ಹುಣಶ್ಯಾಳ ಗ್ರಾಪಂಗೆ ಗ್ರಾಮಸ್ಥರ ಮುತ್ತಿಗೆ

ಕಲಕೇರಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಮೀಪದ ಹುಣಶ್ಯಾಳ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಶನಿವಾರ ಬೆಳಿಗ್ಗೆ ಮುತ್ತಿಗೆ ಹಾಕಿ ದಿಢೀರ್ ಪ್ರತಿಭಟನೆ ನಡೆಸಿ ಗ್ರಾಪಂಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಬೇಕು. ಸಮರ್ಪಕವಾಗಿ ಟ್ಯಾಂಕರ್ ನೀರು ಪೂರೈಸಬೇಕೆಂದು ಆಗ್ರಹಿಸಿದರು. ಅಲ್ಲದೆ, ಕಳೆದ 15 ದಿನಗಳಿಂದ ತಾಳಿಕೋಟೆ, ಗೋಲಗೇರಿ, ಬಿಂಜಲಭಾವಿ, ಸಿಂದಗಿ, ಆಲೂರ ಗ್ರಾಮಗಳಿಗೆ ಸಂಚರಿಸುವ ಬಸ್‌ಗಳು ಗ್ರಾಮಕ್ಕೆ ಬರುತ್ತಿಲ್ಲ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು, ವೃದ್ದರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಗ್ರಾಮದಲ್ಲಿನ ರಸ್ತೆ ಸರಿಪಡಿಸುವ ಜತೆಗೆ ಹುಣಶ್ಯಾಳ ಕ್ರಾಸ್‌ನಿಂದ ಗ್ರಾಮದೊಳಕ್ಕೆ ಬಸ್ ಸಂಚಾರ ಕಲ್ಪಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗ್ರಾಪಂ ಪಿಡಿಒ ಕಾಶಿನಾಥ ಕಡಕಬಾವಿಗೆ ಮನವಿ ಪತ್ರ ಸಲ್ಲಿಸಲಾಯಿತು. ಶಾಂತಗೌಡ ಕೋಟಿಖಾನಿ, ಎನ್. ಎಸ್. ಪಾಖಿ, ಎಂ. ಎಲ್. ಮುಲ್ಲಾ, ಚಾಂದಸಾಬ ಉಸ್ತಾದ, ದೇವರಗುಡಿ, ನಬಿಸಾಬ ದೊಡಮನಿ, ಅಜೀತ ಪಾಖಿ, ಮಹಮ್ಮದ್ ಉರಾನಮನಿ, ಮೈನುದ್ದೀನ್ ಬಾಗವಾನ್, ಇಬ್ರಾಹಿಂ ಹವಾಲ್ದಾರ್, ಗುತ್ತಪ್ಪಗೌಡ ಕೊಟಿಖಾನಿ, ಹಾಜಿ ಸಿಪಾಯಿ, ತಮ್ಮಣ್ಣ ಕುಂಟೋಜಿ, ಅಸ್ಪಾಕ ತಾಳಿಕೋಟಿ, ಕಂಟೆಪ್ಪ ಮೂಲಿಮನಿ, ಮುತ್ತು ಕುಂಟೋಜಿ, ಕಾಸಪ್ಪ ಹುಣಸಿಗಿಡ, ಭೀಮಾಶಂಕರ ಭೋವಿ ಸೇರಿದಂತೆ ಮತ್ತಿತರರಿದ್ದರು.

ಶೀಘ್ರ ಗ್ರಾಮದಲ್ಲಿನ ಶುದ್ಧ ಕುಡಿಯವ ನೀರಿನ ಘಟಕಕ್ಕೆ ಹೊಸ ಮೋಟಾರ ಅಳವಡಿಸಲಾಗುವುದು. ಗ್ರಾಮಸ್ಥರಿಗೆ ತಕ್ಷಣ ಸಮರ್ಪಕ ಕುಡಿಯುವ ನೀರು ಪೂರೈಸಲಾಗುವುದು. ಬಸ್ ವ್ಯವಸ್ಥೆ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು.
ಕಾಶಿನಾಥ ಕಡಕಬಾವಿ ಪಿಡಿಒ