ಮಹಿಳೆಯರಿಂದ ಗ್ರಾಪಂಗೆ ಮುತ್ತಿಗೆ

ಕಲಕೇರಿ: ಸಮೀಪದ ಹಂದಿಗನೂರ ಗ್ರಾಮದಲ್ಲಿ ಶುದ್ಧ ಕುಡಿವ ನೀರು ಒದಗಿಸಬೇಕೆಂದು ಆಗ್ರಹಿಸಿ ಗ್ರಾಮದ ಮಹಿಳೆಯರು ಸೋಮವಾರ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ಶೌಚಗೃಹವಿಲ್ಲದೆ ಹೆಣ್ಣುಮಕ್ಕಳು ಪರದಾಡುವಂತಾಗಿದೆ. ಸದ್ಯ ಗ್ರಾಮದಲ್ಲಿ ಪೂರೈಕೆಯಾಗುತ್ತಿರುವ ನೀರು ನಿರುಪಯುಕ್ತವಾಗಿದ್ದು, ಅದನ್ನು ಸೇವಿಸಿದ ಜನ ಅನಾರೋಗ್ಯದಿಂದ ಬಳಲುವಂತಾಗಿದೆ. ಗ್ರಾಮಸ್ಥರಿಗೆ ಮೂಲಸೌಲಭ್ಯ ಒದಗಿಸಬೇಕಾದ ಸ್ಥಳೀಯ ಆಡಳಿತ ಮಂಡಳಿ ಮಾತ್ರ ಜಾಣ ಕುರುಡುತನ ಅನುಸರಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ತಕ್ಷಣ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮಕೈಗೊಳ್ಳಬೇಕು. ಶೌಚಗೃಹ ಕುರಿತು ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ವೈಯಕ್ತಿಕ ಶೌಚಗೃಹ ನಿರ್ವಿುಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ವಾರದೊಳಗೆ ಈ ಕಾರ್ಯವಾಗದಿದ್ದರೆ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಮಹಿಳೆಯರು ಎಚ್ಚರಿಸಿದರು.

ಗ್ರಾಪಂ ಸಿಬ್ಬಂದಿ ಎಸ್.ಎಂ. ತಳವಾರ ಮನವಿ ಸ್ವೀಕರಿಸಿದರು. ರೇಣುಕಾ ಚೋರಗಸ್ತಿ, ಸರಸ್ವತಿ ಡಾಂಗಿ, ಮಲ್ಲಮ್ಮ ಶಾಖಾ, ಸುಮಂಗಲಾ ಚಿಮ್ಮಲಗಿ, ಮಸಮ್ಮ ಗುಡದಿನ್ನಿ, ಲಕ್ಷ್ಮಿ ಚಿಮ್ಮಲಗಿ, ಪದ್ಮಾವತಿ ಜಂಬೇನಾಳ, ಗುರು ಚೋರಗಸ್ತಿ, ಶಿವಲಿಂಗ ಕೋರಿ, ಪರಶುರಾಮ ಡಾಂಗಿ ಸೇರಿದಂತೆ ಗ್ರಾಮದ ಲಕ್ಕಮ್ಮ ಮಹಿಳಾ ಸಂಘ, ಗಂಗಾಮತ, ನಿಜಶರಣ ಅಂಬಿಗರ ಚೌಡಯ್ಯ, ಕರಿ ಬಸವೇಶ್ವರ, ನವಜ್ಯೋತಿ ಮಹಿಳಾ ಸ್ವಸಹಾಯ ಗುಂಪುಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.