ಬರದ ನಾಡಿನಲ್ಲಿ ವರುಣನ ಅಬ್ಬರ

ವಿಜಯಪುರ : ಜಿಲ್ಲಾದ್ಯಂತ ಮಂಗಳವಾರ ರಾತ್ರಿ ಸುರಿದ ಮಳೆ ಬರದ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಮುದ್ದೇಬಿಹಾಳ ತಾಲೂಕಿನ ಡೊಂಕಮಡು ಗ್ರಾಮದ ರೇಣುಕಾ ಶಿವರಾಯಪ್ಪ ಕೂಡ್ಲಗಿ (35), ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದ ಕರೆಪ್ಪ ವಿಠ್ಠಲ ಹಿರೇಕುರುಬರ (27) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ವಿಜಯಪುರ ತಾಲೂಕಿನ ದ್ಯಾಬೇರಿಯ ಕೃಷ್ಣಾ ಮಾರುತಿ ತರಸೆ ಎಂಬುವವರು ಸಿಡಿಲು ಬಡಿದು ಗಾಯಗೊಂಡಿದ್ದಾರೆ.
ಜಿಲ್ಲೆಯಲ್ಲಿ ಅಪಾರ ಹಾನಿ :ಜಿಲ್ಲೆಯಲ್ಲಿ ಬಿರುಗಾಳಿ, ಗುಡುಗು ಸಹಿತ ಮಳೆಗೆ ಅಪಾರ ಬೆಳೆ ಹಾನಿಯಾಗಿದೆ. ಚಡಚಣ ತಾಲೂಕಿನ ಇಂಚಗೇರಿ ಹಾಗೂ ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದಲ್ಲಿ ತಲಾ ಒಂದು ಎಮ್ಮೆ, ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ಏಳು ಕುರಿ, ಕಲಕೇರಿ ಗ್ರಾಮದಲ್ಲಿ ಐದು ಕುರಿ ಸಿಡಿಲಿಗೆ ಬಲಿಯಾಗಿವೆ. ಒಟ್ಟು ಜಿಲ್ಲೆಯಲ್ಲಿ ಮೂರು ಎಮ್ಮೆ, ನಾಲ್ಕು ಆಡು, ಒಂದು ಹೋರಿ, ಎರಡು ಕುದುರೆ, ಎರಡು ಆಕಳು ಮೃತಪಟ್ಟಿದ್ದು, 27 ಮನೆಗಳಿಗೆ ಹಾನಿಯಾಗಿದೆ. ವಿಜಯಪುರ ಹೊರವಲಯ ಮುನೀಶ್ವರ ಭಾಗದಲ್ಲಿ 200ಕ್ಕೂ ಹೆಚ್ಚು ಗಿಡ, ಮರಗಳು ಧರೆಗೆ ಉರುಳಿವೆ. ಕೆಲವು ಕಡೆ ಮನೆಗಳ ಪತ್ರಾಸ್ ಹಾರಿ ಹೋಗಿವೆ. ವಿರೇಶ ಗಬ್ಬೂರ ಎಂಬುವರಿಗೆ ಸೇರಿದ ಬಾಳೆ ತೋಟ ಸಂಪೂರ್ಣ ನೆಲಕಚ್ಚಿದೆ. ವಿಜಯಪುರ ತಾಲೂಕಿನ ಹಂಚನಾಳ ಪಿ.ಎಚ್. ಗ್ರಾಮದ ತಾನಾಜಿ ಹಕ್ಕೆ ಅವರಿಗೆ ಸೇರಿದ ಮೂರು ಎಕರೆ ದ್ರಾಕ್ಷಿ ತೋಟ ಸಂಪೂರ್ಣ ನಾಶಗೊಂಡಿದೆ. ಶಿವಗಿರಿಯಲ್ಲಿ ಕಂಪೌಂಡ್ ಕುಸಿದಿದೆ. ಕೆಲವು ಕಡೆ ವಿದ್ಯುತ್ ಕಂಬಗಳು ಉರುಳಿವೆ.

ವಿವಿಧೆಡೆ ಉತ್ತಮ ಮಳೆ : ಜಿಲ್ಲೆಯ ವಿವಿಧೆಡೆ ಮಂಗಳವಾರ ರಾತ್ರಿ ಉತ್ತಮ ಮಳೆಯಾಗಿದೆ. ಮುಂಗಾರು ಪೂರ್ವದಲ್ಲಿಯೇ ಮೊದಲ ವರ್ಷಧಾರೆಗೆ ರೈತರಲ್ಲಿ ಮಂದಹಾಸ ಮೂಡಿಸಿದರೆ, ಕೆಲವೊಂದೆಡೆ ಆತಂಕ ಮೂಡಿಸಿದೆ. ಬಸವನ ಬಾಗೇವಾಡಿಯಲ್ಲಿ 0.6 ಎಂಎಂ, ಮನಗೂಳಿ 10.2, ಆಲಮಟ್ಟಿ 27.5, ಹೂವಿನಹಿಪ್ಪರಗಿ 14.8, ಮಟ್ಟಿಹಾಳ 29, ವಿಜಯಪುರ 26.4, ನಾಗಠಾಣ 3.2, ಭೂತನಾಳ 49.2, ಹಿಟ್ನಳ್ಳಿ 19.4, ಮಮದಾಪುರ 3, ಕನ್ನೂರ 9.6, ಬಬಲೇಶ್ವರ 10.8, ಇಂಡಿ 1.5, ನಾದ ಬಿ.ಕೆ.6.2, ಮುದ್ದೇಬಿಹಾಳ 4, ನಾಲತವಾಡ 3.6, ತಾಳಿಕೋಟೆ 13.4, ಢವಳಗಿ 4, ಸಿಂದಗಿ 7.2, ರಾಮನಹಳ್ಳಿ 2.4, ಕಡ್ಲೇವಾಡ 2.1, ದೇವರ ಹಿಪ್ಪರಗಿ 3.4, ಕೊಂಡಗೂಳಿ 5.4 ಎಂಎಂ ಮಳೆಯಾಗಿದೆ ಎಂದು ಜಿಲ್ಲಾ ಅಂಕಿ-ಅಂಶ ಇಲಾಖೆ ಮಾಹಿತಿ ನೀಡಿದೆ.

ಎರಡು ವರ್ಷಗಳ ಹಿಂದೆ ಸಾಲ ಮಾಡಿ ದ್ರಾಕ್ಷಿ ತೋಟ ಮಾಡಿದ್ದೆ. ಆದರೆ ಗಾಳಿ, ಮಳೆಗೆ ತೋಟ ಸಂಪೂರ್ಣ ನಾಶಗೊಂಡಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಿಸಬೇಕು.
ತಾನಾಜಿ ಹಕ್ಕೆ ಹಾನಿಗೊಳಗಾದ ರೈತ ಹಂಚನಾಳ ಪಿ.ಎಚ್

Leave a Reply

Your email address will not be published. Required fields are marked *