೆ ತಲುಪಬೇಕು. ಇನ್ನೊಂದು ಮಾರ್ಗವು ಅಂಬಿಕಾನಗರದಿಂದ ನಾಗಝುುರಿ ತಲುಪಿ ಅಲ್ಲಿಂದ ಸಾವಿರ ಮೆಟ್ಟಿಲು ಹತ್ತಿ ಕವಳಾ ತಲುವುದು ಆಗಿದೆ. ಕಣಿವೆಯ ನಡುವಿನ ಕವಳಾ ಗುಹೆಗೆ ಮೆಟ್ಟಿಲುಗಳನ್ನು ನಿರ್ವಿುಸುವ ಮೊದಲು ಇಳಿಜಾರಿನಲ್ಲಿ ಪ್ರಯಾಸದಿಂದ ಸಾಗಬೇಕಿತ್ತು. ಆದರೆ, ನಾಗಝುುರಿ ಪವರ್​ಹೌಸ್ ನಿರ್ವಣದ ಕಾಲದಲ್ಲಿ ಕೆಲ ಮೆಟ್ಟಿಲುಗಳನ್ನು ನಿರ್ವಿುಸಲಾಗಿದ್ದು, ನಂತರದಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಿಂದ ಮೆಟ್ಟಿಲು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಹರಕೆ: ಇಷ್ಟಾರ್ಥ ಸಿದ್ಧಿಗಾಗಿ ಪ್ರತಿವರ್ಷ ಕ್ಷೇತ್ರಕ್ಕೆ ಜಾತ್ರಾ ಸಮಯದಲ್ಲಿ ಬಂದು ಹಣ್ಣುಕಾಯಿ ಮಾಡಿಕೊಂಡು ಹೋಗುವುದಾಗಿ ದೇವರಿಗೆ ಹರಕೆ ಹೊರುತ್ತಾರೆ. ಹಿಂದುಗಳ ಮಾತ್ರವಲ್ಲದೆ, ಅನ್ಯ ಧರ್ವಿುಯರೂ ಕವಳಾ ಜಾತ್ರೆಗೆ ಬರುವುದು ಸೌಹಾರ್ದದ ಸಂಕೇತವಾಗಿದೆ.

  ಭಕ್ತರಿಗೆ ಸೇವೆ: ಅರಣ್ಯ ಇಲಾಖೆ ಮತ್ತು ಪರಿಸರ ಅಭಿವೃದ್ಧಿ ಸಮಿತಿ ಹಾಗೂ ಸ್ವಯಂ ಸೇವಾ ಸಮಿತಿಯವರು ಜಾತ್ರೆಗೆ ಬರುವ ಭಕ್ತರಿಗೆ ಅಲ್ಲಲ್ಲಿ ನೀರಿನ ಅರವಟಿಗೆ ಮಾಡಿ, ಕುಡಿಯುವ ನೀರು ಮತ್ತು ಬೆಲ್ಲ ನೀಡುತ್ತ ಭಕ್ತರ ಪ್ರಯಾಸ ನೀಗಿಸುವ ಕಾರ್ಯ ಮಾಡುತ್ತಾರೆ. ಕೆಲವು ದಾನಿಗಳು ಪ್ರತಿ ವರ್ಷ ವಿವಿಧ ಹಣ್ಣುಗಳನ್ನು ಭಕ್ತರಿಗೆ ನೀಡುತ್ತಾರೆ.

  ಕವಳಾ ಗುಹೆಗೆ ಸಾಗುವ ದಾರಿಯಲ್ಲಿ ಸಾಕಷ್ಟು ಅರಣ್ಯ ಸಿಬ್ಬಂದಿ ನಿಯೋಜಿಸುವ ಬಗ್ಗೆ ತಯಾರಿ ಮಾಡಲಾಗಿದೆ. ನೀರು, ಪಾನೀಯ, ಹಣ್ಣು, ಪೂಜಾ ಸಾಮಗ್ರಿ ಬಿಟ್ಟು ಪ್ಲಾಸ್ಟಿಕ್ ವಸ್ತುಗಳನ್ನು ಇಲ್ಲಿ ನಿಷೇಧಿಸಲಾಗಿದೆ. ಸಾರ್ವಜನಿಕರು ಅರಣ್ಯದಲ್ಲಿ ಬೆಂಕಿ ಹಾಕಬಾರದು.
  | ಕೆ.ಎಸ್. ಗೊರವರ ಎಸಿಎಫ್ ಕಾಳಿ ಹುಲಿ ಸಂರಕ್ಷಿತ ಪ್ರದೇಶ

  ವಿಶೇಷ ಅಂಗಡಿಗಳು:ಶಿವರಾತ್ರಿಯ ದಿನ ಕವಳಾ ಸುತ್ತಲಿನ ಹಳ್ಳಿಗಳು, ಯಲ್ಲಾಪುರ, ಅಂಬಿಕಾನಗರ, ಜೊಯಿಡಾ, ಶಿರಸಿ, ದಾಂಡೇಲಿ ಮುಂತಾದ ಕಡೆಗಳಿಂದ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಒಂದೇ ದಿನ ನಡೆಯುವ ಈ ಜಾತ್ರೆಗೆ ಅನೇಕ ಜಾತ್ರಾ ಅಂಗಡಿಗಳನ್ನು ಹಾಕಲಾಗುತ್ತದೆ. ತಂಪು ಪಾನೀಯ, ಪೂಜಾ ಸಾಮಗ್ರಿ, ಕಾಯಿ- ಹಣ್ಣು, ಪಾತ್ರೆ, ಚಹಾ ಅಂಗಡಿಗಳು ಕವಳಾ ಗುಹೆಗೆ ಸಾಗುವ ಮಾರ್ಗದಲ್ಲಿ ಕಂಡು ಬರುತ್ತವೆ. ಜಾತ್ರೆಯ ಸಂದರ್ಭದಲ್ಲಿ ಕವಳಾ ಗುಹೆಯಲ್ಲಿ ಬೆಳಕಿಗಾಗಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts