ಸ್ವಾರ್ಥಿ ಜನಪ್ರತಿನಿಧಿಗಳು ಜನನಾಯಕರಾಗಲು ಸಾಧ್ಯವೇ?

ಸ್ವಾರ್ಥಿ ನಾಯಕರಿಂದ ರಾಜಕೀಯ ಮೌಲ್ಯವಿಹೀನವಾಗುತ್ತಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸುವುದು, ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಬೇಕು. ಸ್ವಾರ್ಥಿ ನಾಯಕರನ್ನು ಸಮುದಾಯ ಎಂದೂ ಮಣೆ ಹಾಕುವುದಿಲ್ಲ ಎಂಬುದನ್ನು ರಾಜಕೀಯದಲ್ಲಿರುವವರು ಅರ್ಥ ಮಾಡಿಕೊಳ್ಳಬೇಕು.

|ಡಾ. ಮಂಜುನಾಥ್​ ಬಿ. ಎಚ್​. 

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅದೇ ಮೊದಲ ಬಾರಿಗೆ ಸಂಸತ್ ಭವನ ಪ್ರವೇಶಿಸುತ್ತಿದ್ದರು. ಸಂಸತ್ ಭವನದ ಮೆಟ್ಟಿಲುಗಳನ್ನು ಸಮೀಪಿಸುತ್ತಿದ್ದಂತೆ, ಮೆಟ್ಟಿಲಿಗೆ ಹಣೆ ಇಟ್ಟು, ನಮಸ್ಕರಿಸಿ ಒಳ ಪ್ರವೇಶಿಸಿದರು. ತಮ್ಮ ಮೊದಲ ಭಾಷಣದಲ್ಲಿ ‘ನಾನು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿಲ್ಲ, ಪ್ರಧಾನ ಸೇವಕನಾಗಿ ಕೆಲಸ ನಿರ್ವಹಿಸುತ್ತೇನೆ’ ಎಂದರು. ಇದು ಪ್ರತಿಯೊಬ್ಬ ರಾಜಕಾರಣಿಯಿಂದಲೂ ಜನತೆ ಎದುರು ನೋಡುವ ನಡವಳಿಕೆಯೂ ಹೌದು. ರಾಜಕಾರಣ ಎಂಬುದು ಜನಸೇವೆಗಿರುವ ಒಂದು ಉತ್ತಮ ಅವಕಾಶವೇ ಹೊರತು ಅದು ದಂಧೆ, ವ್ಯವಹಾರವಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಚಿತ್ರಣ ನಂಬಲಸಾಧ್ಯ ಎಂಬ ರೀತಿಯಲ್ಲಿ ಬದಲಾಗುತ್ತಿದೆ. ಶುದ್ಧಹಸ್ತರು ರಾಜಕೀಯದಲ್ಲಿ ಸಕ್ರಿಯವಾಗಿರುವ ದಿನಗಳು ದೂರವಾಗುತ್ತಿರುವ ಆತಂಕವೂ ಕಾಡುತ್ತಿದೆ. ರಾಜ್ಯ ರಾಜಕೀಯದಲ್ಲಂತೂ ಅಸಹಜ ಬದಲಾವಣೆಗಳು, ಬೆಳವಣಿಗೆಗಳು ಕಂಡುಬರುತ್ತಿವೆ. ರಾಜ್ಯವು ವಿಧಾನಸಭಾ ಚುನಾವಣೆಯತ್ತ ದಾಪುಗಾಲಿಡುತ್ತಿದೆ. ರಾಜಕಾರಣಿಗಳು, ಪಕ್ಷಗಳು ಅಧಿಕಾರದ ಗದ್ದುಗೆಗೇರಲು ತಾವು ಮಾಡಬಹುದಾದ, ತಮ್ಮ ಕೈಲಾದ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದ್ದಾರೆ. ಆದರೆ ತಮಗೊದಗಿದ ಅಧಿಕಾರವನ್ನು ಹೇಗೆ ಉಪಯೋಗಿಸಿಕೊಂಡರು, ಹೇಗೆ ನಡೆದುಕೊಂಡರು ಎಂಬುದೂ ಅಷ್ಟೇ ಮುಖ್ಯವಾಗುತ್ತದೆ.

ಆಡ್ವಾಣಿ ಮಾದರಿ ನಡೆ: ಅದು 1996ರ ದಿನಗಳು. ಅಂದು ಕೇಂದ್ರ ಸಚಿವರಾಗಿದ್ದ ಎಲ್.ಕೆ.ಆಡ್ವಾಣಿಯವರ ಹೆಸರು ಜೈನ್ ಹವಾಲಾ ಹಗರಣದಲ್ಲಿ ಕೇಳಿ ಬಂದಿತ್ತು. ನೇರವಾಗಿ ಆಡ್ವಾಣಿಯವರ ಹೆಸರಿರದಿದ್ದರೂ, ಡೈರಿಯೊಂದರಲ್ಲಿ ‘ಎಲ್ ಕೆ’ ಎಂಬ ಅಕ್ಷರಗಳಿದ್ದವು. ಶುದ್ಧಹಸ್ತ ರಾಜಕಾರಣಿ ಎಂದೇ ಹೆಸರಾಗಿದ್ದ ಆಡ್ವಾಣಿ ಅವರಿಗೆ ಈ ಆರೋಪ ನೋವುಂಟುಮಾಡಿತು. ಸಚಿವ ಸ್ಥಾನ ಹಾಗೂ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ‘ಆರೋಪ ಸುಳ್ಳೆಂದು ಸಾಬೀತಾದ ಬಳಿಕವಷ್ಟೇ ಸಂಸತ್ ಭವನದ ಮೆಟ್ಟಿಲು ಹತ್ತುತ್ತೇನೆ’ ಎಂದು ಹೊರನಡೆದರು ಆಡ್ವಾಣಿ. ಪ್ರಕರಣದ ವಿಚಾರಣೆ ನಡೆದು, 1998ರಲ್ಲಿ ಅವರು ನಿರಪರಾಧಿ ಎಂದು ಸಾಬೀತಾದ ಬಳಿಕವಷ್ಟೇ ಅವರು ಮರಳಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿ, ಸಂಸತ್ ಭವನ್ ಪ್ರವೇಶಿಸಿದರು. ಇದು ಬರಿಯ ಆಡ್ವಾಣಿಯವರ ಗೆಲುವಾಗಿರಲಿಲ್ಲ. ಬದಲಿಗೆ ರಾಜಕಾರಣದಲ್ಲಿದ್ದ ನೈತಿಕತೆಯ ಗೆಲುವಾಗಿತ್ತು.

ಇನ್ನೊಂದು ಘಟನೆ ಗಮನಿಸುವುದಾದರೆ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬಹುಮತದ ಕೊರತೆ ಎದುರಾಗಿತ್ತು. ಅದು ಬರಿಯ ಒಂದು ಸ್ಥಾನದ ಕೊರತೆಯಷ್ಟೇ! ವಾಜಪೇಯಿ ಮನಸ್ಸು ಮಾಡಿದ್ದರೆ ಹೇಗಾದರೂ ಮಾಡಿ ಆ ಬೆಂಬಲ ಗಿಟ್ಟಿಸಿಕೊಳ್ಳಬಹುದಿತ್ತು. ಆದರೆ ವಾಜಪೇಯಿ ಆಯ್ದುಕೊಂಡದ್ದು ನೈತಿಕತೆಯ ಹಾದಿ. ಅಧಿಕಾರಕ್ಕಿಂತಲೂ ಅವರಿಗೆ ಅವರ ಹಾಗೂ ಪಕ್ಷದ ಶುದ್ಧಹಸ್ತತೆಯೇ ಮುಖ್ಯವಾಗಿತ್ತು. ಸಂಸತ್ತಿನಲ್ಲಿ ಅದ್ಭುತವಾದ ವಾಗ್ಝರಿ ಹರಿಸಿ, ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರನಡೆದರು ವಾಜಪೇಯಿ. 1999ರ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಮತ್ತೆ ಬಹುಮತ ಪಡೆದು ವಾಜಪೇಯಿ ಸರ್ಕಾರ ರಚಿಸಿದರು.

ಇಂದಿನ ದಿನಗಳಲ್ಲಿ ನೈತಿಕತೆಯ ನೆಲೆಯಲ್ಲಿ ಸರ್ಕಾರವನ್ನು, ಅಧಿಕಾರವನ್ನು ತ್ಯಜಿಸುವ ಯಾವ ಸಾಧ್ಯತೆಯನ್ನೂ ಕಾಣಲು ಸಾಧ್ಯವಿಲ್ಲ. ರಾಜ್ಯದಲ್ಲಿ, ರಾಷ್ಟ್ರದಲ್ಲಿ ಎಂಥೆಂಥ ಸಂಸದೀಯ ಪಟುಗಳಿದ್ದರು. ಇಂದು ಎಷ್ಟು ಶಾಸಕರು, ಸಂಸದರು, ಸಚಿವರು ಅಧಿವೇಶನಗಳಿಗೆ ಹಾಜರಾಗುತ್ತಾರೆ? ಸಂಸದರಿಗೆ, ಶಾಸಕರುಗಳಿಗೆ ವೇತನ, ಅಧಿವೇಶನದಲ್ಲಿ ಪಾಲ್ಗೊಳ್ಳಲು ವಿಶೇಷ ಭತ್ಯೆ, ವಿಮಾನ- ರೈಲ್ವೆ ಉಚಿತ ಪ್ರಯಾಣ ಹೀಗೆ ಹಲವು ಸೌಲಭ್ಯಗಳಿವೆ. ತಾವು ಪ್ರತಿನಿಧಿಸುವ ಕ್ಷೇತ್ರದ ಸಮಸ್ಯೆಗಳನ್ನು ಮುಂದಿಟ್ಟು, ಪರಿಹಾರ ಒದಗಿಸುವುದು ಅವರ ಕರ್ತವ್ಯ. ಆದರೆ ಇಂದು ಜನಪ್ರತಿನಿಧಿಗಳ ಹಾಜರಾತಿ ಕನಿಷ್ಠ ಮಟ್ಟದಲ್ಲಿರುವುದನ್ನೂ ನಾವು ಕಾಣುತ್ತೇವೆ. ಒಂದು ವೇಳೆ ಸದನಕ್ಕೆ ಹಾಜರಾದರೂ ಇವರು ಸದನಕ್ಕೆ ಬಂದವರೋ ಅಥವಾ ಕದನಕ್ಕೋ ಎಂದು ಅನುಮಾನ ಮೂಡುವಂತಿರುತ್ತದೆ ಹಲವರ ನಡವಳಿಕೆ. ದೇಶದಲ್ಲಿ ಅವೆಷ್ಟೋ ಸಮಸ್ಯೆಗಳಿದ್ದು, ಅವುಗಳ ಪರಿಹಾರಕ್ಕಾಗಿ ಚರ್ಚೆ ನಡೆಸುವ ಬದಲು ಸದನದ ಗೌರವವನ್ನು ಕುಂದಿಸುವುದು, ಸದನದಲ್ಲಿ ಗಹಗಹಿಸಿ ನಗುವುದು, ಜಗಳವಾಡುವುದು, ಚರ್ಚೆಗಳ ಹಾದಿ ತಪ್ಪಿಸುವವರೇ ತುಂಬಿದ್ದಾರೆ. ಇಂತಹವರು ರಾಜಕಾರಣಕ್ಕೇಕೆ ಬರುತ್ತಾರೆ? ಹಣ ಮಾಡುವುದಕ್ಕೆ ಹಾಗೂ ಹತ್ತು ಹಲವು ದಂಧೆಗಳಿಂದ ಕೂಡಿಟ್ಟ ಕಪ್ಪುಹಣವನ್ನು ರಕ್ಷಿಸುವುದಕ್ಕೆ!

ಕಲುಷಿತಗೊಂಡ ರಾಜಕಾರಣ: ಮೊದಲೆಲ್ಲ ಋಷಿ-ಮುನಿಗಳು ತಪಸ್ಸನ್ನಾಚರಿಸಿ, ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಮಾಜಕ್ಕಾಗಿ ಸರ್ವಸ್ವ, ತನಗಾಗಿ ಅತ್ಯಲ್ಪ ಎಂಬ ವಿವೇಚನೆಯಿಂದ ಜೀವಿಸುತ್ತಿದ್ದರು. ಇಂದು ಸಮಾಜದ್ದೆಲ್ಲ ನನ್ನದೇ ಎಂದು ಭಾವಿಸುವ ರಾಜಕಾರಣಿಗಳು ಹೆಚ್ಚುತ್ತಿದ್ದಾರೆ. ಹಣ ಮಾಡುವುದೇ ಉದ್ದೇಶವಾದರೆ ಭಾರತದಲ್ಲಿ ಸಾಕಷ್ಟು ಉದ್ದಿಮೆಗಳಿವೆ, ಅವಕಾಶಗಳಿವೆ. ಅಲ್ಲಿ ಹಣ ಹೂಡಬಹುದು, ನ್ಯಾಯಯುತವಾಗಿ ಸಂಪಾದಿಸಬಹುದು. ಆದರೆ ದುಡ್ಡು ಮಾಡಲೆಂದು ರಾಜಕೀಯ ಮಾಡುವುದಾದರೆ ಅಂತಹವರಿಂದ ಸಮಾಜದ ಪ್ರಗತಿ ಸಾಧ್ಯವೇ? ತಾನು ಪ್ರತಿನಿಧಿಸುವ ಕ್ಷೇತ್ರವನ್ನು ಬೆಳೆಸಲಾರದವರು, ಅಭಿವೃದ್ಧಿಪಡಿಸಲು ಸಾಧ್ಯವಿಲ್ಲದವರು ರಾಜಕೀಯಕ್ಕೆ ಯಾವ ಕಾರಣಕ್ಕೂ ಕಾಲಿಡಬಾರದು.

ಇತ್ತೀಚೆಗೆ ಬೆಂಗಳೂರಿನ ಕಾಂಗ್ರೆಸ್ ಶಾಸಕರೊಬ್ಬರ ಮಗ ರೌಡಿಯಂತೆ ಯುವಕನೊಬ್ಬನ ಮೇಲೆ ಹೋಟೆಲ್ ಒಂದರಲ್ಲಿ ದಾಳಿ ನಡೆಸಿದ್ದಾನೆ. ಕಾಂಗ್ರೆಸ್ ಶಾಸಕನೋರ್ವನ ಬೆಂಬಲಿಗ ಬಿಬಿಎಂಪಿ ಕಚೇರಿಗೆ ಬೆಂಕಿ ಹಚ್ಚಲು ಮುಂದಾಗಿದ್ದ! ರಾಜಕಾರಣವೆಂಬುದು ವಂಶಪಾರಂಪರ್ಯ ವ್ಯವಹಾರದಂತಾದರೆ ಇದರಿಂದ ಹೆಚ್ಚಿನದೇನನ್ನು ನಿರೀಕ್ಷಿಸಲು ಸಾಧ್ಯ?

ಶಾಸ್ತ್ರಿಯವರ ಸರಳತೆ, ಪ್ರಾಮಾಣಿಕತೆ: ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅವರ ಕುಟುಂಬ ಒಂದು ಕಾರು ಕೊಂಡುಕೊಳ್ಳೋಣ ಎಂದು ಶಾಸ್ತ್ರಿಯವರನ್ನು ವಿನಂತಿಸಿಕೊಂಡಿತು. ಅದಕ್ಕೆ ಕಾರಣವೂ ಇತ್ತು. ಸರ್ಕಾರ ತನಗೆ ಒದಗಿಸಿದ ಕಾರನ್ನು ಸರ್ಕಾರಿ ಕೆಲಸಕ್ಕಲ್ಲದೆ ಬೇರಾವುದಕ್ಕೂ ಶಾಸ್ತ್ರಿ ಉಪಯೋಗಿಸುತ್ತಿರಲಿಲ್ಲ. ಹೀಗಾಗಿ 17,000 ಬೆಲೆಬಾಳುವ ಹೊಸ ಕಾರೊಂದನ್ನು ಶಾಸ್ತ್ರಿಯವರು ಸಾಲ ಮಾಡಿ ಖರೀದಿಸಿದರು! ಬಳಿಕ ಕೆಲವೇ ಸಮಯದಲ್ಲಿ ರಷ್ಯಾದ ತಾಷ್ಕೆಂಟ್​ನಲ್ಲಿ ಶಾಸ್ತ್ರಿಯವರು ಅನುಮಾನಾಸ್ಪದವಾಗಿ ತೀರಿಕೊಂಡರು. ಅವರ ನಿಧನಾನಂತರ ಅವರ ಪತ್ನಿ ತನಗೆ ಬರುತ್ತಿದ್ದ ಪಿಂಚಣಿ ಹಣದಲ್ಲಿ ಆ ಕಾರಿನ ಸಾಲ ತೀರಿಸಿದ್ದರಂತೆ.

ರಾಜಕಾರಣದಲ್ಲಿದ್ದು ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನು ಮೀರಲಾಗದವರು ಸಮಾಜಕ್ಕೆ ಹೊರೆಯಾಗಬಲ್ಲರೆ ಹೊರತು ಕೊಡುಗೆಯಲ್ಲ. ದುರಾಸೆಗಳನ್ನು, ಸ್ವಾರ್ಥಪರ ಚಿಂತನೆಗಳನ್ನು ಮೀರಿದರಷ್ಟೇ ಓರ್ವ ಜನನಾಯಕನಾಗಿ ಹೊರಹೊಮ್ಮಲು ಸಾಧ್ಯ. ಅಧಿಕಾರ ಬಲ ಉಪಯೋಗಿಸಿ ಸ್ವಾರ್ಥ ಸಾಧನೆಗಿಳಿದರೆ ಪ್ರಜೆಗಳು ಅಂತಹವರನ್ನು ನಾಯಕರೆಂದು ಹೇಗೆ ತಾನೇ ಸ್ವೀಕರಿಸಲು ಸಾಧ್ಯ? ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಂತಹ ಅಪಸವ್ಯಗಳು ಇನ್ನೆಷ್ಟು ಬೆಳಕಿಗೆ ಬರಲಿವೆಯೋ ತಿಳಿದಿಲ್ಲ. ಆದರೆ ಢೋಂಗಿ ಮಾತುಗಳನ್ನಾಡುವ, ದುರ್ವ್ಯವಹಾರಗಳನ್ನು ನಡೆಸುವ ಸೋಗಲಾಡಿ ರಾಜಕಾರಣಿಗಳ ಬಗ್ಗೆ ಪ್ರಜೆಗಳು ಎಚ್ಚರಿಕೆಯಿಂದಿರಬೇಕು. ರಾಜ್ಯದ ಅಭಿವೃದ್ಧಿಗೆ ಓಡುವ ಕುದುರೆಗಳಂತೆ ಮುನ್ನುಗ್ಗುವ ಛಾತಿಯುಳ್ಳ ಜನಪ್ರತಿನಿಧಿಗಳ ಅಗತ್ಯವಿದೆಯೇ ಹೊರತು ಸ್ವಾರ್ಥಿಗಳದ್ದಲ್ಲ.

(ಲೇಖಕರು ತಜ್ಞವೈದ್ಯರು, ಸಾಮಾಜಿಕ ಕಾರ್ಯಕರ್ತರು)

Leave a Reply

Your email address will not be published. Required fields are marked *