ಶಾಂತಿ ಸುವ್ಯವಸ್ಥೆಗೆ ಭಂಗ ತಂದರೆ ಕ್ರಮ

ಕಲಾದಗಿ: ಶಾಂತಿ ಸೌಹಾರ್ದತೆ ಹಾಳಾಗುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಯಾರೇ ಶಾಂತಿ ಸುವ್ಯವಸ್ಥೆಗೆ ಭಂಗ ತಂದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ವಲಯ ಐಜಿಪಿ ಎಚ್.ಎಸ್. ರೇವಣ್ಣ ಖಡಕ್ ಎಚ್ಚರಿಕೆ ನೀಡಿದರು.

ಗ್ರಾಮದಲ್ಲಿ ೆ. 16 ರಿಂದ ನಡೆಯಲಿರುವ ಮುಸ್ಲಿಮರ ಇಜ್ತೆಮಾ ಸ್ಥಳಕ್ಕೆ ಅಧಿಕಾರಿಗಳ ಪಡೆಯೊಂದಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಇಜ್ತೆಮಾ ನಡೆಯುವ ಕಲಾದಗಿ ಸೇರಿ ಜಿಲ್ಲೆಯ ಬಾಗಲಕೋಟೆ, ಜಮಖಂಡಿ, ಮುಧೋಳ, ಗುಳೇದಗುಡ್ಡ, ಇಳಕಲ್ಲ ಮುಂತಾದೆಡೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಇಜ್ತೆಮಾಕ್ಕೆ ಬರುವ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ಎಂಟು ಸಾವಿರಕ್ಕೂ ಅಧಿಕ ಸಂಖ್ಯೆ ಪೊಲೀಸ್ ಪಡೆ, ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಲಿದ್ದಾರೆ ಎಂದರು.

ಸಿಸಿ ಕ್ಯಾಮರಾ ಕಣ್ಗಾವಲು

ಭದ್ರತೆ ಹಿನ್ನೆಲೆಯಲ್ಲಿ ಜಿಲ್ಲೆಯ 316 ಮಸೀದಿ ಒಳಗಡೆ ಹಾಗೂ ಹೊರಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇಜ್ತೆಮಾ ನಡೆಯುವ ಸ್ಥಳದಲ್ಲಿನ ಪೆಂಡಾಲ್, ಅಡುಗೆ ಕೋಣೆ, ಊಟ ಬಡಿಸುವ ಸ್ಥಳ, ಪಾರ್ಕಿಂಗ್, ರಸ್ತೆ ಮುಂತಾದ ಕಡೆ ಸಿಸಿ ಕ್ಯಾಮರಾ ಅಳವಡಿಸಲು ಸಂಘಟಕರಿಗೆ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಕೆಲಸಗಳು ಭರದಿಂದ ನಡೆದಿವೆ ಎಂದು ಹೇಳಿದರು.

ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ

ಲೋಕಾಪುರ, ಬಾಗಲಕೋಟೆ ಹಾಗೂ ಹುಬ್ಬಳ್ಳಿ ಕಡೆಯಿಂದ ಆಗಮಿಸುವ ವಾಹನಗಳ ಪಾರ್ಕಿಂಗ್‌ಗೆ ಎ,ಬಿ,ಸಿ ಎಂದು ಮೂರು ಭಾಗಗಳಲ್ಲಿ ಆಯಾ ರಸ್ತೆಗಳ ದಿಕ್ಕಿನಲ್ಲಿಯೇ ನೂರಾರು ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ವಾಹನ ಪಾರ್ಕಿಂಗ್ ಮಾಡಿದ ಸ್ಥಳದ ಕಡೆಯೇ ಆ ಭಾಗದವರು ಕುಳಿತುಕೊಳ್ಳುವಂತೆ ಪೆಂಡಾಲ್‌ನಲ್ಲಿ ವ್ಯವಸ್ಥೆ ಮಾಡಿದೆ. ಒಟ್ಟಾರೆ ಊಟೋಪಚಾರ, ಕಾರ್ಯಕ್ರಮ ವೀಕ್ಷಣೆ ವ್ಯವಸ್ಥೆ, ಪಾರ್ಕಿಂಗ್‌ಗಳಲ್ಲಿ ಗೊಂದಲವಾಗದಂತೆ ಸಂಘಟಕರು ನೋಡಿಕೊಂಡಿದ್ದು, ಇದನ್ನು ಇಲಾಖೆ ಗಮನಿಸುತ್ತದೆ ಎಂದು ವಿವರಿಸಿದರು.
ಬಾಗಲಕೋಟೆ ಜಿಲ್ಲಾ ಎಸ್‌ಪಿ ಸಿ.ಬಿ. ರಿಷ್ಯಂತ್ ಮತ್ತಿತರಿದ್ದರು.

ಸ್ಥಳ ಪರಿಶೀಲಿಸಿದ ಐಜಿಪಿ ರೇವಣ್ಣ

ಬೆಳಗ್ಗೆ 11 ಗಂಟೆಗೆ ಗ್ರಾಮದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಉತ್ತರ ವಲಯ ಐಜಿಪಿ ಎಚ್.ಎಸ್. ರೇವಣ್ಣ ಅವರನ್ನು ಪೊಲೀಸ್ ಬ್ಯಾಂಡ್ ನುಡಿಸುವುದರೊಂದಿಗೆ ಗೌರವ ವಂದನೆ ಸಲ್ಲಿಸಿ ಸ್ವಾಗತಿಸಲಾಯಿತು.
ತದನಂತರ ಇಜ್ತೆಮಾದಲ್ಲಿ ಶಾಂತಿ ಸುವ್ಯವಸ್ಥೆ ನೋಡಿಕೊಳ್ಳಲಿರುವ ಬಾಗಲಕೋಟೆ ಎಸ್‌ಪಿ ಸೇರಿ 6 ಕ್ಕೂ ಹೆಚ್ಚು ಜಿಲ್ಲೆಗಳ ಎಸ್‌ಪಿ, ಡಿವೈಎಸ್‌ಪಿ, ಸಿಪಿಐಗಳೊಂದಿಗೆ ಸಭೆ ನಡೆಸಿದರು. ಸಭೆ ನಂತರ ಇಜ್ತೆಮಾ ಸ್ಥಳಕ್ಕೆ ತೆರಳಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ಸಂಘಟಕರಿಗೆ ಅಗತ್ಯ ಸೂಚನೆ ನೀಡಿ ಮಾಹಿತಿ ಪಡೆದರು.