ಎಂದೂ ಬತ್ತದ ಕಳೆಂಜನ ಗುಂಡಿಯೂ ಖಾಲಿ!

ಪುರುಷೋತ್ತಮ ಭಟ್ ಬದಿಯಡ್ಕ
ಕೇರಳ, ಕರ್ನಾಟಕ ಗಡಿ ಪ್ರದೇಶ ಚೆಂಡೆತ್ತಡ್ಕ ಬಳಿಯ ಪ್ರಕೃತಿ ರಮಣೀಯ ಪ್ರದೇಶದ ಕಳೆಂಜ ಕೆರೆ ಈ ವರ್ಷ ಬತ್ತಿದೆ. ವರ್ಷಪೂರ್ತಿ ನೀರಿನ ಒರತೆ ಇರುತ್ತಿದ್ದ ಒಂದೂವರೆ ಅಡಿ ಆಳದ ನೀರಿನಾಶ್ರಯದ ಕಳೆಂಜನ ಗುಂಡಿ ಈವರೆಗೂ ಬತ್ತಿರಲಿಲ್ಲ. ಈ ಬಾರಿ ಪ್ರಖರ ಬಿಸಿಲಿಗೆ ಕಳೆಂಜನ ಗುಂಡಿಯೂ ಖಾಲಿ!
12 ವರ್ಷಗಳಿಗೊಮ್ಮೆ ಗುಹಾಯಾತ್ರೆ ಕೈಗೊಳ್ಳುವ ಜಾಂಬ್ರಿ ಗುಹೆ ಬಳಿಯಲ್ಲೇ ಈ ಕಳಂಜ ಕೆರೆಯಿದೆ. ಹಿಂದೆ ಹಳ್ಳಿ ಪ್ರದೇಶಗಳಲ್ಲಿ ಮುಳಿಹುಲ್ಲು ಹಾಸಿನ ಮನೆಗಳಿದ್ದವು. ಆಸುಪಾಸಿನ ಸ್ಥಳೀಯರು ಮನೆಗಳಿಗೆ ಮುಳಿ ಹಾಸಲು, ಜಾನುವಾರುಗಳ ಮೇವಿಗೆ ಜಾಂಬ್ರಿ ಪ್ರದೇಶದಲ್ಲಿ ಮುಳಿಹುಲ್ಲು ಹೆರೆಯುತ್ತಿದ್ದು, ಬಾಯಾರಿಕೆ ತಣಿಸಲು ಕಳೆಂಜನ ಗುಂಡಿ ಆಶ್ರಯಿಸುತ್ತಿದ್ದರು. ಹಾವು, ಮುಂಗುಸಿ ಇತರ ಸಣ್ಣ ಪುಟ್ಟ ಪ್ರಾಣಿ, ಪಕ್ಷಿಗಳಿಗೆ ಜೀವಜಲವಾಗಿದ್ದ ಕಳೆಂಜನ ಗುಂಡಿ ಈ ಬಾರಿ ಬತ್ತಿರುವುದು ಸಮಸ್ಯೆ ತಂದೊಡ್ಡಿದೆ. ಈ ತನಕ ಬತ್ತದ ಕಳೆಂಜನ ಬಾವಿಯೂ ಬತ್ತಿರುವುದು ಮುಂದೆ ಎದುರಿಸಬೇಕಾದ ಬರ ಪರಿಸ್ಥಿತಿಯ ಸೂಚನೆ ನೀಡುತ್ತಿದೆ.
ಆಟಿ (ಕರ್ಕಾಟಕ) ತಿಂಗಳಲ್ಲಿ ಮನೆಮನೆಗಳಿಗೆ ತೆರಳಿ ಕಷ್ಟ ಕಳೆಯುವ ಆಟಿ ಕಳೆಂಜ ಕೈತುಂಬ ದಾನ ಪಡೆದು ಸೋಣ (ಸಿಂಹ) ತಿಂಗಳು ಬಂದರೂ ಅದರ ಪರಿವೇ ಇಲ್ಲದೆ ಯಾತ್ರೆ ಮುಂದುವರಿಸುತ್ತಾನೆ. ಸೋಣ ತಿಂಗಳಲ್ಲಿ ದಾನ ಬೇಡುವುದು ನಿಷಿದ್ಧವಾದರೂ ಕಟ್ಟಳೆ ಮೀರಿ ಸೋಣದ ಮೊದಲ ದಿನ ದಾನ ಬೇಡುತ್ತ ಚೆಂಡೆತ್ತಡ್ಕ ಜಾಂಬ್ರಿ ಗುಹೆ ಸಮೀಪ ಬಂದ ಕಳಂಜ ಇಲ್ಲಿ ಅದೃಶ್ಯನಾಗುತ್ತಾನೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶ ಕಳೆಂಜನ ಗುಂಡಿ ಎಂದು ಪ್ರಸಿದ್ಧಿ ಪಡೆದಿದೆ. ಕಳೆಂಜನ ಗುಂಡಿ ಸಮೀಪ, ಕಳೆಂಜ ತನ್ನ ಒಲಿಯ ಕೊಡೆಯನ್ನು ಊರಿದ ಸ್ಥಳವೆಂದು ನಂಬಲಾದ ಚಿಕ್ಕ ರಂಧ್ರವೂ ಇದೆ.

ಎರಡು ವರ್ಷ ಹಿಂದೆ ಮೇ 2ರಂದು ಜಾಂಬ್ರಿ ಮಹೋತ್ಸವ ಸಂದರ್ಭ ಕಳೆಂಜನ ಗುಂಡಿ ನೀರಿನಿಂದ ತುಂಬಿತ್ತು. ಚಿಕ್ಕಪುಟ್ಟ ಜೀವ ಸಂಕುಲಗಳಿಗೆ ನೀರುಣಿಸುತ್ತಿದ್ದ ಕೂಪ ಇತಿಹಾಸದಲ್ಲಿ ಪ್ರಥಮ ಬಾರಿ ಎಂಬಂತೆ ಈ ಬಾರಿ ಬತ್ತಿರುವುದು ಪ್ರಕೃತಿ ನೀಡಿರುವ ಬರಗಾಲದ ಸೂಚನೆ. ಬೇಸಿಗೆ ಮಳೆ ಸುರಿಯದಿರುವುದು, ಎಲ್ಲೆಂದರಲ್ಲಿ ಕೊಳವೆ ಬಾವಿ ನಿರ್ಮಾಣ ಕಳೆಂಜನ ಗುಂಡಿ ಒರತೆ ನಿಲ್ಲಲು ಕಾರಣ. ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೊಂದು ದಿನ ಹನಿ ನೀರಿಗೂ ಕಷ್ಟ ಪಡಬೇಕಾಗಿ ಬರಬಹುದು.
ಮಹಾಬಲೇಶ್ವರ ಭಟ್ ಗಿಳಿಯಾಲು, ಪ್ರಗತಿಪರ ಕೃಷಿಕ, ಸಾಮಾಜಿಕ ಮುಂದಾಳು

Leave a Reply

Your email address will not be published. Required fields are marked *