ಮಳವಳ್ಳಿ: ಪ್ರಕೃತಿಯ ಜತೆಗೆ ತಮ್ಮ ಪವಾಡವನ್ನು ಮೆರೆದವರು ಮಹದೇಶ್ವರರು. ದೃಢವಾದ ಮನಸ್ಸಿನಲ್ಲಿ ಮಾದಪ್ಪನ ನೆನೆದು ಕಾಯಕ ಮಾಡಿದರೆ, ಯಶಸ್ಸು ಸಾಧ್ಯ. ಜನರು ಪರಸ್ಪರ ಹೊಂದಾಣಿಕೆ, ವಿಶ್ವಾಸ, ಪ್ರೀತಿಯಿಂದ ಒಟ್ಟಾಗಿ ಬಾಳಿದರೆ ಮಾದಪ್ಪ ಸಂತುಷ್ಠಿಗೊಳ್ಳುತ್ತಾನೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ತೆಂಕಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಮಹದೇಶ್ವರ ಸ್ವಾಮಿ ದೇವಸ್ಥಾನ ಹಾಗೂ ವಿಮಾನ ಗೋಪುರ ಕಲಶಾರೋಹಣ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ಪವಾಡ ಸದೃಶವಾದ ಬದುಕನ್ನು ಶಿವನ ಪ್ರತಿರೂಪವಾಗಿ ಸಾಧಿಸಿದವರು ಮಹದೇಶ್ವರರು. ಶ್ರೀಶೈಲದಿಂದ ಮೂಡಲ ದಿಕ್ಕಿಗೆ ಬಂದು ಜನರ ಸಂಕಷ್ಟಗಳಿಗೆ ಆಸರೆಯಾಗಿ ಅಜ್ಞಾನವನ್ನು ಹೋಗಲಾಡಿಸಿ ಅವರಲ್ಲಿ ಅರಿವು ಮೂಡಿಸುವ ಮೂಲಕ ಜ್ಞಾನದ ಪವಿತ್ರ ಮನಸ್ಸುಗಳನ್ನು ನೀಡಿದರು ಎಂದರು.
ಬೆಟ್ಟಗಾಡುಗಳಲ್ಲಿ ಸಂಚರಿಸಿ ಸಂಚಲನ ಮೂಡಿಸಿದ ಮಾದಪ್ಪ ದಿವ್ಯ ದೃಷ್ಟಿಯನ್ನು ಹೊಂದಿದ್ದರು. ಅಂತಹ ಕಾಲಜ್ಞಾನಿ ಪಾದಸ್ಪರ್ಶ ಮಾಡಿದ ಸ್ಥಳದಲ್ಲಿದ್ದ ಗುಡಿಯನ್ನು ಜೀರ್ಣೋದ್ಧಾರ ಮಾಡಲು ಮುಂದಾದಾಗ ಗ್ರಾಮಸ್ಥರಲ್ಲಿದ್ದ ಮನಸ್ತಾಪಗಳನ್ನು ಮರೆತು ಒಗ್ಗೂಡಿದ್ದಾರೆ ಎಂದು ತಿಳಿಯಿತು. ಹೊಡೆದ ಮನಸ್ಸುಗಳನ್ನು ಕಟ್ಟುವುದು ಉತ್ತಮ ಕೆಲಸವಾಗಿದೆ. ದ್ವೇಷ ಮನಸ್ಥಿತಿಯಿಂದ ಹೊರಬಂದರೆ ವಿಶಾಲವಾದ ಜೀವನ ಕಾಣಲಿದೆ. ಇದುವೇ ದೈವಶಕ್ತಿ ಎಂಬುದನ್ನು ಜನರು ಅರಿಯಬೇಕು ಎಂದು ಹೇಳಿದರು.
ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಪವಾಡ ಪುರುಷ ಮಹದೇಶ್ವರರು ನಡೆದಾಡಿದ ಸ್ಥಳಗಳೆಲ್ಲ ಪವಿತ್ರ ಕ್ಷೇತ್ರಗಳಾಗಿವೆ. ಮಹದೇಶ್ವರರು ಕಾಯಕ ತತ್ವವನ್ನು ಜನಮನದಲ್ಲಿ ಭಿತ್ತರಿಸುವ ಕಾರ್ಯ ಮಾಡಿದ್ದಾರೆ. ಮನಸ್ಸನ್ನು ಪವಿತ್ರಗೊಳಿಸುವ ಸ್ಥಳಗಳು ದೇವಸ್ಥಾನಗಳಾಗಿದ್ದು, ಅಂತರಂಗದ ಬದುಕನ್ನು ಶುದ್ಧಗೊಳಿಸಲು ಧಾರ್ಮಿಕ ಭಾವನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
ಜನರ ಮನಗಳು ಒಗ್ಗಟಾದರೆ ಮಾತ್ರ ಹಳ್ಳಿಗಳು ಉದ್ಧಾರವಾಗಲು, ಪವಿತ್ರ ಕಾರ್ಯಗಳನ್ನು ನಡೆಯಲು ಸಾಧ್ಯ. ಊರು ಚಂದವಾಗಿರಲು ದೈವ ಭಕ್ತಿಯ ಭಾವನೆಗಳನ್ನು ಮೂಡಿಸಿಕೊಳ್ಳಬೇಕು. ದೇಶ ಅಭಿವೃದ್ಧಿ ಹೊಂದಲು ಸ್ವ ಇಚ್ಛೆಯಿಂದ ಪರಿಸರ ಉಳಿಸಿಕೊಳ್ಳುವುದರ ಜತೆಗೆ ಸಮಯ ಪ್ರಜ್ಞೆ ಮೂಡಿಸಿಕೊಂಡು ಕಾಯಕ ತತ್ವ ಬೆಳೆಸಿಕೊಂಡಾಗ ವಿಶ್ವಮಟ್ಟದಲ್ಲಿ ದೇಶ ಅಭಿವೃದ್ಧಿವೊಂದಲಿವೆ ಎಂದರು.
ಸಮಾರಂಭದಲ್ಲಿ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ದೇಗುಲ ಮಠದ ಚನ್ನಬಸವ ಸ್ವಾಮೀಜಿ, ದೇವನೂರು ಮಠದ ಶ್ರೀ ಮಹಾಂತ ಸ್ವಾಮೀಜಿ, ಮರಳೇಗವಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ, ವಾಟಾಳು ಸೂರ್ಯಸಿಂಹಾಸನ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಶ್ರೀ, ಕುಂದೂರು ಬೆಟ್ಟದ ಮಠದ ಶ್ರೀ ನಂಜುಂಡ ಸ್ವಾಮೀಜಿ ಇತರರು ಇದ್ದರು.