ತೀರ್ಪು ನಮ್ಮ ಪರವಿದ್ದರೂ ಪ್ರಕೃತಿ, ಪರಿಸ್ಥಿತಿ ನಮ್ಮ ಪರವಾಗಿಲ್ಲ!

| ಡಾ. ಮಂಜುನಾಥ. ಬಿ. ಎಚ್​

ಕಾವೇರಿ ವಿವಾದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕದ ಪರವಾಗಿ ಬಂದಿರುವುದು ಸಮಾಧಾನಕರ. ಆದರೆ, ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಮಳೆ, ತಾಪಮಾನ ಹೆಚ್ಚಳದ ಸವಾಲುಗಳ ನಡುವೆ ಜಲಮೂಲಗಳು ಬರಿದಾಗುತ್ತಿವೆ. ನದಿ ಹಾಗೂ ಇತರೆ ಜಲಮೂಲಗಳನ್ನು ಉಳಿಸಿಕೊಳ್ಳಲು ಮುಂದಾಗದಿದ್ದರೆ ಮುಂದೆ ಗಂಭೀರ ಪರಿಸ್ಥಿತಿ ತಲೆದೋರಬಹುದು.

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯುತ್ತಿರುವ ಕ್ರಿಕೆಟ್ ಸರಣಿ ಕ್ರಿಕೆಟ್ ಪ್ರೇಮಿಗಳಿಗೆ ಬಹಳ ಖುಷಿ ಕೊಟ್ಟಿದೆ. ಟೆಸ್ಟ್ ಸರಣಿ ಸೋತರೂ, ಸರಣಿಯುದ್ದಕ್ಕೂ ತಂಡದ ಪ್ರದರ್ಶನ ಗಮನಾರ್ಹವಾಗಿತ್ತು. ಆ ಬಳಿಕದ ಏಕದಿನ ಸರಣಿಯಲ್ಲಂತೂ ಭಾರತ ತಂಡದ್ದೇ ಕಾರುಬಾರು. ಸರಣಿಯುದ್ದಕ್ಕೂ ಮಾಧ್ಯಮಗಳಲ್ಲಿ ಸೊಗಸಾದ ವರದಿಗಳು ಮೂಡಿಬರುತ್ತಿದ್ದವು. ಆಫ್ರಿಕಾದಲ್ಲಿನ ಕ್ರಿಕೆಟ್ ಪಂದ್ಯಾವಳಿಯೊಡನೆಯೇ ಆಫ್ರಿಕಾಗೆ ಸಂಬಂಧಪಟ್ಟ ವರದಿಯೊಂದು ಮಾಧ್ಯಮಗಳಲ್ಲಿ ಮೂಡಿಬಂತು. ಅದಕ್ಕೆ ದುರದೃಷ್ಟವಶಾತ್ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ವಾಸ್ತವವಾಗಿ ಅದು ನಮ್ಮನ್ನು ಬಡಿದೆಬ್ಬಿಸಬೇಕಿತ್ತು, ಜಾಗೃತಗೊಳಿಸಬೇಕಿತ್ತು.

ಆಫ್ರಿಕಾದ ಪ್ರಮುಖ ನಗರಗಳಲ್ಲೊಂದಾದ ಕೇಪ್​ಟೌನ್ ಶತಮಾನಗಳ ಇತಿಹಾಸದಲ್ಲೇ ಎಂದೂ ಕಂಡರಿಯದ ಭೀಕರ ಜಲಕ್ಷಾಮವನ್ನೆದುರಿಸುತ್ತಿದೆ. 2018ರ ಏಪ್ರಿಲ್ 22ನ್ನು ಕೇಪ್​ಟೌನ್​ನಲ್ಲಿ ಈಚಢ ಘಛ್ಟಿಟ ಎಂದು ಘೊಷಿಸಲಾಗಿದೆ. ಅದರರ್ಥ ಆ ಬಳಿಕ ಕೇಪ್​ಟೌನ್ ನಗರಕ್ಕೆ ದಿನಬಳಕೆಗೆ ಕನಿಷ್ಠ ಪ್ರಮಾಣದಲ್ಲೂ ನೀರಿಲ್ಲ! 1933ರ ಬಳಿಕ 2017 ಅತ್ಯಂತ ಕನಿಷ್ಠ ಪ್ರಮಾಣದ ಮಳೆ ಪಡೆದ ವರ್ಷವಾಗಿದೆ. ಪ್ರವಾಸಿಗರೂ ಸೇರಿ, ಕೇಪ್​ಟೌನ್ ಜನತೆ 90 ಸೆಕೆಂಡುಗಳಿಗೂ ಹೆಚ್ಚಿನ ಕಾಲ ಸ್ನಾನ ಮಾಡಬಾರದು ಎಂಬುದಾಗಿ ನಗರಾಡಳಿತ ಈಗಾಗಲೇ ಫರ್ವನು ಹೊರಡಿಸಿದೆ. ಏನೇ ಪರಿಹಾರಗಳನ್ನು ಯೋಚಿಸಿದರೂ ಏಪ್ರಿಲ್ 22ರ ನಂತರ ನಗರದ 4.8 ಮಿಲಿಯನ್ ಜನತೆಗೆ ಕನಿಷ್ಠ ಕುಡಿಯುವ ನೀರಾದರೂ ಹೇಗೆ ಒದಗಿಸುವುದು ಎಂಬ ಪ್ರಶ್ನೆಯೇ ಪೆಡಂಭೂತವಾಗಿ ನಿಂತಿದೆ.

ಕೇಪ್​ಟೌನ್ ನಗರ ಸಮಶೀತೋಷ್ಣ ವಲಯದಲ್ಲಿದ್ದು, ಸಮುದ್ರದ ದಡದಲ್ಲಿಯೇ ಇದೆ. ಆದರೂ ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಗೆ, ಅಪಾರ ಪ್ರಮಾಣದ ಪ್ರವಾಸಿಗರಿಗೆ ಅದನ್ನು ಶುದ್ಧೀಕರಿಸಿ ಒದಗಿಸುವ ತಂತ್ರಜ್ಞಾನ ದುಬಾರಿಯೂ, ಕಷ್ಟಕರವೂ ಆಗಿದೆ. ಇಲ್ಲಿಗೆ ನೀರು ಒದಗಿಸಲು 6 ಜಲಾಶಯಗಳಿದ್ದರೂ, ಕಂಡು ಕೇಳರಿಯದ ಬರದ ಪರಿಣಾಮವಾಗಿ ಎಲ್ಲ ಜಲಾಶಯಗಳೂ ಬರಿದಾಗಿ ಕುಳಿತಿವೆ. ದಕ್ಷಿಣ ಆಫ್ರಿಕಾದ ಕೇಪ್​ಟೌನ್ ಅನುಭವಿಸುತ್ತಿರುವ ನೀರಿನ ಸಂಕಟಕ್ಕೆ ನಾವೇಕೆ ಇಷ್ಟೊಂದು ಚಿಂತಿಸಬೇಕು ಎನ್ನುತ್ತೀರಾ? ಬರಿಯ ಆಫ್ರಿಕಾವಲ್ಲ. ನಮ್ಮ ಬೆಂಗಳೂರು ಸಹ ಇಂತಹ ಸಮಸ್ಯೆಯಿಂದ ಬಹಳ ದೂರವೇನೂ ಇಲ್ಲ!

ಇತ್ತೀಚೆಗೆ ಬಿಬಿಸಿ ವಾಹಿನಿ ಪ್ರಸಾರ ಮಾಡಿದ ವರದಿಯೊಂದರ ಪ್ರಕಾರ, ಪ್ರಪಂಚದಲ್ಲಿ ಕುಡಿಯಲೂ ನೀರಿಲ್ಲದಂತಾಗಬಹುದಾದ ನಗರಗಳ ಪಟ್ಟಿಯಲ್ಲಿ ನಮ್ಮ ರಾಜಧಾನಿ ಬೆಂಗಳೂರು ಸಹ ಇದೆ! ನಂಬುವುದಕ್ಕೆ ಕಷ್ಟವೆನಿಸಿದರೂ ಇದು ವಾಸ್ತವಕ್ಕೆ ಹಿಡಿದ ಕೈಗನ್ನಡಿ. ಒಂದು ಕಾಲದಲ್ಲಿ ಬೆಂಗಳೂರು ನಿಸರ್ಗ ಪ್ರಿಯರ ಅಚ್ಚುಮೆಚ್ಚಿನ ನಗರ. ಎಲ್ಲೆಲ್ಲೂ ಹಸಿರು ಹಾಸು, ಮರ ಗಿಡಗಳು, ಉದ್ಯಾನಗಳು, ಕೆರೆ ಕಟ್ಟೆಗಳು ಬೆಂಗಳೂರಿನ ಹಿರಿಮೆಯಾಗಿತ್ತು. ಯಾವಾಗ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಅಪಾರವಾಗಿ ಬೆಳೆಯತೊಡಗಿತೋ, ನಿಸರ್ಗ ಸೌಂದರ್ಯ ಬೆಂಗಳೂರಿನಿಂದ ಇಷ್ಟಿಷ್ಟೇ ದೂರವಾಗತೊಡಗಿತು. ಕೆರೆಗಳನ್ನು ಒತ್ತುವರಿ ಮಾಡಿ ಟೌನ್​ಶಿಪ್​ಗಳು, ಬಡಾವಣೆಗಳು ತಲೆ ಎತ್ತತೊಡಗಿದವು. ರಾಮಸಮುದ್ರ (ರಾಮಸಂದ್ರ), ಬೊಮ್ಮಸಮುದ್ರ (ಬೊಮ್ಮಸಂದ್ರ) ಮುಂತಾದ ಕೆರೆಗಳು ಇಂದು ಹೆಸರಲ್ಲಷ್ಟೇ ಉಳಿದಿವೆ.

ಬೆಂಗಳೂರಿನ ಅಕ್ಕಿ ತಿಮ್ಮನಹಳ್ಳಿ ಕೆರೆ ಸಂಪೂರ್ಣವಾಗಿ ಒತ್ತುವರಿಗೊಂಡು ಹಾಕಿ ಮೈದಾನವಾಯಿತು. ಸಂಪಂಗಿ ಕೆರೆ ಕಂಠೀರವ ಕ್ರೀಡಾಂಗಣವಾಯಿತು. ಧರ್ವಂಬುಧಿ ಕೆರೆ ಇಂದಿನ ಕೆಂಪೇಗೌಡ ಬಸ್ ನಿಲ್ದಾಣವಾಯಿತು. ಚಲ್ಲಘಟ್ಟ ಕೆರೆ ಗಾಲ್ಪ್ ಕ್ರೀಡಾಂಗಣವಾಯಿತು. ಸಿದ್ದಿಕಟ್ಟೆ ಕೆರೆ ಕೃಷ್ಣರಾಜ ಮಾರುಕಟ್ಟೆಯಾಯಿತು. ಕೆಂಪಾಂಬುಧಿ ಕೆರೆ ಇಂದು ಕೊಳಚೆ ಸಂಗ್ರಹಾಗಾರವಾಗಿ ಬದಲಾಗಿದೆ. ದೊಮ್ಲೂರು, ಕುರುಬರಹಳ್ಳಿ ಕೆರೆ, ಸುಭಾಷ್ ನಗರ ಕೆರೆ, ಹೀಗೆ ಹತ್ತು ಹಲವು ಕೆರೆಗಳು ಬಡಾವಣೆಗಳಾಗಿ ಬದಲಾದವು. ಕೆರೆಗಳ ಮೇಲೆ ಇರುವ ಕಾರಣಕ್ಕೋ ಏನೋ, ಬೆಂಗಳೂರಿನ ಕೊಳವೆಬಾವಿಗಳಲ್ಲಿ ಹೇರಳವಾಗಿ ನೀರೂ ಸಿಗುತ್ತಿತ್ತು. ಈ ಮೊದಲು ಬಲಿಯಾದ ಕೆರೆಗಳನ್ನು ಬಿಟ್ಟು ಬಿಡಿ. ಈಗಿರುವ ಕೆರೆಗಳನ್ನಾದರೂ ಬೆಂಗಳೂರಿನಲ್ಲಿ ಉಳಿಸಿಕೊಳ್ಳಲಾಗುತ್ತಿದೆಯೇ? ನೊರೆ ಕಾರುವ, ಬೆಂಕಿ ಹಿಡಿಯುವ ಬೆಳ್ಳಂದೂರು ಕೆರೆಯನ್ನು ಮುಚ್ಚುವುದೇ ಪರಿಹಾರ ಎನ್ನುವ ಬೆಂಗಳೂರು ಅಭಿವೃದ್ಧಿ ಸಚಿವರು, ಅದನ್ನು ಮುಚ್ಚುವುದಕ್ಕೇ ರಣಹದ್ದುಗಳಂತೆ ಕಾಯುವ ರಿಯಲ್ ಎಸ್ಟೇಟ್ ದಂಧೆಕೋರರೂ ಇದ್ದಾರೆ. ಒಂದು ಕಾಲದಲ್ಲಿ ಇಡಿಯ ಬೆಂಗಳೂರಿಗೆ ನೀರು ಒದಗಿಸುತ್ತಿದ್ದ ಕೆರೆಗಳು ಇಂದು ಲಕ್ವ ಬಡಿದಂತಾಗಿಬಿಟ್ಟಿವೆ. ಮಿತಿಮೀರಿದ ಮಾನವ ಚಟುವಟಿಕೆಗಳಲ್ಲದೆ ಬೇರಾವುದೂ ಇದಕ್ಕೆ ಕಾರಣಗಳಾಗಿ ಉಳಿದಿಲ್ಲ.

ಕೆಲವು ದಿನಗಳ ಹಿಂದೆ ಸವೋಚ್ಚ ನ್ಯಾಯಾಲಯ ಕಾವೇರಿ ನದಿ ನೀರು ಹಂಚಿಕೆಯ ಕುರಿತು ತೀರ್ಪನ್ನು ಪ್ರಕಟಿಸಿದೆ. ಕರ್ನಾಟಕದ ಪಾಲಿಗೆ ಲಾಭದಾಯಕವಾದ ಈ ತೀರ್ಪ, ಕಾವೇರಿ ನೀರಿನಲ್ಲಿ 14 ಟಿಎಂಸಿ ಹೆಚ್ಚುವರಿ ನೀರನ್ನು ಕರ್ನಾಟಕದ ಪಾಲಿಗಿತ್ತು ಆದೇಶ ಹೊರಡಿಸಿತು. ಇದರಲ್ಲಿ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು 4.5 ಟಿಎಂಸಿ ನೀರನ್ನು ಮೀಸಲಿರಿಸಬಹುದು ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ತೀರ್ಪು ನಮ್ಮ ಪರವಾಗಿ ಬಂದಿದೆ. ನೀರು ಎಂಬುದು ರಾಷ್ಟ್ರೀಯ ಸಂಪತ್ತು. ಯಾವ ರಾಜ್ಯವೂ ಈ ನದಿ ನಮ್ಮದು, ನಿಮ್ಮ ರಾಜ್ಯಕ್ಕೆ ಹರಿಯಲು ಬಿಡುವುದಿಲ್ಲ ಎಂದು ಹೇಳುವುದು ಸಾಧ್ಯವಿಲ್ಲ, ಅದು ಸಾಧುವೂ ಅಲ್ಲ. ಆದರೆ ನಮ್ಮ ಪಾಲಿನ ನೀರನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆಂಬುದು ಅಷ್ಟೇ ಮುಖ್ಯವಾಗುತ್ತದೆ.

ಮೈಸೂರಿನಿಂದ ಹುಣಸೂರಿಗೆ ಹೋಗುವಾಗ, ಹುಣಸೂರು ಪಟ್ಟಣ ಪ್ರವೇಶಿಸುವಾಗಲೇ ಒಂದು ನದಿ ನಮ್ಮನ್ನು ಸ್ವಾಗತಿಸುತ್ತದೆ. ಸದಾ ಹಸುರಿನಿಂದ ತುಂಬಿರುವ ಅದು ಸೇತುವೆಯ ಕೆಳಗಿರುವ ಮೈದಾನವೇನೋ ಎಂಬಂತೆ ಭಾಸವಾಗುತ್ತದೆ. ಆದರೆ ಅದು ಹುಣಸೂರಿನ ಜೀವನದಿ ಲಕ್ಷ್ಮಣತೀರ್ಥ! ಕೊಡಗು ಜಿಲ್ಲೆಯಲ್ಲಿ ಉಗಮಿಸುವ ಲಕ್ಷ್ಮಣ ತೀರ್ಥ ನದಿ ಪೂರ್ವಾಭಿಮುಖವಾಗಿ ಹರಿದು ಕೃಷ್ಣರಾಜ ಸಾಗರದ ಬಳಿ ಕಾವೇರಿ ನದಿಯನ್ನು ಸೇರುತ್ತದೆ. ಕೊಡಗಿನಲ್ಲಿ ಬಂಡೆಗಳ ಮೇಲಿಂದ ಧುಮುಕಿ ಇರ್ಪ ಎಂಬ ಅತಿ ಸುಂದರ ಜಲಪಾತವನ್ನೂ ಲಕ್ಷ್ಮಣತೀರ್ಥ ನದಿ ಸೃಷ್ಟಿಸುತ್ತದೆ.

ರಾಮಾಯಣ ಕಾಲದಲ್ಲಿ, ರಾಮನ ವನವಾಸದ ವೇಳೆ ನೀರಿನ ಅವಶ್ಯಕತೆ ಎದುರಾದಾಗ ಲಕ್ಷ್ಮಣ ಮುನಿಕಾಡಿನ ಬ್ರಹ್ಮಗಿರಿ ಎಂಬ ಬೆಟ್ಟಕ್ಕೆ ಬಾಣ ಬಿಟ್ಟಾಗ ಹುಟ್ಟಿಬರುವ ನದಿಯೇ ಲಕ್ಷ್ಮಣತೀರ್ಥ ನದಿಯೆಂಬ ಪ್ರತೀತಿಯಿದೆ. ಕತೆಯೇನೇ ಇರಲಿ, ಆದರೆ ಕೊಡಗಿನ ಭೂಪ್ರದೇಶ ಅಪಾರ ಜಲ ಸಂಪತ್ತನ್ನು ಹೊಂದಿದ್ದಂತೂ ಸತ್ಯ. ಕೊಡಗಿನ ಮಳೆಕಾಡುಗಳು ಮಳೆಸುರಿಸಿ, ಕಾವೇರಿ ಹಾಗೂ ಆಕೆಯ ಉಪನದಿಗಳನ್ನು ಸದಾ ಹರಿಯುವಂತೆ ಮಾಡುತ್ತಿದ್ದವು. ಆದರೆ ಇತ್ತೀಚಿನ ಟಿಂಬರ್ ಲಾಬಿ ಕೊಡಗಿನ ಕಾಡುಗಳನ್ನು ನಾಶ ಮಾಡುತ್ತಿರುವ ಪರಿಣಾಮವಾಗಿ ಕಾವೇರಿ ಹಾಗೂ ಆಕೆಯ ಉಪನದಿಗಳು ಬೇಸಿಗೆ ಆರಂಭವಾದೊಡನೆ ಬತ್ತುವ ಪರಿಸ್ಥಿತಿ ಎದುರಿಸುತ್ತಿವೆ.

ಪ್ರತಿ ವರ್ಷ ಬೇಸಿಗೆ ಬರುತ್ತಿದ್ದಂತೆಯೇ ಲಕ್ಷ್ಮಣತೀರ್ಥ ನದಿ ಹುಣಸೂರು ಪಟ್ಟಣದಲ್ಲಿ ಹಸಿರಾಗುತ್ತದೆ. ತ್ಯಾಜ್ಯ, ಪಾಚಿ, ಜೊಂಡು ಹುಲ್ಲು, ಜಲಸಸ್ಯಗಳಿಂದ ಕೂಡಿರುವ ಕಲುಷಿತ ನೀರನ್ನು ಅದೆಷ್ಟೋ ಮಂದಿ ಬಳಸುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯದ ಬಗ್ಗೆಯೂ ಪ್ರಶ್ನೆಗಳೇಳುತ್ತಿವೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿ ನದಿಯಲ್ಲಿದ್ದ ಕೊಳಚೆ, ಪಾಚಿ ಇನ್ನಿತರ ಎಲ್ಲ ಕಲ್ಮಶಗಳು ಹರಿದು ಹೋಗಿ ನದಿ ಸ್ವಚ್ಛವಾಗಿ ಬಿಡುತ್ತಿತ್ತು. ಆದರೆ ಈಗ ಗೂಗಲ್ ಮ್ಯಾಪ್​ನಲ್ಲಿ ನೋಡಿದರೂ ಸಹ ಪಾಚಿಗಟ್ಟಿ ಹಸಿರಾಗಿರುವ ಲಕ್ಷ್ಮಣತೀರ್ಥ ಹುಣಸೂರಿನ ಸ್ವಾಗತ ಕಮಾನಿನಂತೆ ಗೋಚರಿಸುತ್ತದೆ. ಹುಣಸೂರು ಪಟ್ಟಣದ ಸಕಲ ತ್ಯಾಜ್ಯವೂ ಈ ನದಿಯ ಒಡಲನ್ನು ಸೇರುತ್ತಿದೆ. ಜತೆಗೆ ಸಿಕ್ಕಿದ್ದನ್ನೆಲ್ಲ ನದಿಗೆ ಎಸೆದು ತೆಪ್ಪಗೆ ಕೈಕಟ್ಟಿ ಕೂರುವ ಮಂದಿಯೂ ಸಾಕಷ್ಟಿದ್ದಾರೆ. ಆದರೆ ಈ ನದಿಯನ್ನೇ ನಂಬಿ ಹಲವಾರು ಹಳ್ಳಿಗಳ ಜನ ಜೀವನ ನಡೆಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ, ಮುಂದಿನ ಕೆಲವರ್ಷಗಳಲ್ಲಿ ಲಕ್ಷ್ಮಣ ತೀರ್ಥ ನದಿ ವಿಷಯುಕ್ತವಾಗಿ, ನಿರುಪಯುಕ್ತವಾಗುವುದು ಖಂಡಿತ. ಹೀಗೆ ಕಾವೇರಿಯ ಉಪನದಿಗಳು ಅವನತಿ ಹೊಂದಿದರೆ ಕಾವೇರಿ ನದಿ ಹೇಗೆ ತಾನೇ ಉಳಿದೀತು?

ಸುಪ್ರೀಂ ಕೋರ್ಟ್ ಆದೇಶದನ್ವಯ ನಮಗೆ ಹೆಚ್ಚುವರಿ ನೀರೇನೋ ಲಭಿಸುತ್ತದೆ. ಆದರೆ ಕಾವೇರಿ ಪಾತ್ರದಲ್ಲಿ ನೀರಿನ ಲಭ್ಯತೆಯೇ ಕಡಿಮೆಯಾದರೆ ಏನು ಮಾಡೋಣ? ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತ ಬರುತ್ತಿದೆ ಅಥವಾ ಅಕಾಲದಲ್ಲಿ ಸುರಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮಲ್ಲಿರುವ ಜಲಮೂಲಗಳನ್ನು ಜತನವಾಗಿ ರಕ್ಷಿಸುವ ಕಾರ್ಯವಾಗಬೇಕಲ್ಲ. ಕಾವೇರಿ ತೀರ್ಪಿನ ಬಳಿಕ ಪ್ರತಿಕ್ರಿಯಿಸುತ್ತ ಟ್ವೀಟ್ ಮಾಡಿದ ಬಿ.ಎಸ್.ಯಡಿಯೂರಪ್ಪನವರು ಜಲಮೂಲಗಳನ್ನು ಸಂರಕ್ಷಿಸುವ ಮಾತುಗಳನ್ನಾಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕೊಡಗಿನ, ಪಶ್ಚಿಮಘಟ್ಟದ ಕಾಡುಗಳಿಗೆ ಮರು ಹಸಿರೀಕರಣ ನಡೆಸುವ ಭರವಸೆ ನೀಡಿದ್ದಾರೆ. ನೀರಿನ ಸಮಸ್ಯೆಯ ಪರಿಹಾರಕ್ಕೆ ನ್ಯಾಯಾಲಯವಲ್ಲ, ನಾವು ಮನಸ್ಸು ಮಾಡಬೇಕಿದೆ. ನಮ್ಮ ಜಲಮೂಲಗಳನ್ನು, ಪರಿಸರವನ್ನು ಉಳಿಸಿಕೊಳ್ಳದಿದ್ದರೆ ಕೇಪ್​ಟೌನ್ ಜಾಗದಲ್ಲಿ ಪ್ರಪಂಚದ ಮಾಧ್ಯಮಗಳು ಭಾರತೀಯ ನಗರಗಳ ನೀರಿನ ದುಸ್ಥಿತಿಯನ್ನು ವರದಿ ಮಾಡುತ್ತಿರುತ್ತವೆ!

(ಲೇಖಕರು ತಜ್ಞವೈದ್ಯರು, ಸಾಮಾಜಿಕ ಕಾರ್ಯಕರ್ತರು)

Leave a Reply

Your email address will not be published. Required fields are marked *