ದೇಶದ ಅಭಿವೃದ್ಧಿಯಲ್ಲಿ ಗುರು ಪರಂಪರೆ ಪಾತ್ರ

ಭಾರತದ ಇತಿಹಾಸ ಕಾಲದಿಂದಲೂ ಸಾಮ್ರಾಜ್ಯಗಳ ಸ್ಥಾಪನೆಯಲ್ಲಿ ಗುರುಗಳ, ಸಂತರುಗಳ ಪಾತ್ರ ಕಂಡುಬರುತ್ತದೆ. ಮೌರ್ಯ ವಂಶದ ಸ್ಥಾಪನೆಗೆ ಕಾರಣರಾದವರು ಚಾಣಕ್ಯ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಹಕ್ಕ- ಬುಕ್ಕರ ಮೂಲಕ ನಾಂದಿ ಹಾಡಿದವರು ವಿದ್ಯಾರಣ್ಯರು. ಇಂಥ ಅನೇಕ ನಿದರ್ಶನಗಳನ್ನು ಕಾಣಬಹುದು.

| ಡಾ. ಮಂಜುನಾಥ ಬಿ.ಎಚ್.

ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕರ್ನಾಟಕಕ್ಕೆ ಬಂದಿದ್ದರು. ಅವರು ಕಾರ್ಯಕ್ರಮವೊಂದರಲ್ಲಿ ಹತ್ತೇ ನಿಮಿಷ ಮಾತನಾಡಿದ್ದಾದರೂ, ಅವರ ರಾಜಕೀಯ ವಿರೋಧಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗಲು ಅಷ್ಟೇ ಸಾಕಿತ್ತು. ಆದಿತ್ಯನಾಥರು ಗೋರಖಪುರ ಮಠಾಧೀಶ. ಕೆಲವರು ‘ಸಂನ್ಯಾಸಿಗಳಿಗೆ ಯಾಕೆ ಬೇಕು ರಾಜಕೀಯ? ಅವರು ಯಾಕೆ ಮುಖ್ಯಮಂತ್ರಿಯಾಗಬೇಕು? ಯೋಗಿ ಅಧಿಕಾರಕ್ಕೆ ಬಂದ ಬಳಿಕ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ’ ಎಂದೆಲ್ಲ ಟೀಕಿಸಿದರು. ಕೆಲವೇ ತಿಂಗಳಲ್ಲಿ ಅಭಿವೃದ್ಧಿ ಆಗಬೇಕೆಂದರೆ ಅದು ಯಾರಿಗಾದರೂ ಸಾಧ್ಯವೇ? ಹೀಗೆ ಮಾತನಾಡುವವರಿಗೆ ಭಾರತೀಯ ಗುರುಪರಂಪರೆ ಬಗ್ಗೆ ಅಥವಾ ಪ್ರಾಚೀನ ಭಾರತದಿಂದ ಆಧುನಿಕ ಭಾರತದ ಇಂದಿನ ದಿನಮಾನದವರೆಗೆ ಮಠಾಧಿಪತಿಗಳು, ಸಾಧು-ಸಂತರ ಮಾರ್ಗದರ್ಶನ, ಪ್ರಭಾವಗಳ ಬಗ್ಗೆ ಒಂದಿಷ್ಟೂ ಮಾಹಿತಿಯಿಲ್ಲವೇನೋ ಎನಿಸಿತು. ಅದರೊಂದಿಗೆ ಆದಿತ್ಯನಾಥರು ಪ್ರತಿನಿಧಿಸುವ ಪಂಥ, ಅದರ ಮಹತ್ವ, ಕರ್ನಾಟಕಕ್ಕೂ ಉತ್ತರ ಪ್ರದೇಶಕ್ಕೂ ಬೆಸೆದಿರುವ ಆಧ್ಯಾತ್ಮಿಕ ನಂಟು, ಇವುಗಳ ಬಗ್ಗೆಯೂ ತಿಳಿದಿಲ್ಲವೆನಿಸಿತು.

ಭಾರತದ ಇತಿಹಾಸ ಕಾಲದಿಂದಲೂ (ಇಂದು ಕಂಡುಬರುವ ತಿರುಚಿರುವ ಇತಿಹಾಸವಲ್ಲ!) ಸಾಮ್ರಾಜ್ಯಗಳ ಸ್ಥಾಪನೆಯಲ್ಲಿ ಗುರುಗಳ, ಸಂತರುಗಳ ಪಾತ್ರ ಕಂಡುಬರುತ್ತದೆ. ಭಾರತದ ಪ್ರಮುಖ ರಾಜವಂಶವಾದ ಮೌರ್ಯ ವಂಶದ ಸ್ಥಾಪನೆ ಸಂನ್ಯಾಸಿ, ರಾಜಗುರು ಚಾಣಕ್ಯರಿಂದಲೇ ಸಾಧ್ಯವಾಯಿತು. ಅಟ್ಟಹಾಸದಿಂದ, ಪ್ರಜಾವಿರೋಧಿ ಆಡಳಿತ ನಡೆಸುತ್ತಿದ್ದ ನವನಂದರ ನಿರ್ನಾಮ, ಪ್ರಜಾಪ್ರೇಮಿ ಆಡಳಿತದ ಸ್ಥಾಪನೆಗೆ ಕಾರಣವಾಗಿದ್ದು ಚಂದ್ರಗುಪ್ತ ಮೌರ್ಯ ಹಾಗೂ ಚಾಣಕ್ಯರ ಗುರು-ಶಿಷ್ಯ ಸಂಬಂಧ. ಆ ಬಳಿಕ ಭಾರತದ ಕ್ಷಾತ್ರ ಪರಂಪರೆ ಬೆಳಗುವಂತೆ ಮೌರ್ಯರು ಆಳಿದ್ದು ಇಂದಿಗೂ ಭಾರತೀಯರು ಹೆಮ್ಮೆಪಡುವಂಥ ಸಂಗತಿ. ಚಂದ್ರಗುಪ್ತನಿಗೆ ಆಡಳಿತದ ಮಾರ್ಗದರ್ಶನ ನೀಡಲು ಚಾಣಕ್ಯ ರಚಿಸಿದ ‘ಅರ್ಥಶಾಸ್ತ್ರ’ ದೇಶ-ವಿದೇಶಗಳಲ್ಲಿ ಪಠ್ಯಪುಸ್ತಕವಾಗಿ ಜನರ ಮನದಲ್ಲಿ ಇಂದಿಗೂ ಸ್ಥಾನಪಡೆದಿದೆ.

ಕರ್ನಾಟಕವನ್ನಾಳಿದ ಶ್ರೇಷ್ಠ ರಾಜಮನೆತನ, ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಹಕ್ಕ- ಬುಕ್ಕರ ಮೂಲಕ ನಾಂದಿ ಹಾಡಿದವರೂ ಯತಿಗಳಾದ ಆಚಾರ್ಯ ವಿದ್ಯಾರಣ್ಯರೇ. ಛತ್ರಪತಿ ಶಿವಾಜಿ ಮಹಾರಾಜರಿಗೆ ಸರಿದಾರಿ ತೋರಿ ಮರಾಠಾ ಸಾಮ್ರಾಜ್ಯ ಕಟ್ಟಲು ಕಾರಣರಾಗಿದ್ದು ಗುರುಗಳಾದ ಸಮರ್ಥ ರಾಮದಾಸರು. ಹೀಗೆ ಭಾರತದ ಇತಿಹಾಸದುದ್ದಕ್ಕೂ ದೇಶ ರಕ್ಷಣೆ, ಆಡಳಿತ ಸುಧಾರಣೆಯಲ್ಲಿ ಯತಿಗಳು, ಸಾಧು-ಸಂತರು ಮಾರ್ಗದರ್ಶನ ನೀಡಿದ್ದು, ಮಹತ್ತರ ಪಾತ್ರ ವಹಿಸಿದ್ದು ಸ್ಪಷ್ಟ ಗೋಚರ. ಅಂತಹದೇ ಯತಿ ಪರಂಪರೆಯಲ್ಲಿ ಬಂದು, ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸುತ್ತಿರುವವರು ಯೋಗಿ ಆದಿತ್ಯನಾಥರು. ರಾಜಕೀಯ ಕೊಳಕು ಎಂದೆಲ್ಲ ಜನ ಆಡಿಕೊಳ್ಳುವಾಗ ಸಂನ್ಯಾಸಿಯಾಗಿದ್ದೂ ರಾಜಕೀಯ ಪ್ರವೇಶಿಸಿ ಅವರು ಗಮನ ಸೆಳೆದಿದ್ದಾರೆ.

ಆದಿತ್ಯನಾಥರು ನಾಥ ಪಂಥದವರು. ಗೋರಖಪುರ ಇದರ ಪ್ರಮುಖ ಕೇಂದ್ರ. ಗೋರಖನಾಥ ಮತ್ತು ಮತ್ಸೇಂದ್ರನಾಥ ಈ ಪಂಥದ ಸ್ಥಾಪಕರು. ಇವರಲ್ಲಿ ನವನಾಥರೆಂಬ ಪರಂಪರೆ ಇದೆ. ಜಾಲಂಧರ ನಾಥ ಎಂಬ ಮೂರನೆಯ ನಾಥನಿಂದಾಗಿ ಪಂಜಾಬಿನ ಜಲಂಧರ ಎಂಬ ನಗರಕ್ಕೆ ಹೆಸರು ಬಂದಿದೆ. 10-11ನೇ ಶತಮಾನದಲ್ಲಿ ನಾಥ ಪಂಥದ ಸ್ಥಾಪನೆ ಆಗಿರಬಹುದು ಎಂಬ ಮಾಹಿತಿಗಳಿವೆ. ಈಶ್ವರ, ಭೈರವ, ದತ್ತಾತ್ರೇಯನನ್ನು ಇವರು ಮುಖ್ಯವಾಗಿ ಪೂಜಿಸುತ್ತಾರೆ. ನೇಪಾಳ, ಪಾಕಿಸ್ತಾನಗಳಲ್ಲೂ ಈ ಮಠದ ಕೇಂದ್ರಗಳಿವೆ. ನೇಪಾಳದ ಭಟಗಾಂವ ಎಂಬಲ್ಲಿರುವ ದತ್ತಾತ್ರೇಯ ಮಂದಿರಕ್ಕೆ ನಾಥಪಂಥೀಯರು ವಿಶೇಷವಾಗಿ ಯಾತ್ರೆಗೆ ಹೋಗುತ್ತಾರೆ. ಪಾಕಿಸ್ತಾನದ ರಾವಲ್ಪಿಂಡಿ ಎಂಬ ಊರು ರವಲನಾಥನೆಂಬ ನಾಥನಿಂದ ತನ್ನ ಹೆಸರು ಪಡೆದಿದೆ. ಕರ್ನಾಟಕದಲ್ಲಿ ಈಗ ಇರುವ ನಾಥಪಂಥದ ಮಠಗಳಿಗೆ 12 ವರ್ಷಗಳಿಗೆ ಒಮ್ಮೆ ಗೋರಖಪುರದಿಂದಲೇ ಸಂನ್ಯಾಸಿ ನೇಮಿಸಲ್ಪಡುತ್ತಾರೆ. ಈ ಸಂನ್ಯಾಸಿ ಕಾಲ್ನಡಿಗೆಯಿಂದಲೇ ಗೋರಖಪುರದಿಂದ ತಾನು ನಿಯೋಜಿಸಲ್ಪಟ್ಟಿರುವ ಮಠಕ್ಕೆ ಆಗಮಿಸಬೇಕು.

ಜಾತಿ-ಮತಗಳ ಭೇದವಿಲ್ಲದೆ ಸರ್ವರನ್ನೂ ಸಮನಾಗಿ ಕಾಣುವುದು ನಾಥಪಂಥದ ವೈಶಿಷ್ಟ್ಯ. ವೈದಿಕ ಸಂಪ್ರದಾಯಗಳನ್ನು ಮೀರಿ, ಅಧ್ಯಾತ್ಮವನ್ನು ಎಲ್ಲರ ಬಳಿಗೊಯ್ದ ಕೀರ್ತಿಯೂ ಈ ಪಂಥಕ್ಕೆ ಸಲ್ಲುತ್ತದೆ. ನಾಥಪಂಥದ ಬೇರು ಕರ್ನಾಟಕದಲ್ಲೂ ಭದ್ರವಾಗಿ ಹಬ್ಬಿದೆ. ರಾಜಕಾರಣಿಯಾಗುವ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವ ಮೊದಲೇ ಆದಿತ್ಯನಾಥರು ಕರ್ನಾಟಕದೊಡನೆ ಅವಿನಾಭಾವ ಆಧ್ಯಾತ್ಮಿಕ ಸಂಬಂಧ ಹೊಂದಿದ್ದಾರೆ. ಕರ್ನಾಟಕದಲ್ಲಿ ನಾಥಪಂಥದ ಪ್ರಾಚೀನ ಕ್ಷೇತ್ರಗಳಲ್ಲೊಂದಾದ ಆದಿಚುಂಚನಗಿರಿ ಕ್ಷೇತ್ರದೊಂದಿಗೆ ಆದಿತ್ಯನಾಥರ ಗೋರಖಪುರ ಮಠ ಬಾಂಧವ್ಯ ಹೊಂದಿದೆ. ಗೋರಖನಾಥರು ಆದಿಚುಂಚನಗಿರಿಯಲ್ಲಿ ತಪಸ್ಸನ್ನಾಚರಿಸಿದ್ದರು ಎಂಬುದಕ್ಕೆ ಹಲವು ಐತಿಹ್ಯಗಳನ್ನೂ ಕಾಣಬಹುದಾಗಿದೆ.

ಆದಿತ್ಯನಾಥರ ಗುರುಗಳಾದ ಅವೈದ್ಯನಾಥರು ಹಾಗೂ ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದನಾಥ ಶ್ರೀಗಳ ಗುರುಗಳು, ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ಸಹ ಆಧ್ಯಾತ್ಮಿಕವಾಗಿ ನಿಕಟ ಒಡನಾಟವನ್ನಿಟ್ಟುಕೊಂಡಿದ್ದರು. ‘ಆದಿತ್ಯನಾಥರೊಡನೆ, ಗೋರಖಪುರದೊಡನೆ ನಮ್ಮದು ಆತ್ಮೀಯತೆಯ ಬಂಧ. ಅವರು ನಮ್ಮ ಆದಿಚುಂಚನಗಿರಿ ಮಠದವರೇ, ನಾವು ಗೋರಖಪುರ ಮಠದವರೇ. ಎರಡೂ ಮಠಗಳು ಒಂದೇ ಎಂಬ ಭಾವವಿದೆ’ ಎಂದಿದ್ದಾರೆ ನಿರ್ಮಲಾನಂದನಾಥ ಸ್ವಾಮೀಜಿ. ಬಾಲಗಂಗಾಧರನಾಥ ಶ್ರೀಗಳು ಭೈರವೈಕ್ಯರಾದ ಸಂದರ್ಭದಲ್ಲಿ ಶಿವಗಣಾರಾಧನೆಯ ದಿನ ಆದಿಚುಂಚನಗಿರಿಗೆ ಆದಿತ್ಯನಾಥರು ಆಗಮಿಸಿದ್ದರು.

ಆದಿತ್ಯನಾಥರು ಕರ್ನಾಟಕಕ್ಕೆ ಬಂದಾಗಲೆಲ್ಲ ನಾಥಪಂಥದ ಪ್ರಮುಖ ನೆಲೆಯಾದ ಆದಿಚುಂಚನಗಿರಿಗೆ ಭೇಟಿಯಿತ್ತು, ಕಾಲಭೈರವನಿಗೆ ಪೂಜೆ ಸಲ್ಲಿಸುವುದನ್ನು ಪಾಲಿಸಿಕೊಂಡು ಬಂದಿದ್ದಾರೆ. ಅದೇ ರೀತಿ ಆದಿಚುಂಚನಗಿರಿ ಮಠಾಧೀಶರು ಸಹ ಉತ್ತರ ಪ್ರದೇಶದ ಪ್ರವಾಸದಲ್ಲಿದ್ದಾಗ ಗೋರಖಪುರ ಸಂಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಎರಡೂ ವಿರಕ್ತ ಮಠಗಳು ಶಿಕ್ಷಣ, ವೈದ್ಯಕೀಯ, ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಕಾಣಿಕೆ ನೀಡುತ್ತ ಬಂದಿವೆ. ಗೋರಖಪುರದ ಆದಿತ್ಯನಾಥರು ರಾಜಕೀಯದಲ್ಲಿದ್ದು ಅಭಿವೃದ್ಧಿಯ ನೇತೃತ್ವ ವಹಿಸಿದರೆ ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದನಾಥರು ಸಾಮಾಜಿಕ ಅಭಿವೃದ್ಧಿ ಕಾರ್ಯಗಳಿಗೆ ದಿಗ್ದರ್ಶಕರಾಗಿದ್ದಾರೆ.

ಆದಿತ್ಯನಾಥರು ಮಂಗಳೂರಿನ ಯೋಗೇಶ್ವರ ಮಠದ ಜತೆಗೂ ನಿಕಟ ಸಂಬಂಧ ಇಟ್ಟುಕೊಂಡಿದ್ದಾರೆ. ಆದಿತ್ಯನಾಥರು ಗೋರಖಪುರದ ಮಠಾಧೀಶರು ಮಾತ್ರವಲ್ಲ, ನಾಥ ಸಂಪ್ರದಾಯದ ಪ್ರಮುಖರೂ ಹೌದು. ಮಂಗಳೂರಿನ ಕದ್ರಿಯಲ್ಲೂ ನಾಥ ಸಂಪ್ರದಾಯದ ಯೋಗೇಶ್ವರ ಮಠವಿದೆ. ನಾಥ ಸಂಪ್ರದಾಯದ ಏಕೈಕ ‘ರಾಜ’ಯೋಗಿಯೂ ಇಲ್ಲಿದ್ದಾರೆ. ಅವರನ್ನು ಆಯ್ಕೆ ಮಾಡುವುದು ಅಖಿಲ ಭಾರತ ವರ್ಷೀಯ ಬೇಷ್ ಬಾರಾಪಂಥ್ ಅಧ್ಯಕ್ಷರಾದ ಯೋಗಿ ಆದಿತ್ಯನಾಥ. ಕದ್ರಿ ಯೋಗೇಶ್ವರ ಮಠದ ‘ರಾಜ’ರ ಆಯ್ಕೆ ಮತ್ತು ಪಟ್ಟಾಭಿಷೇಕ 12 ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ನಡೆಯುತ್ತದೆ.

ಮಹಾರಾಷ್ಟ್ರದ ತ್ರಯಂಬಕೇಶ್ವರದಲ್ಲಿ ಕುಂಭಮೇಳ ನಡೆಯುವ ಸಂದರ್ಭದಲ್ಲಿ ನಾಥ ಸಂಪ್ರದಾಯದ 12 ಪಂಥಗಳ ಯೋಗಿಗಳ ಉಪಸ್ಥಿತಿಯಲ್ಲಿ ಮುಂದಿನ ‘ರಾಜ’ ಯೋಗಿಗಳನ್ನು ಗುರುತಿಸಲಾಗುತ್ತದೆ. ಕೊನೆಯದಾಗಿ ‘ರಾಜ’ ಅಭ್ಯರ್ಥಿಗಳ ಪೂರ್ವಾಪರ ವಿಶ್ಲೆಷಿಸಿ, ಅಂತಿಮ ಗೊಳಿಸುವ ಅಧಿಕಾರ ಇರುವುದು ಅಖಿಲ ಭಾರತ ವರ್ಷೀಯ ಬೇಷ್ ಬಾರಾಪಂಥ್ ಅಧ್ಯಕ್ಷರಿಗೆ ಮಾತ್ರ. ಕಳೆದ ಒಂದೂವರೆ ದಶಕದಿಂದ ಬಾರಾಪಂಥ್ ಅಧ್ಯಕ್ಷರಾಗಿರುವ ಆದಿತ್ಯನಾಥರು ಇಬ್ಬರು ‘ರಾಜ’ಯೋಗಿಗಳನ್ನು ಆಯ್ಕೆ ಮಾಡಿ ಕದ್ರಿ ಮಠಕ್ಕೆ ಕಳುಹಿಸಿಕೊಟ್ಟಿರುವುದು ವಿಶೇಷ.

ಗೋರಖಪುರದ ಗೋರಕ್ಷನಾಥ ಪೀಠದ ಮುಖ್ಯಸ್ಥ ಮಹಾಂತ್ ಅವೈದ್ಯನಾಥ 2014ರಲ್ಲಿ ನಿಧನರಾದ ಬಳಿಕ ಅವರ ಸ್ಥಾನವನ್ನು ಆದಿತ್ಯನಾಥ ತುಂಬಿದ್ದಾರೆ. ಈ ಮಠದ ವಿಶೇಷವೆಂದರೆ, ಇದನ್ನು ಸ್ಥಾಪಿಸಿದ್ದು ದಲಿತರಾದರೂ, ಅದನ್ನು ಜನಪ್ರಿಯಗೊಳಿಸಿದ್ದು ಮುಸ್ಲಿಮರು. ಇಂದಿಗೂ ಲೋಹ್ರಾ, ಸಥೈಯುನ್ ಮತ್ತು ಕೋಠಾದಂಥ ಹಲವು ಗ್ರಾಮಗಳಲ್ಲಿ ಮುಸ್ಲಿಂ ಜೋಗಿಗಳಿದ್ದು, ಅವರು ಖಾದಿ ಧರಿಸುತ್ತಾರೆ. ಜತೆಗೆ ಗೋರಖ್ವಾಣಿಯನ್ನು ಪಠಿಸುತ್ತಾರೆ. ಮಠದ ಸುತ್ತಮುತ್ತಲಿನ ಮುಸ್ಲಿಮರಿಗೂ ಸಹ ಯೋಗಿ ಆದಿತ್ಯನಾಥರು ಭದ್ರತೆ, ಉದ್ಯೋಗ ಕಲ್ಪಿಸಿ, ಮಾನವೀಯ ಮೌಲ್ಯಗಳ ಆಚರಣೆಯನ್ನು ಸಾರಿದ್ದಾರೆ. ಆದರೆ ಕೇವಲ ರಾಜಕೀಯದ ಕನ್ನಡಕದಿಂದ ನೋಡುವವರಿಗೆ ಇದೆಲ್ಲ ಕಾಣಿಸುವುದಿಲ್ಲ. ಆದಿತ್ಯನಾಥರು ಕೆಲ ದಿನಗಳ ಹಿಂದೆ ಕರ್ನಾಟಕಕ್ಕೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಗಿ ಸ್ವಾಗತಿಸಿದ್ದು ಯಾಕೋ ನೆನಪಾಯಿತು…

(ಲೇಖಕರು ತಜ್ಞ ವೈದ್ಯರು, ಸಾಮಾಜಿಕ ಕಾರ್ಯಕರ್ತರು)

Leave a Reply

Your email address will not be published. Required fields are marked *