ಕಲಘಟಗಿ: ಕಳೆದ ವರ್ಷ ಕ್ಷೇತ್ರಕ್ಕೆ ಬರ ವಕ್ಕರಿಸಿದ್ದರಿಂದ ರೈತರ ಜೀವನಕ್ಕೆ ಗಾಯವಾಗಿತ್ತು. ಆದರೆ, ವಿಧಿಯಾಟಕ್ಕೆ ಈ ವರ್ಷ ಅತೀವ ಮಳೆಯಿಂದಾಗಿ ಹಸಿರುಬರ ಆವರಿಸಿ ಅದೇ ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದೆ.
ತಾಲೂಕಿನಲ್ಲಿ ಈ ವರ್ಷ ಹಸಿರು ಬರಗಾಲದ ಛಾಯೆ ಆವರಿಸಿ ರೈತರು ಕಂಗಾಲಾಗಿದ್ದಾರೆ. ಇಂಥದ್ದರಲ್ಲಿ ಕ್ಷೇತ್ರ ಹಾಗೂ ಕ್ಷೇತ್ರದ ಜನರತ್ತ ಸಚಿವ ‘ಸಂತೋಷ’ದ ಚಿತ್ತ ಹರಿಸುತ್ತಿಲ್ಲ ಎಂದು ಜನರು ಸ್ಥಳೀಯ ಶಾಸಕರ ಮೇಲೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪ್ರಸಕ್ತ ವರ್ಷ ಬೆಂಬಿಡದೆ ಮಳೆ ಸುರಿದ ಪರಿಣಾಮ ಆಳೆತ್ತರಕ್ಕೆ ಬೆಳೆದು ನಿಂತ ಮೆಕ್ಕೆಜೋಳ, ಕಬ್ಬು, ಸೋಯಾಬೀನ್ ಬೆಳೆಗಳು ಸಂಪೂರ್ಣ ನೆಲಕಚ್ಚಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಏನಿದು ಹಸಿರು ಬರ:
ಭೂಮಿಯಲ್ಲಿ ಬಿತ್ತನೆ ಮಾಡಿದ ಬೀಜಗಳು ಸಂಪೂರ್ಣವಾಗಿ ಮೊಳಕೆಯೊಡೆದು ಎದೆಯೆತ್ತರಕ್ಕೆ ಬೆಳೆದು ಕೃಷಿ ಭೂಮಿಯೆಲ್ಲ ಹಸಿರಾಗಿ ಗೋಚರಿಸುತ್ತದೆ. ಮೆಕ್ಕೆಜೋಳ ಹಾಗೂ ಸೋಯಾಬೀನ್ ಬೆಳೆಯಲ್ಲಿ ತೆನೆಯೊಳಗೆ ತುದಿವರೆಗೂ ಕಾಳು ಕಟ್ಟದೆ ಬೆಳೆಗಿಂತ ಭೂಮಿಯಲ್ಲಿ ಕಳೆ (ಕಸದ) ಪ್ರಮಾಣವೇ ಹೆಚ್ಚಾಗಿದೆ. ಇದರಿಂದ ರೈತರಿಗೆ ಬಂಪರ್ ಇಳುವರಿ ಬಾರದೆ ಆದಾಯದ ಮೂಲಕ್ಕೆ ಕೊಕ್ಕೆ ಬೀಳಲಿದೆ. ತಾಲೂಕಿನಾದ್ಯಂತ ಕಣ್ಣು ಹಾಯಿಸಿದಷ್ಟು ದೂರಕ್ಕೂ ಹೊಲಗಳಲ್ಲಿ ಬೆಳೆ ಹಚ್ಚ ಹಸಿರಾಗಿ ಕಾಣುತ್ತದೆ. ಆದರೆ, ಪ್ರತಿ ಎಕರೆಗೆ 25ರಿಂದ 30 ಕ್ವಿಂಟಾಲ್ನಷ್ಟು ಫಸಲು ಬರಬೇಕಿದ್ದ ಮೆಕ್ಕೆಜೋಳ ಹಸಿರು ಬರದಿಂದ ಕೇವಲ 5ರಿಂದ 10 ಕ್ವಿಂಟಾಲ್ಗೆ ಕುಸಿತಗೊಂಡಿದೆ. ಪ್ರತಿ ಎಕರೆಗೆ 6-ರಿಂದ 8 ಕ್ವಿಂಟಾಲ್ನಷ್ಟು ಬರಬೇಕಿದ್ದ ಸೋಯಾಬೀನ್ ಬೆಳೆ ನಡುಮಟ್ಟಕ್ಕೆ ಬೆಳೆದಿದ್ದು ಇಳುವರಿ ಮಾತ್ರ ಎರಡು ಕ್ವಿಂಟಾಲ್ನಷ್ಟು ಬಾರದ ಪರಿಸ್ಥಿತಿಯಿದೆ. ಅದರಂತೆ ಕಬ್ಬು ನೆಲಕ್ಕೊರಗಿದ್ದರಿಂದ ಗಣಲು ಗಟ್ಟಲು ತೊಂದರೆಯಾಗಿ ಬಂಪರ್ ಇಳುವರಿಯ ನಿರೀಕ್ಷೆಗೆ ಭಾರೀ ಹೊಡೆತ ಬಿದ್ದಂತಾಗಿದೆ. ಈಗಾಗಲೇ ಕೆಲ ಬೆಳೆಗಳು ಕಟಾವಾಗಿದ್ದು, ಇನ್ನು ಹಲವು ಬೆಳೆಗಳು ಕಟಾವು ಹಂತದಲ್ಲಿವೆ. ಆದರೆ, ಹೊಲಗಳಲ್ಲಿ ಮಳೆ ನೀರು ನಿಂತು ಬೆಳೆ ಕೊಳೆಯುತ್ತಿದೆ. ಬೆಳೆ ನೋಡಲು ಹಚ್ಚಹಸಿರಾಗಿ ಕಾಣುತ್ತದೆ ಆದರೆ, ಇಳುವರಿ ಮಾತ್ರ ಅಷ್ಟಕ್ಕಷ್ಟೇ. ಇನ್ನುಳಿದ ಬೆಳೆಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.
ಪ್ರಸಕ್ತ ಸಾಲಿನ ಬಿತ್ತನೆ ಪ್ರಮಾಣ:
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 37,920 ಹೆಕ್ಟೇರ್ ಬಿತ್ತನೆ ಗುರಿ ಪೈಕಿ 33.590 ಹೆಕ್ಟೇರ್ ಬಿತ್ತನೆ ನಡೆದಿದೆ. ಮೆಕ್ಕೆಜೋಳ 20,566 ಹೆಕ್ಟೇರ್, ಭತ್ತ 3751 ಹೆಕ್ಟೇರ್, ಸೋಯಾಬೀನ್ 9295 ಹೆಕ್ಟೇರ್, ತೊಗರಿ 20 ಹೆಕ್ಟೇರ್, ಕಬ್ಬು 4245 ಹೆಕ್ಟೇರ್, ಹತ್ತಿ 145 ಹೆಕ್ಟೇರ್, ಹೈಬ್ರಿಡ್ ಜೋಳ 15 ಹೆಕ್ಟೇರ್, ಶೇಂಗಾ 17 ಹೆಕ್ಟೇರ್ನಷ್ಟು ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದಾಗಿ ನಮ್ಮ ಕ್ಷೇತ್ರದ ಜನರು ಸಾಕಷ್ಟು ಹಾನಿ ಅನುಭವಿಸುತ್ತಿದ್ದಾರೆ. ಹಾನಿಗೊಳಗಾದ ರೈತರಿಗೆ ಕೂಡಲೇ ಪರಿಹಾರ ಒದಗಿಸಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ತ್ವರಿತವಾಗಿ ಪರಿಹಾರ ನೀಡಬೇಕು. ಇಲ್ಲದಿದ್ದರೆ ಕ್ಷೇತ್ರದ ರೈತರ ಕೆಂಗಣ್ಣಿಗೆ ಸರ್ಕಾರ ಗುರಿಯಾಗುವಲ್ಲಿ ಅನುಮಾನವೇ ಇಲ್ಲ.
| ನಾಗರಾಜ ಛಬ್ಬಿ ವಿಧಾನ ಪರಿಷತ್ ಮಾಜಿ ಸದಸ್ಯ
ಹಾನಿಗೊಳಗಾದ ಜಮೀನುಗಳಿಗೆ ಈಗಾಗಲೇ ಭೇಟಿ ನೀಡಿ ಪರಿಶೀಲಿಸಿ ವರದಿ ಪಡೆಯಲಾಗಿದೆ. ಕೂಡಲೇ ವರದಿಯನ್ನು ಮೇಲಧಿಕಾರಿಗಳ ಸೂಚನೆ ಮೇರೆಗೆ ಸರ್ಕಾರಕ್ಕೆ ಸಲ್ಲಿಸಿ ರೈತರಿಗೆ ಪರಿಹಾರ ನೀಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ.
| ಅಮರ್ಕುಮಾರ ನಾಯಕ ಸಹಾಯಕ ಕೃಷಿ ನಿರ್ದೇಶಕ
ಅತೀವೃಷ್ಟಿಯಿಂದಾಗಿ ತಾಲೂಕಿನ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈಗಾಗಲೇ ವಿಮೆ ತುಂಬಿದ್ದರೂ ಬೆಳೆ ಪರಿಹಾರ ಪೂರ್ಣಪ್ರಮಾಣದಲ್ಲಿ ಜಮೆ ಆಗಿಲ್ಲ. ಕಳೆದ ಸಾಲಿನಲ್ಲಿ ಅರ್ಧಂಮರ್ಧ ರೈತರಿಗೆ ಮಾತ್ರ ಮಧ್ಯಂತರ ಪರಿಹಾರ ಬಂದಿದೆ. ಇನ್ನು ಶೇ. 50 ರಷ್ಟು ರೈತರಿಗೆ ಬಂದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ರೈತರ ಹಿತದೃಷ್ಟಿಯಿಂದ ತಾಲೂಕಿಗೆ ಆಗಮಿಸಿ ರೈತರ ಸಭೆ ನಡೆಸಿ ತ್ವರಿತವಾಗಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು.
| ಸಿದ್ದಯ್ಯ ಕಟ್ನೂರಮಠ ರೈತ ಸಂಘಟನೆ ಜಿಲ್ಲಾಧ್ಯಕ್ಷ