ದೇವರಿಗೊಂದು ಕಾಗದ ಬರೆದು ಬೇಡಿದ…

ಕಳಸ: ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಕಲಶೇಶ್ವರ ಸ್ವಾಮಿಗೆ ಬೇಡಿಕೆ ಇಡುವುದು ವಾಡಿಕೆ. ಹೀಗೆ ಹತ್ತು ಹಲವು ಬೇಡಿಕೆಗಳನ್ನು ಕೇಳಿ ಪತ್ರದಲ್ಲಿ ಬರೆದು ಕಾಣಿಕೆಯ ಹುಂಡಿಯಲ್ಲಿ ಹಾಕುತ್ತಾರೆ. ಈ ಬಾರಿ ಭಕ್ತರೊಬ್ಬರು ವಿಭಿನ್ನವಾಗಿ ಪತ್ರ ಬರೆದು ನಿವೇದಿಸಿಕೊಂಡಿದ್ದಾರೆ.

ನನ್ನ ಸಹೋದರ ಶ್ರೀ ಕಲಶೇಶ್ವರ ಸ್ವಾಮಿಗೆ. ಪ್ರತೀ ಸಲ ಬಂದಾಗಲೂ ಪತ್ರ ಬರೀತಿನಿ. ಬರೆದದ್ದು ಏನಾಗುತ್ತೋ ಮುಂದಿನ ವಿಷಯ.ನಾನು ಈ ಸಲ ಆದಷ್ಟು ಕೆಲಸ ಮುಗಿಸಿದ್ದೀನಿ. ಆದ್ರೆ ಮುಖ್ಯವಾದದನ್ನೇ ಮಾಡಿಲ್ಲ, ನನಗೆ ಖಂಡಿತ ನಂಬಿಕೆ ಇದೆ. ನಾನು ಒಂದಲ್ಲ ಒಂದು ದಿನ ನೀವು ಅಂದುಕೊಂಡಹಾಗೆ ಆಗ್ತೀನಿ ಅಂತ. ನಾನು ಸಿಕ್ಕಿರೋ ಅವಕಾಶವನ್ನು ಸರಿಯಾಗಿ ಉಪಯೋಗ ಮಾಡಿಲ್ಲ. ಆದ್ರೆ ನೀವು ಎಲ್ಲ ಮಾಡ್ಸಿದ್ರಿ. ಕಳಸದ ಜನ ತುಂಬಾ ಒಳ್ಳೆಯವ್ರು. ನಾನು ಕೆಟ್ಟೋನು. ಅದಕ್ಕೆ ನನಗೆ ಹೀಗಾಗಿದೆ.

ಈ ಸಲ ಕೆಟ್ಟ ಶಬ್ದಗಳ ಬಳಕೆ ಕಡಿಮೆ ಮಾಡಿದ್ದೇನೆ. ಮುಂದಿನ ಸಲ ಇನ್ನು ಇಂಪ್ರೂವ್ ಆಗಿ ಬರ್ತೀನಿ. ನನ್ನೂರು ಸೂಪರ್. ದೇವ್ರೆ ನನಗೆ ಹಂತ ಹಂತವಾಗಿ ಒಳ್ಳೆಯನಾಗೋಕೆ ಅವಕಾಶಕೊಡಿ. ನಿಮ್ಮ ಎದುರಿಗೆ ನಿಲ್ಲೋಕೆ ಯಾರಿಗೂ ಆಗಲ್ಲ. ನನ್ನ ತಪ್ಪು ಕ್ಷಮಿಸಿ. ಮತ್ತೆ ಖುಷಿ ಖುಷಿಯಾಗಿ ಕರೆಸಿಕೊಳ್ಳಿ. ಪ್ರತಿ ಸಲ ನಾನು ಹೋಗೋ ಬರುವಾಗ ಏನೆಲ್ಲ ಎದುರಿಸಬಹುದು ಅಂತ ಹೇಳಿದ್ದೀರಾ. ಕಳಸದಲ್ಲಿ ನಾನು ತುಂಬಾ ಕಲಿತಿದ್ದೇನೆ. ನಾನು ನಿಮಗೆ ಮೋಸ ಮಾಡಿರಬಹುದು, ಆದ್ರೆ ನಾನು ನಿಮಗೆ ಕೊಡುವ ಗೌರವ ಯಾರಿಗೂ ಕೊಡಲ್ಲ. ಒಳ್ಳೆಯವರಾಗೋದ್ರಿಂದ ತುಂಬಾ ಉಪಕಾರ ಇದೆ ಅಂತ ಅನುಭವ ಆಯ್ತು. ಕಳಸದಲ್ಲಿಯೇ ಇರಬೇಕು ಅಂತ ತುಂಬಾ ಆಸೆ ಇದೆ. ಆದ್ರೆ ಇರೋದಕ್ಕೆ ಆಗ್ತಾ ಇಲ್ಲ. ಆದರೆ ಯಾಕೆ ಇರಕ್ಕಾಗಲ್ಲ ಅಂತ ನಂಗೆ ಗೊತ್ತಾಗಿದೆ. ಅಲ್ಲಿ ದ್ವೇಷ, ಅಸೂಯೆ, ಹೊಟ್ಟೆಕಿಚ್ಚು ನನಗೆ ಸಾಕಾಗಿದೆ. ಮುಂದಿನ ಸಲ ಬರುವಾಗ ಇನ್ನೂ ಒಳ್ಳೆಯವನಾಗ್ತೀನಿ ಅಂತ ಪ್ರಾಮಿಸ್ ಮಾಡ್ತೀನಿ. ಕೊನೆಗೂ ನನ್ನನ್ನು ಕ್ಷಮಿಸಿ ಸ್ವಾಮಿ. ನನ್ನ ಮುಂದಿನ ಜೀವನ ಹೇಗಾಗುತ್ತೋ ಗೊತ್ತಿಲ್ಲ. ಯಾರು ಏನೂ ಮಾಡಿದ್ರೂ ನೀವು ನನ್ನ ಜೊತೆಗಿರಿ. ನನ್ನ ಮನಸೇ ನನ್ನ ದೊಡ್ಡ ವೈರಿ. ಅದನ್ನು ಸರಿ ಮಾಡಿ ನನಗೆ ಸಹಾಯ ಮಾಡಿ. ನನಗೆ ನಿಮ್ಮನ್ನು ಬಿಟ್ಟು ಯಾರೀ ಇಲ್ಲಿ ಇಲ್ಲ.

ಧನ್ಯವಾದಗಳು: ಈ ರೀತಿಯಾಗಿ ಪತ್ರವೊಂದನ್ನು ಬರೆದು ಕಾಣಿಕೆ ಹುಂಡಿಯೊಳಗೆ ಹಾಕಿದ್ದಾರೆ. ಆದರೆ ಹೆಸರು, ಊರು ವಿಳಾಸ ಬರೆದಿಲ್ಲ. ಹೀಗೆ ಅದೆಷ್ಟು ಪತ್ರಗಳನ್ನು ಬರೆದಿದ್ದಾರೀ ಕಲಶೇಶ್ವರನಿಗೇ ಗೊತ್ತು.